ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅವಿವೇಕ' ಎಂದು ವಿವೇಕಾನಂದರಿಗೆ ಅಪಮಾನ: ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ಆಕ್ರೋಶ

Last Updated 15 ನವೆಂಬರ್ 2022, 14:43 IST
ಅಕ್ಷರ ಗಾತ್ರ

ಶಿವಮೊಗ್ಗ: ಸರ್ಕಾರದ 'ವಿವೇಕ' ಯೋಜನೆಯನ್ಬು ಅವಿವೇಕ ಎನ್ನುವ ಮೂಲಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ವಾಮಿ ವಿವೇಕಾನಂದರನ್ನು ಅಪಮಾನಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಮಂಗಳವಾರ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿವೇಕ ಅಂದರೆ ಜ್ಞಾನ. ಆ ಹೆಸರಿನಲ್ಲಿಯೇ ಸರ್ಕಾರಿ ಶಾಲೆಗಳಲ್ಲಿ ₹8000 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ ಒದಗಿಸುವ ಕ್ರಾಂತಿಕಾರಿ ಹೆಜ್ಜೆಯನ್ನು ಸರ್ಕಾರ ಇಟ್ಟಿದೆ. ಅದನ್ನು ಸಹಿಸಲಾಗದೇ ಸಿದ್ದರಾಮಯ್ಯ ಹೀಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಅವರು ರಾಜ್ಯದ ಜನರ ಬಳಿ ಬೇಡ, ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿಸಿಬಿಡಲಿ ಎಂಬುದಾಗಿ ವ್ಯಂಗ್ಯ ಮಾಡಿದರು.

ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಹಿಂದುಳಿದ ವರ್ಗದ ಯಾವುದೇ ನಾಯಕರನ್ನು ಬೆಳೆಯಲು ಬಿಡದೇ ಚೂರು ಚೂರು ಮಾಡಿದರು. ಹಿಂದುಳಿದವರ ಹೃದಯ ಸಾಮ್ರಾಟರು ಅಂದರೆ ಅದು ರಾಜ್ಯದಲ್ಲಿ ದೇವರಾಜ ಅರಸು ಹಾಗೂ ಅವರ ಹಾದಿಯಲ್ಲಿ ನಡೆದು ಬಂದ ಎಸ್. ಬಂಗಾರಪ್ಪ ಮಾತ್ರ. ಆದರೆ ಕೆಲವರು ತಾನೇ ನಾಯಕ ಎಂದು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ ಎಂದು ಛೇಡಿಸಿದರು.

ದಂಡಾವತಿ ನೀರಾವರಿ ಯೋಜನೆಯನ್ನು ಆಂಧ್ರಪ್ರದೇಶದ ತಕರಾರಿನ ಕಾರಣ ಈ ಮೊದಲು ಸಂಪೂರ್ಣ ಸೊರಬ ತಾಲ್ಲೂಕಿಗೆ ವಿಸ್ತರಿಸಲು ಆಗಿರಲಿಲ್ಲ. ಶಾಸಕ ಕುಮಾರ್ ಬಂಗಾರಪ್ಪ ಮನವಿ ಮೇರೆಗೆ ಈಗ ಬೇರೆ ರೂಪದಲ್ಲಿ ಯೋಜಬೆ ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ರೈಲ್ವೆ ಯೋಜನೆಯನ್ನು ತಾಳಗುಪ್ಪದಿಂದ ಮುಂದೆ ವಿಸ್ತರಣೆಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT