ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ನ.12ರ ವೇಳೆಗೆ ರಾಜ್ಯದಲ್ಲಿ 10 ಲಕ್ಷ ಪ್ರಕರಣ?

‘ಜೀವನ್ ರಕ್ಷಾ’ ಯೋಜನೆಯಡಿ ಪ್ರಾಕ್ಸಿಮಾ ಸಂಸ್ಥೆ ಅಧ್ಯಯನ l ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಲು ಸಲಹೆ
Last Updated 18 ಅಕ್ಟೋಬರ್ 2020, 21:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನ.12ರ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಲಿದೆ. ಮೃತರ ಸಂಖ್ಯೆ 12,800ಕ್ಕೆ ತಲುಪಲಿದೆ ಎಂದು ತಜ್ಞರು ನಡೆಸಿದ ಅಧ್ಯಯನದಲ್ಲಿ ಅಂದಾಜು ಮಾಡಲಾಗಿದೆ.

ರಾಜ್ಯದಲ್ಲಿ ಮಾ. 8ರಂದು ಮೊದಲ ಕೋವಿಡ್ ಪ್ರಕರಣ ವರದಿಯಾಗಿತ್ತು. ಎಂಟು ತಿಂಗಳು ಕಳೆಯುವ ಮುನ್ನವೇ ಸೋಂಕಿತರ ಸಂಖ್ಯೆ 7.58 ಲಕ್ಷಕ್ಕೆ (ಅ.17) ತಲುಪಿದೆ. ಅದೇ ರೀತಿ, ಮೃತರ ಸಂಖ್ಯೆ 10,500ರ ಗಡಿ ದಾಟಿದೆ.

ಸದ್ಯ ರಾಜ್ಯದಲ್ಲಿ ಶೇ 11.56 ರಷ್ಟು ಸೋಂಕು ದೃಢ ಪ್ರಮಾಣವಿದೆ. ಇದರ ಅನುಸಾರ ಸರ್ಕಾರೇತರ ಸಂಸ್ಥೆಯಾದ ಪ್ರಾಕ್ಸಿಮಾ ‘ಜೀವನ್ ರಕ್ಷಾ’ ಯೋಜನೆಯಡಿ ಅಧ್ಯಯನ ನಡೆಸಿದ್ದು, ಸೋಂಕು ಹಾಗೂ ಮರಣ ಪ್ರಕರಣಗಳ ಏರಿಕೆಯನ್ನು ಅಂದಾಜು ಮಾಡಿದೆ.

ಸಂಸ್ಥೆಯು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಹಾಗೂ ಭಾರತೀಯ ವೈದ್ಯಕೀಯ ಸಂಘದ ನೆರವು ಪಡೆದು ಸಂಸ್ಥೆ ಅಧ್ಯಯನ ನಡೆಸಿದೆ. ಆಗಸ್ಟ್ 15ರ ವೇಳೆಗೆ ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 2,19,926ಕ್ಕೆ ತಲುಪಿತ್ತು. ಸೆಪ್ಟೆಂಬರ್ 12ರ ವೇಳೆಗೆ ದುಪ್ಪಟ್ಟಾಗಿ 4,40,411ಕ್ಕೆ ಏರಿಕೆಯಾಗಿತ್ತು. ಅಕ್ಟೋಬರ್ 12ರ ವೇಳೆಗೆ ಈ ಸಂಖ್ಯೆ 7,17,915ಕ್ಕೆ ತಲುಪಿತ್ತು. ಹೀಗಾಗಿ, ನ.12ಕ್ಕೆ ಕೋವಿಡ್‌ ಪ್ರಕರಣಗಳು 10 ಲಕ್ಷದ
ಗಡಿ ದಾಟಲಿದೆ ಎಂದು ಸಂಸ್ಥೆ ಅಂದಾಜಿಸಿದೆ. ಇದೇ ರೀತಿ, ಆಗಸ್ಟ್‌ 15ರಂದು 3,931 ಇದ್ದ ಮೃತರ ಸಂಖ್ಯೆ ಬಳಿಕ ಏರಿಕೆ ಕಂಡು, ಅ. 12ಕ್ಕೆ 10 ಸಾವಿರದ ಗಡಿ ದಾಟಿತ್ತು. ಇದರ ಅನುಸಾರವೇ ಮರಣ ಪ್ರಕರಣಗಳನ್ನು ಸಂಸ್ಥೆ ಲೆಕ್ಕ ಹಾಕಿದೆ.

ಮೂಲಸೌಕರ್ಯ ಅಗತ್ಯ: ಜೀವನ್ ರಕ್ಷಾ ಯೋಜನೆಯ ಸಂಚಾಲಕ ಮೈಸೂರು ಸಂಜೀವ್, ‘ಕೋವಿಡ್‌ ನಿಯಂತ್ರಣದಲ್ಲಿ ಪರೀಕ್ಷೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಉಳಿದ, ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಸೋಂಕು ದೃಢ ಪ್ರಮಾಣ ಅಧಿಕವಿದೆ. ಪ್ರಕರಣಗಳು ಇನ್ನಷ್ಟು ಏರುಗತಿ ಪಡೆಯುವ ಸಾಧ್ಯತೆಯಿದ್ದು, ಆಸ್ಪತ್ರೆಗಳಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಬೇಕಾಗಿದೆ’ ಎಂದಿದ್ದಾರೆ.

‘ಮುಂದಿನ ಮೂರರಿಂದ ಆರು ವಾರಗಳಲ್ಲಿ 22,500 ಆಮ್ಲಜನಕ ಹಾಸಿಗೆಗಳು, 16,800 ಐಸಿಯು ಹಾಸಿಗೆಗಳು ಹಾಗೂ 11,200 ವೆಂಟಿಲೇಟರ್‌ಗಳು ಬೇಕಾಗಬಹುದು. ಲಭ್ಯವಿರುವ ಸಂಪನ್ಮೂಲಗಳನ್ನು ಪರಿಶೀಲಿಸಿ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದ್ದಾರೆ.

ಚಿಕಿತ್ಸೆ ನೆಪದಲ್ಲಿ ಕಿರುಕುಳ

‘ಚಿಕಿತ್ಸೆ ನೀಡುವ ನೆಪದಲ್ಲಿ ಆಸ್ಪತ್ರೆಯೊಂದರ ಪುರುಷ ಸಿಬ್ಬಂದಿ ರಾಮಕೃಷ್ಣ ಎಂಬುವರು ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ಯುವತಿಯೊಬ್ಬರು ಸುಬ್ರಹ್ಮಣ್ಯಪುರ ಠಾಣೆಗೆ ದೂರು ನೀಡಿದ್ದಾರೆ.

‘ಕಾಲುನೋವಿನಿಂದ ಬಳಲುತ್ತಿದ್ದ ಯುವತಿಯನ್ನು ಶನಿವಾರ ತಡರಾತ್ರಿ ಕನಕಪುರ ರಸ್ತೆಯಲ್ಲಿರುವ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ರಾತ್ರಿ ವೈದ್ಯರು ಇಲ್ಲದಿದ್ದರಿಂದ ರಾಮಕೃಷ್ಣ ಅವರೇ ಚಿಕಿತ್ಸೆ ನೀಡಲು ಹೋಗಿದ್ದರು. ಅದೇ ವೇಳೆಯೇ ಯುವತಿಯ ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೂರು ನೀಡಿದ ಬಳಿಕ ಯುವತಿ, ತಮಗಾದ ನೋವಿನ ಬಗ್ಗೆ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ
ಹರಿಬಿಟ್ಟಿದ್ದಾರೆ. ಆಸ್ಪತ್ರೆಗೆ ಹೋಗುವ ಮುನ್ನ ಯುವತಿಯರು ಎಚ್ಚರಿಕೆಯಿಂದ ಇರುವಂತೆಯೂ ಕೋರಿದ್ದಾರೆ.

‘ಕೋವಿಡ್‌ ಕರ್ತವ್ಯದ ಜೊತೆಗೆ ಚುನಾವಣಾ ಕಾರ್ಯಕ್ಕೂ ನಿಯೋಜನೆ’

‘ಕೋವಿಡ್‌ ಕರ್ತವ್ಯದ ಜೊತೆಗೆ, ಈಗ ಚುನಾವಣಾ ಕರ್ತವ್ಯಕ್ಕೂ ನಿಯೋಜಿಸುತ್ತಿದ್ದಾರೆ. ಮಾನಸಿಕವಾಗಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದೇವೆ’ ಎಂದು ಹಲವು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

‘ಮೇ 5ರಿಂದ 22ರವರೆಗೆ ಕೋವಿಡ್‌ ಕರ್ತವ್ಯಕ್ಕೆ ನಿಯೋಜಿಸಿದ್ದರು. ಅದನ್ನು ನಿರ್ವಹಿಸಿದ್ದೇವೆ. ಆ.10ರಿಂದ ಮತ್ತೆ ಕೋವಿಡ್‌ ಆರೋಗ್ಯ ಸಮೀಕ್ಷಾ ಕಾರ್ಯ ಮಾಡುತ್ತಿದ್ದೇವೆ. ಈಗ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಅ.19ರಂದು ತರಬೇತಿಗೆ ಹಾಜರಾಗುವಂತೆ ಅಧಿಕಾರಿಗಳು ಸಂದೇಶ ಕಳಿಸಿದ್ದಾರೆ’ ಎಂದು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯೊಬ್ಬರು ಹೇಳಿದರು.

‘ಕೆಲವು ಶಿಕ್ಷಕರನ್ನು ಕೋವಿಡ್‌ ಕರ್ತವ್ಯಕ್ಕೆ, ಕೆಲವರನ್ನು ವಿದ್ಯಾಗಮ ಕಾರ್ಯಕ್ರಮದ ಅಡಿ ಬೋಧನಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಈಗ ವಿದ್ಯಾಗಮ ಕಾರ್ಯಕ್ರಮ ಸ್ಥಗಿತಗೊಂಡಿದೆ. ಈ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಬಹುದಿತ್ತು. ಆದರೆ, ಕೋವಿಡ್‌ ಕರ್ತವ್ಯದಲ್ಲಿರುವವರನ್ನೇ ಚುನಾವಣಾ ಕಾರ್ಯಕ್ಕೂ ಬಳಸಿಕೊಳ್ಳಲಾಗುತ್ತಿದೆ’ ಎಂದು ಅವರು ಹೇಳಿದರು.

‘ಬಿಬಿಎಂಪಿಯಿಂದ ಆದೇಶ ಬಂದಿದೆ. ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಬೇರೆ ಶಿಕ್ಷಕರನ್ನು ಅಥವಾ ಬೇರೆ ಇಲಾಖೆಯ ನೌಕರರನ್ನು ಚುನಾವಣಾ ಕಾರ್ಯಕ್ಕೆ ಪರಿಗಣಿಸಬೇಕು’ ಎಂದು ಮತ್ತೊಬ್ಬ ಶಿಕ್ಷಕರು ಒತ್ತಾಯಿಸಿದರು.

‘ಸರ್ಕಾರ ಆದೇಶಿಸಿದ ಮೇಲೆ, ಶಿಕ್ಷಕರು ಚುನಾವಣಾ ಕಾರ್ಯವನ್ನು ಮಾಡಲೇಬೇಕಾಗುತ್ತದೆ. ಹಾಜರಾಗದಿದ್ದರೆ ನಿಯಮದಂತೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ, ಕೋವಿಡ್‌ ಕರ್ತವ್ಯದಲ್ಲಿರುವವರನ್ನು ಚುನಾವಣಾ ಕಾರ್ಯಕ್ಕೆ ಕರೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯರಂಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವವರಿಗೆ ಕೋವಿಡ್‌ ಕರ್ತವ್ಯದಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT