ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿಯರು ದೂರವಾಗಿದ್ದಕ್ಕೆ ವಿಧಾನಸೌಧಕ್ಕೆ ಬಾಂಬ್ ಬೆದರಿಕೆ: ಟೆಕ್ಕಿ ಬಂಧನ

Last Updated 9 ಅಕ್ಟೋಬರ್ 2022, 4:18 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿ ಕರೆ ಮಾಡಿ ಬೆದರಿಸಿದ್ದ ಆರೋಪದಡಿ ಪ್ರಶಾಂತ್ (40) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

‘ಹೊಸಪೇಟೆಯ ಪ್ರಶಾಂತ್, ನಗರದ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಹೆಬ್ಬಗೋಡಿಯಲ್ಲಿ ವಾಸವಿದ್ದ. ಈತ, ಎರಡು ಮದುವೆಯಾಗಿದ್ದ. ಇಬ್ಬರೂ ಪತ್ನಿಯರು ವಿಚ್ಛೇದನ ನೀಡಿ ದೂರವಾಗಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಪ್ರಶಾಂತ್, ವಿಧಾನಸೌಧಕ್ಕೆ ಕರೆ ಮಾಡಿ ಬಾಂಬ್ ಬೆದರಿಕೆಯೊಡ್ಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಿಧಾನಸೌಧದ ಮುಖ್ಯ ಕಾರ್ಯದರ್ಶಿ ಕಚೇರಿ ದೂರವಾಣಿ ಸಂಖ್ಯೆಯನ್ನು ಗೂಗಲ್‌ ಜಾಲತಾಣದ ಮೂಲಕ ತಿಳಿದುಕೊಂಡಿದ್ದ ಆರೋಪಿ, ಅದೇ ಸಂಖ್ಯೆಗೆ ಶುಕ್ರವಾರ (ಅ. 7) ಮೂರು ಬಾರಿ ಕರೆ ಮಾಡಿದ್ದ. ‘ವಿಧಾನಸೌಧದಲ್ಲಿ ಬಾಂಬ್ ಇರಿಸಿದ್ದೇನೆ. ಸದ್ಯದಲ್ಲೇ ಸ್ಫೋಟವಾಗಲಿದೆ’ ಎಂದಿದ್ದ. ಗಾಬರಿಗೊಂಡ ಕಚೇರಿ ಸಿಬ್ಬಂದಿ, ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಮೊಬೈಲ್ ಸಂಖ್ಯೆ ಆಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರ ತಂಡ, ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಪ್ರಶಾಂತ್‌ನನ್ನು ಬಂಧಿಸಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಮೂಲಗಳು ಹೇಳಿವೆ.

ಕೆಲಸ ಬಿಟ್ಟಿದ್ದ ಆರೋಪಿ: ‘ಮೊದಲ ಮದುವೆಯ ನಂತರ ಪ್ರಶಾಂತ್ ಪತ್ನಿ ಜೊತೆಗೆ ಜಗಳ ಮಾಡುತ್ತಿದ್ದ. ಹೀಗಾಗಿ, ಮೊದಲ ಪತ್ನಿ ವಿಚ್ಛೇದನ ನೀಡಿದ್ದರು. ಬಳಿಕ ಆರೋಪಿ, ಮತ್ತೊಂದು ಮದುವೆಯಾಗಿದ್ದ. ಎರಡನೇ ಪತ್ನಿಯೂ ಈತನ ಕಿರುಕುಳದಿಂದ ಬೇಸತ್ತು ವಿಚ್ಛೇದನ ನೀಡಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಕುಟುಂಬದವರೂ ಪ್ರಶಾಂತ್‌ನನ್ನು ದೂರ ಇಟ್ಟಿದ್ದರು. ಇದರ ನಡುವೆಯೇ ಆರೋಪಿ, ಏಳು ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ. ಒಂಟಿಯಾಗಿದ್ದ ಪ್ರಶಾಂತ್, ಮಾನಸಿಕ ಸಮಸ್ಯೆಗೆ ತುತ್ತಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT