ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯವೇ ಬಿಎಂಟಿಸಿ ಪ್ರಯಾಣ ದರ ಏರಿಕೆ

ಶೇ 18ರಿಂದ ಶೇ 20ರಷ್ಟು ಏರಿಕೆ ಮಾಡಲು ಪ್ರಸ್ತಾವನೆ l ಮುಖ್ಯಮಂತ್ರಿ ಒಪ್ಪಿದರಷ್ಟೇ ಹೆಚ್ಚಳ
Last Updated 25 ಫೆಬ್ರುವರಿ 2021, 22:54 IST
ಅಕ್ಷರ ಗಾತ್ರ

ಬೆಂಗಳೂರು: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ನಷ್ಟ ತುಂಬಿಕೊಳ್ಳಲು ಬಸ್‌ ಪ್ರಯಾಣ ದರ ಏರಿಸುವ ಚಿಂತನೆ ನಡೆಸಿದೆ.

ಇದಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದ್ದು, ಮುಖ್ಯಮಂತ್ರಿಯವರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬಿಎಂಟಿಸಿ ಶೇ 18 ರಿಂದ ಶೇ 20 ರಷ್ಟು ಏರಿಕೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ. ಅಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿ ಪ್ರಯಾಣಿಕರ ಮೇಲೆ ಹೊರೆ ಹಾಕುವುದಿಲ್ಲ. ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಒಪ್ಪಿಗೆ ನೀಡಿದರೆ ಅಧಿವೇಶನದ ಸಂದರ್ಭದಲ್ಲಿ ಏರಿಕೆ ಮಾಡಲಾಗುವುದು‘ ಎಂದರು.

ಇತರ ಮೂರು ನಿಗಮಗಳ ಪ್ರಯಾಣ ದರ ಏರಿಕೆ ಕಳೆದ ವರ್ಷವೇ ಮಾಡಿದ್ದರಿಂದ ಈ ವರ್ಷ ಪ್ರಸ್ತಾವನೆ ಸಲ್ಲಿಸಿಲ್ಲ. ಹೀಗಾಗಿ ಆ ಮೂರು ಸಂಸ್ಥೆಗಳ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದೂ ಸವದಿ ಹೇಳಿದರು.

ವಿದ್ಯಾರ್ಥಿಗಳ ರಿಯಾಯ್ತಿ ಬಸ್‌ಪಾಸ್‌ಗಳನ್ನು ಸೇವಾ ಸಿಂಧು ಮೂಲಕ ಇನ್ನೂ ಒಂದು ವರ್ಷ ವಿತರಿಸಲಾಗುವುದು. ಹೊಸ ಪದ್ಧತಿ ಜಾರಿಯಲ್ಲಿ ಕೆಲವು ತಾಂತ್ರಿಕ ತೊಂದರೆ ಆಗಿದೆ ಎಂದರು.

3000 ಬಸ್‌ಗಳ ಖರೀದಿ ಪ್ರಸ್ತಾಪ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ 3000 ಬಸ್‌ ಖರೀದಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರಿಗೆ ಸಂಸ್ಥೆ ಬಳಿ ಹಣ ಇಲ್ಲದ ಕಾರಣ ಸರ್ಕಾರವೇ ಖರೀದಿಸಿಕೊಡಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ ಎಂದರು.

ಬಿಎಂಟಿಸಿಗೆ 300 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಸಂಬಂಧಿಸಿದಂತೆ ಮಾರ್ಚ್‌ 6 ಕ್ಕೆ ಟೆಂಡರ್‌ ಸಲ್ಲಿಸಲು ಕೊನೆ ದಿನವಾಗಿದೆ. ಹಲವು ಸಂಸ್ಥೆಗಳು ಬಿಡ್‌ ಸಲ್ಲಿಸಿವೆ ಎಂದು ಹೇಳಿದರು.

ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಕೇಂದ್ರ ಸರ್ಕಾರ ₹55 ಲಕ್ಷ ಸಬ್ಸಿಡಿ ನೀಡುತ್ತಿದ್ದು, ಅದನ್ನು ₹1 ಕೋಟಿಗೆ ಹೆಚ್ಚಿಸುವಂತೆ ಮನವಿ ಮಾಡಲಾಗುವುದು ಎಂದೂ ಸವದಿ ತಿಳಿಸಿದರು.

ಸಾರಿಗೆ ಸಂಸ್ಥೆಗೆ ಒಟ್ಟು ₹2,780 ಕೋಟಿ ನಷ್ಟ

ಬಿಎಂಟಿಸಿ ಮತ್ತು ಇತರ ಮೂರು ಸಾರಿಗೆ ಸಂಸ್ಥೆಗಳಿಂದ ಕೋವಿಡ್‌ ಸಂದರ್ಭದಲ್ಲಿ ಒಟ್ಟು ₹2,780 ಕೋಟಿ ನಷ್ಟ ಸಂಭವಿಸಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಕೋವಿಡ್‌ ಪೂರ್ವದಲ್ಲಿ ನಷ್ಟದ ಪ್ರಮಾಣ ₹1,508 ಕೋಟಿ ಇತ್ತು. ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ಸರ್ಕಾರ ವಿದ್ಯಾರ್ಥಿ ಪಾಸ್‌ಗಳ ಬಾಕಿ ₹2,980 ಕೋಟಿ ನೀಡಬೇಕು ಎಂದು ಅವರು ಹೇಳಿದರು.‌

ಲಾಕ್‌ಡೌನ್‌ನಿಂದ ಇಲ್ಲಿಯವರೆಗೆ ಸಾರಿಗೆ ಸಂಸ್ಥೆಗಳು ಒಟ್ಟು ₹4,000 ಕೋಟಿ ಕೊರತೆ ಅನುಭವಿಸುತ್ತಿದೆ. ಇದು ನಷ್ಟ ಅಲ್ಲ, ನಷ್ಟ ₹2,780 ಕೋಟಿ. ಕೋವಿಡ್‌ ಸಂದರ್ಭದಲ್ಲಿ ಆದಾಯ ಸಂಪೂರ್ಣ ನಿಂತು ಹೋಗಿದ್ದರೂ ಸಿಬ್ಬಂದಿಗೆ ಸಂಬಳ ನಿಲ್ಲಿಸಲಿಲ್ಲ. ಸರ್ಕಾರದಿಂದ ₹1,780 ಕೋಟಿ ಪಡೆದು 1.30 ಲಕ್ಷ ಸಿಬ್ಬಂದಿಗೆ ಸಂಬಳ ವಿತರಣೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಬಿಎಂಟಿಸಿ ಸಿಬ್ಬಂದಿಗೆ ಸಂಬಳ ಕೊಡಲು ಸರ್ಕಾರದಿಂದ ₹80 ಕೋಟಿ ಪಡೆಯಲಾಯಿತು. ಅಲ್ಲದೆ, ವೇತನ, ಬಿಡಿಭಾಗಗಳು, ನಿವೃತ್ತಿ ಸೌಲಭ್ಯಗಳನ್ನು ಕೊಡಲು ₹780 ಕೋಟಿ ಅಗತ್ಯವಿತ್ತು. ಅದಕ್ಕಾಗಿ ಬ್ಯಾಂಕ್‌ನಿಂದ ₹566 ಕೋಟಿ ಸಾಲ ಪಡೆಯಲಾಯಿತು ಎಂದು ಸವದಿ ಹೇಳಿದರು.

ಕೆಎಸ್‌ಆರ್‌ಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ಬಸ್ಸುಗಳಿಗೆ ಶೇ 85 ರಷ್ಟು ಮತ್ತು ಬಿಎಂಟಿಸಿಗೆ ಶೇ 60 ರಷ್ಟು ಪ್ರಯಾಣಿಕರು ಬರಲಾರಂಭಿಸಿದ್ದಾರೆ. ಕೋವಿಡ್‌ ಎರಡನೇ ಅಲೆ ಬಾಧಿಸದೇ ಇದ್ದರೆ, ಇನ್ನು ಎರಡು ತಿಂಗಳಲ್ಲಿ ಕೋವಿಡ್‌ ಪೂರ್ವದ ಸಹಜ ಸ್ಥಿತಿಗೆ ತಲುಪಲಿದೆ ಎಂದರು.

ಡಿಸೇಲ್‌ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆಗೆ ಹೆಚ್ಚಿನ ಹೊರೆ ಆಗಿಲ್ಲ. ತೈಲ ಕಂಪನಿ ಜತೆ ಡಿಸೇಲ್‌ ಪೂರೈಕೆಗೆ ಒಪ್ಪಂದದ ಪ್ರಕಾರ ಮಾರುಕಟ್ಟೆ ದರಕ್ಕಿಂತ ₹3.20 ಕಡಿಮೆ ಬೆಲೆಗೆ ಪೂರೈಸುತ್ತಿವೆ ಎಂದು ಸವದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT