ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿವಾದ: ಸರ್ವಪಕ್ಷ ಸಭೆ ಶೀಘ್ರ -ಬಸವರಾಜ ಬೊಮ್ಮಾಯಿ

Last Updated 24 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಗಡಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಸಬೇಕಾದ ಕಾನೂನು ಹೋರಾಟ ಹಾಗೂ ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳುವ ಮಹಾರಾಷ್ಟ್ರದ ಇಂಗಿತ ಸೇರಿದಂತೆ ಎಲ್ಲ ವಿಷಯವನ್ನೂ ಚರ್ಚಿಸಲು ಮುಂದಿನ ವಾರ ಸರ್ವಪಕ್ಷಗಳ ಸಭೆ ಕರೆಯಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಸಭೆ ನಡೆಸಿರುವುದು ಹಾಗೂ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಬಗ್ಗೆ ಚಿಂತನೆ ಇದೆ ಎಂದು ಹೇಳಿರುವುದು ಗಮನಕ್ಕೆ ಬಂದಿದೆ. ಸರ್ವಪಕ್ಷಗಳ ಸಭೆಯಲ್ಲಿ ಎಲ್ಲ ನಾಯಕರ ಜತೆ ಸಮಾಲೋಚನೆ ನಡೆಸಿ, ರಾಜ್ಯದ ಹಿತಕ್ಕೆ ಪೂರಕವಾದ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಮಹಾರಾಷ್ಟ್ರ ಗಡಿ ವಿವಾದವೇ ಮುಗಿದು ಹೋಗಿದೆ. ಗ್ರಾಮ ಪಂಚಾಯತಿಗಳ ನಿರ್ಣಯ ಹಾಗೂ ಪೂರಕ ವರದಿಗಳೆಲ್ಲವೂ ಕರ್ನಾಟಕದ ಪರವಾಗಿಯೇ ಇವೆ. ಹಾಗಿದ್ದರೂ, ಆ ರಾಜ್ಯದವರು ಮತ್ತೆ ವಿವಾದ ಎಬ್ಬಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಚರ್ಚೆಯಾಗಲಿದೆ ಎಂದರು.

‘ಕರ್ನಾಟಕದ ಪರವಾಗಿ ವಾದ ಮಂಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ನಮ್ಮ ವಾದಕ್ಕೆ ಗಟ್ಟಿಯಾದ ದಾಖಲೆಗಳು ಹಾಗೂ ಆಧಾರಗಳೂ ಇವೆ’ ಎಂದು ಬೊಮ್ಮಾಯಿ ಪ್ರತಿಪಾದಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ಅವರು ದಾವೆ ಹೂಡಿದ್ದಾರೆ. ಮಹಾರಾಷ್ಟ್ರದ ವಾದವನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಈ ಹಿಂದೆಯು ಸರ್ವಪಕ್ಷ ಸಭೆಯಲ್ಲಿ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿತ್ತು ಎಂದರು.

ಗಡಿ ವಿವಾದ: ಮಾತುಕತೆಗೆ ಏಕನಾಥ ಶಿಂಧೆ ಇಂಗಿತ

ಬೆಳಗಾವಿ: ‘ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವನ್ನು ಮಾತುಕತೆಯ ಮೂಲಕ ಸರ್ವಸಮ್ಮತದಿಂದ ಬಗೆಹರಿಸಿಕೊಳ್ಳುವುದು ನಮ್ಮ ನಿಲುವು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದರು.

ಮುಂಬೈನಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಗಡಿ ಸಮಸ್ಯೆ ಕುರಿತ ನಮ್ಮ ದಾವೆ ಸುಪ್ರೀಂಕೋರ್ಟ್‌ನಲ್ಲಿದೆ. ಕಾನೂನು ವ್ಯಾಪ್ತಿಯ ಚರ್ಚೆ ಅಲ್ಲಿ ನಡೆಯಲಿದೆ. ಕೇಂದ್ರ ಸರ್ಕಾರ ಹಾಗೂ ಎರಡೂ ರಾಜ್ಯಗಳ ನಡುವೆ ಮಾತುಕತೆ ಮೂಲಕ ಈ ವಿವಾದ ಬಗೆಹರಿಸಿಕೊಳ್ಳುವುದು ಸೂಕ್ತ’ ಎಂದರು.

‘ಗಡಿ ಜನರ ಜೀವನ ಸುಧಾರಣೆ ಕುರಿತು ಈಚೆಗೆ ನಡೆದ ಎರಡೂ ರಾಜ್ಯಗಳ ರಾಜ್ಯಪಾಲರ ಸಮನ್ವಯ ಸಭೆ ಯಶಸ್ವಿಯಾಗಿದೆ. ಇದೇ ರೀತಿಯ ಸಭೆ ಗಡಿ ವಿಚಾರದಲ್ಲಿಯೂ ನಡೆಯಬೇಕಿದೆ. ಕೇಂದ್ರ ಸರ್ಕಾರ ಕೂಡ ನಮ್ಮ ನಿಲುವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ’ ಎಂದು ತಿಳಿಸಿದರು.

‘ಮಹಾರಾಷ್ಟ್ರ ಸರ್ಕಾರದಿಂದ ಗಡಿಭಾಗದ ಮರಾಠಿಗರಿಗೆ ಈ ಹಿಂದೆ ನೀಡುತ್ತಿದ್ದ ಯೋಜನೆಗಳ ಲಾಭವನ್ನೇ ನಾವು ಹೆಚ್ಚಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ₹10 ಸಾವಿರದಿಂದ ₹20 ಸಾವಿರಕ್ಕೆ ಹೆಚ್ಚಿಸಿದ್ದೇವೆ. ‘ಮುಖ್ಯಮಂತ್ರಿ ಧರ್ಮಾದಾಯ ಸಹಾಯ ನಿಧಿ’ ಬಂದ್ ಆಗಿತ್ತು. ಅದನ್ನು ಮತ್ತೆ ಶುರು ಮಾಡಿದ್ದೇವೆ. ಗಡಿಭಾಗದ ಮರಾಠಿಗರಿಗಷ್ಟೇ ಆರೋಗ್ಯ ಸೌಲಭ್ಯ ನೀಡಲು ‘ಮಹಾತ್ಮ ಜ್ಯೋತಿಬಾ ಫುಲೆ ಯೋಜನೆ’ ನೀಡಲು ನಿರ್ಣಯ ತೆಗೆದುಕೊಂಡಿದ್ದೇವೆ. ಈ ವಿಷಯವಾಗಿ ಎರಡೂ ರಾಜ್ಯಗಳ ಮಧ್ಯೆ ಗೊಂದಲ ಸೃಷ್ಟಿಯಾಗಬಾರದು. ಕುಳಿತು ಮಾತನಾಡುವುದು ನಮ್ಮ ಇಚ್ಛೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT