ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟಿಷರಿಂದ ಕನ್ನಡಿಗರ ಕನಸು ಮಲಿನ: ಸಾಹಿತಿ ಚಂದ್ರಶೇಖರ ಕಂಬಾರ

Last Updated 15 ಫೆಬ್ರುವರಿ 2021, 21:20 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ರಿಟಿಷರು ಬಿಟ್ಟಿರುವ ಕನಸುಗಳನ್ನು ನನಸು ಮಾಡುವಂತಹ ವಿಶ್ವವಿದ್ಯಾಲಯಗಳು ಬೇಡ. ವಿದ್ಯಾರ್ಥಿಗಳಲ್ಲಿ ಕನ್ನಡದ ಸೃಜನಶೀಲತೆ ಸೃಷ್ಟಿಸುವ ವಿಶ್ವವಿದ್ಯಾಲಯಗಳು ಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಚಂದ್ರಶೇಖರ ಕಂಬಾರ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮಹಿಳಾ ಸಾಹಿತ್ಯ ಸಂಪುಟ’ ಹಾಗೂ ‘ಕನ್ನಡ ಜಾನಪದ ವಿಶ್ವಕೋಶ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಕನ್ನಡಿಗರ ಸೃಜನಶೀಲತೆ ಮತ್ತು ಕನಸುಗಳನ್ನುಬ್ರಿಟಿಷರು ಮಲಿನಗೊಳಿಸಿದ್ದಾರೆ.ಮಕ್ಕಳಿಗೆ ಇಂಗ್ಲಿಷ್ ಕಥೆ ಹೇಳಿದರೆ, ಯಥಾವತ್ತಾಗಿ ಕಂಠಪಾಠ ಮಾಡಿಬಿಡುತ್ತಾರೆ. ಎಷ್ಟು ಬಾರಿ ಕೇಳಿದರೂ ಅದರಲ್ಲಿ ಬದಲಾವಣೆ ಇರುವುದಿಲ್ಲ. ಆದರೆ, ಕನ್ನಡದ ಕಥೆ ಆಲಿಸಿದ ಮಗುವು ವ್ಯಕ್ತಿ ಮತ್ತು ಸಂದರ್ಭಕ್ಕೆ ತಕ್ಕಂತೆ ಹಾಗೂ ಹೊಸ ಆಯಾಮದೊಂದಿಗೆ ಕಥೆ ಹೇಳುತ್ತದೆ. ಇದೇ ಕನ್ನಡದ ಸೃಜನಶೀಲತೆ’ ಎಂದು ವಿವರಿಸಿದರು.

‘ಕನ್ನಡ ಭಾಷೆ, ಅದರ ಇತಿಹಾಸಕ್ಕೆ ದೊಡ್ಡ ಪರಂಪರೆಯಿದೆ. ಸಾಹಿತ್ಯದ ಮುಖ್ಯ ಪ್ರಕಾರವೇ ಕಥೆ. ಇದು, ನಮ್ಮ ಸೃಜಶೀಲತೆಯನ್ನು ಹೆಚ್ಚಿಸುತ್ತದೆ. ಇದನ್ನು ನಾವು ಉಳಿಸಿ, ಬೆಳೆಸಬೇಕು.ಇಂಗ್ಲಿಷ್ ಇಲ್ಲದೆ ಬದುಕೇ ಇಲ್ಲ ಎಂದು ನಮ್ಮ ಕನಸುಗಳನ್ನು ಕೊಲ್ಲದಿರಿ’ ಎಂದು ಕಿವಿಮಾತು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್,‘ನಾವು ಪ್ರಕಟಿಸಿದ ‘ಮಹಿಳಾ ಸಾಹಿತ್ಯ ಸಂಪುಟ’ದ ಜವಾಬ್ದಾರಿಯನ್ನು ಮಹಿಳೆಯರು ಹೊತ್ತಿದ್ದರು. ಕೆಲವರು ಗಡುವಿಗೂ ಮುನ್ನ ಲೇಖನಗಳನ್ನು ಕಳುಹಿಸಿ,ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು.ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ಕೊಟ್ಟರೆ, ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT