ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಆಯ್ಕೆ: ಜೆರಾಕ್ಸ್‌ ಪ್ರತಿ ಕೊಟ್ಟ ಭೂಪರು

230 ಪ್ರಕಾಶಕರಿಗೆ ನೋಟಿಸ್: ನ.2ರೊಳಗೆ ಮೂಲಪ್ರತಿ ಸಲ್ಲಿಕೆಗೆ ಸೂಚನೆ
Last Updated 28 ಅಕ್ಟೋಬರ್ 2020, 19:48 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯು 2018ನೇ ಸಾಲಿನ ಪುಸ್ತಕ ಆಯ್ಕೆ ಪ್ರಕ್ರಿಯೆ ನಡೆಸುವಾಗ ಸಾವಿರಾರು ಸಂಖ್ಯೆಯಲ್ಲಿ ಜೆರಾಕ್ಸ್‌ ಪ್ರತಿಗಳು ಪತ್ತೆಯಾಗಿವೆ. ಇದಕ್ಕೆ ಸಂಬಂಧಿಸಿದಂತೆ 230 ಪ್ರಕಾಶಕರಿಗೆ ಇಲಾಖೆ ನೋಟಿಸ್ ಜಾರಿಮಾಡಿದೆ.

ಖರೀದಿಗಾಗಿ ಪುಸ್ತಕಗಳ ಆಯ್ಕೆ ಪ್ರಕ್ರಿಯೆಗೆ ವಾಮಮಾರ್ಗ ಹುಡುಕಿರುವ ಕೆಲವರು ಜೆರಾಕ್ಸ್‌ ಪ್ರತಿಗಳು ಹಾಗೂ ಹಳೆಯ ಪುಸ್ತಕಗಳ ಹೊಸ ಮುದ್ರಣವನ್ನು ಸಲ್ಲಿಸುತ್ತಿದ್ದಾರೆ ಎಂಬ ಬಗ್ಗೆ ‘ಪ್ರಜಾವಾಣಿ’ ವಿಶೇಷ ವರದಿ ಮಾಡಿತ್ತು. ಪ್ರಕಾಶನದ ಹೆಸರಿನಲ್ಲಿ ನಡೆಯುವ ಅಕ್ರಮದ ಬಗ್ಗೆ ಕೆಲವು ಪ್ರಕಾಶಕರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.

ಕವಿ ದೊಡ್ಡರಂಗೇಗೌಡ ನೇತೃತ್ವದ ಆಯ್ಕೆ ಸಮಿತಿಯು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪುಸ್ತಕದ ಆಯ್ಕೆ ಪ್ರಕ್ರಿಯೆ
ಯನ್ನು ಇತ್ತೀಚೆಗೆ ನಡೆಸಿದೆ. ವಿವಿಧ ಪ್ರಕಾಶಕರು ಪ್ರಕಟಿಸಿರುವ 7 ಸಾವಿರಕ್ಕೂ ಅಧಿಕ ಶೀರ್ಷಿಕೆಗಳು ಆಯ್ಕೆಗೆ ಬಂದಿದ್ದವು. ಪುಸ್ತಕಗಳಿಗೆ ಬಳಸಲಾದ ಕಾಗದದ ಗುಣಮಟ್ಟ, ಅವುಗಳ ಗಾತ್ರ, ಮುಖಪುಟದ ವಿನ್ಯಾಸವನ್ನು ಆಧರಿಸಿ ಸಮಿತಿಯಲ್ಲಿನ ಪರಿಣಿತರು ನಕಲು ಪ್ರತಿಗಳನ್ನು ಗುರುತಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 500 ಪ್ರಕಾಶನ ಸಂಸ್ಥೆಗಳಿವೆ. ಪ್ರತಿ ವರ್ಷ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಇಲಾಖೆಯು ಆಯ್ಕೆಯಾದ ಪ್ರತಿ ಶೀರ್ಷಿಕೆಯ 300 ಪ್ರತಿಗಳನ್ನು ಖರೀದಿಸಲಿದೆ. ಇದಕ್ಕಾಗಿ ಇಲಾಖೆಯು ಪ್ರತಿವರ್ಷ ₹ 15 ಕೋಟಿ ವೆಚ್ಚ ಮಾಡುತ್ತಿದೆ.

‘ಕೆಲವರು ಹಳೆಯ ಪುಸ್ತಕಗಳಿಗೆ ಹೊಸ ಶೀರ್ಷಿಕೆ ನೀಡಿ, ಪುಸ್ತಕ ಆಯ್ಕೆಗೆ ಪ್ರತಿಗಳನ್ನು ಕಳಿಸುತ್ತಿದ್ದಾರೆ. ಇನ್ನೂ ಕೆಲವರು ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸುತ್ತಿದ್ದಾರೆ. ಇದರಿಂದ ಸಾವಿರಾರು ಪ್ರತಿಗಳನ್ನು ಮುದ್ರಿಸಿ, ನಿಯಮಗಳನ್ನು ಪಾಲಿಸುವವರಿಗೆ ಅನ್ಯಾಯ
ವಾಗುತ್ತಿದೆ. ನಕಲು ಪ್ರತಿಗಳನ್ನು ಪತ್ತೆ ಮಾಡಲು ಸೂಕ್ತ ವಿಧಾನವನ್ನು ಅಳವಡಿಸಿಕೊಂಡಿಲ್ಲ’ ಎಂದು ಪ್ರಕಾಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾರದರ್ಶಕತೆಗೆ ಕ್ರಮ: ‘ಜೆರಾಕ್ಸ್‌ ಪ್ರತಿಗಳನ್ನು ತಡೆಯುವ ನಿಟ್ಟಿನಲ್ಲಿ ಇನ್ನುಮುಂದೆ ಆಯ್ಕೆಗೆ 5 ಪ್ರತಿಗಳನ್ನು ಸಲ್ಲಿಸುವಾಗಲೇ ಸಾವಿರ ಪ್ರತಿಗಳನ್ನು ಸಿದ್ಧಪಡಿಸಿಕೊಂಡಿರಬೇಕೆಂದು ಸೂಚಿಸಲು ನಿರ್ಧರಿಸಿದ್ದೇವೆ’ ಎಂದು ದೊಡ್ಡರಂಗೇಗೌಡ ತಿಳಿಸಿದರು.

‘ಕೆಲವರು ಬೇಡಿಕೆ ಅನುಸಾರ ಮುದ್ರಣ ಎಂಬ ಪರಿಕಲ್ಪನೆ ಅನುಸರಿಸಿ, ನಿಗದಿತ ಪ್ರತಿಗಳನ್ನು ಮಾತ್ರ ಇಲಾಖೆಗೆ ಕಳಿಸುತ್ತಾರೆ. ಇನ್ನೂ ಕೆಲವರು ಜೆರಾಕ್ಸ್ ಪ್ರತಿಗಳನ್ನು ನೀಡುತ್ತಾರೆ. ಅವುಗಳನ್ನು ಪುಸ್ತಕದ ಗಾತ್ರದಿಂದ ಪತ್ತೆ ಮಾಡಬೇಕಾದ ಪರಿಸ್ಥಿತಿ ಇದೆ’ ಎಂದು ಆಯ್ಕೆ ಸಮಿತಿಯ ಸದಸ್ಯ ಕರ್ನಾಟಕ ಪ್ರಕಾಶಕ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ ಬೇಸರ ವ್ಯಕ್ತಪಡಿಸಿದರು.

‘ಆಯ್ಕೆ ಸಮಿತಿಯ ಅಭಿಪ್ರಾಯದ ಅನುಸಾರ ಕೆಲವರಿಗೆ ನೋಟಿಸ್ ನೀಡಲಾಗಿದೆ. ನ.2ರೊಳಗೆ ಮೂಲಪ್ರತಿ ಸಲ್ಲಿಸುವಂತೆ ಸೂಚಿಸಿದ್ದೇವೆ. ಅದನ್ನು ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಗುವುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT