ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KPSC | ಗೆಜೆಟೆಡ್‌ ಪ್ರೊಬೇಷನರಿ: 39 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ

Last Updated 12 ಏಪ್ರಿಲ್ 2022, 10:23 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ 2011ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಗ್ರೂಪ್‌ ಎ ವೃಂದದ ಕಾರ್ಯನಿರ್ವಾಹಕ ಅಧಿಕಾರಿ/ ಸಹಾಯಕ ಹುದ್ದೆಗೆ ಆಯ್ಕೆಯಾದ 39 ಮಂದಿಗೆ ನೇಮಕಾತಿ ಆದೇಶ ನೀಡಿದೆ.

2011 ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪಟ್ಟಿಯನ್ನು ಕಾನೂನುಬದ್ಧಗೊಳಿಸಲು ಕರ್ನಾಟಕ ಸಿವಿಲ್‌ ಸೇವೆಗಳ (2011 ನೇ ಸಾಲಿನ ಗೆಜಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಮಸೂದೆ 2022 ಅನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು. ಇದಕ್ಕೆ ರಾಜ್ಯಪಾಲರ ಒಪ್ಪಿಗೆಯನ್ನು ಪಡೆದು ವಿಶೇಷ ರಾಜ್ಯಪಾಲರ ಪತ್ರದಲ್ಲಿ ಪ್ರಕಟಿಸಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ನೇಮಕಾತಿ ಆದೇಶ ನೀಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.

ಹೈಕೋರ್ಟ್‌ನಲ್ಲಿ ಬಾಧಿತ ಅಭ್ಯರ್ಥಿಗಳ ತಕರಾರು ಅರ್ಜಿಗಳು ಸೇರ್ಪಡೆಗೊಳ್ಳುತ್ತಲೇ ಇದೆ. ವಿಚಾರಣೆ ಆಖೈರುಗೊಳಿಸಿ, ತೀರ್ಪು ನೀಡದೇ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಿರುವುದು ಈಗ ಚರ್ಚೆಗೆ ಕಾರಣವಾಗಿದೆ.

ನೇಮಕಾತಿಯನ್ನು ಸಕ್ರಮಗೊಳಿಸಲು ರೂಪಿಸಿರುವ ಕಾಯ್ದೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ದಾಖಲಾಗುವ ಅರ್ಜಿಗಳ ಕುರಿತಂತೆ ಹೊರಬರುವ ಆದೇಶ ಮತ್ತು ತೀರ್ಪುಗಳ ವ್ಯಾಪ್ತಿಗೆ ಒಳಪಡುವ ಷರತ್ತಿನ ಮೇಲೆ ನೇಮಕಾತಿ ಆದೇಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT