ಭಾನುವಾರ, ಜುಲೈ 3, 2022
28 °C

ಮುಸ್ಲಿಂ ವರ್ತಕರಿಗೆ ‘ಬಹಿಷ್ಕಾರ’: ವಿಧಾನ ಪರಿಷತ್ತಿನಲ್ಲಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ಸಮುದಾಯವರಿಗೆ ವ್ಯಾಪಾರ, ವಹಿವಾಟಿಗೆ ನಿರ್ಬಂಧ ಹೇರುತ್ತಿರುವ ವಿಚಾರ ಗುರುವಾರ ವಿಧಾನ ಪರಿಷತ್ತಿನಲ್ಲೂ ಪ್ರತಿಧ್ವನಿಸಿತು.

ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ಸಿನ ಸಿ.ಎಂ.ಇಬ್ರಾಹಿಂ, ‘ಮಂಗಳೂರು, ಉಡುಪಿ ಸೇರಿದಂತೆ ಹಲವು ಕಡೆಗಳಲ್ಲಿ ಹಿಂದೂ ಧಾರ್ಮಿಕ ಜಾತ್ರೆ, ಹಬ್ಬ ಹಾಗೂ ಇತರ ಸಂದರ್ಭಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ, ವಹಿವಾಟು ನಡೆಸಲು ನಿರ್ಬಂಧಿಸಲಾಗಿದೆ. ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ನಡೆಸಲು ಅವಕಾಶ ಕೇಳುತ್ತಿದ್ದೇವೆ. ಸರ್ಕಾರ ಕರುಣೆ ತೋರಿಸಬೇಕು’ ಎಂದರು.

ಅದಕ್ಕೆ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ‘ಹಿಂದೂ ದೇವಸ್ಥಾನಗಳ ಆವರಣದ ಸ್ವತ್ತು ಮತ್ತು ಜಾಗವನ್ನು ಹಿಂದೂ ಧರ್ಮದವರಲ್ಲದೇ ಬೇರೆಯವರ ಬಳಕೆಗೆ ನೀಡಬಾರದು ಎಂದು ಈ ಹಿಂದೆಯೇ ಕಾನೂನು ರೂಪಿಸಲಾಗಿದೆ. ಈಗ ಧಾರ್ಮಿಕ ಸಂಸ್ಥೆಗಳು ಅದನ್ನು ಪಾಲಿಸುತ್ತಿವೆ’ ಎಂದು ಸ್ಪಷ್ಟನೆ ನೀಡಿದರು.

‘2002ರಲ್ಲಿ ಧಾರ್ಮಿಕ ದತ್ತಿ ಕಾಯ್ದೆಯಲ್ಲಿ ದೇವಸ್ಥಾನದ ಸ್ವತ್ತನ್ನು ಹಿಂದೂಗಳಲ್ಲದವರ ಬಳಕೆಗೆ ಅವಕಾಶ ನೀಡತಕ್ಕದ್ದಲ್ಲ ಎಂದು ತಿದ್ದುಪಡಿ ಮಾಡಲಾಗಿದೆ. ಈಗ ಧಾರ್ಮಿಕ ಸಂಸ್ಥೆಯವರು ಅದನ್ನು ಜಾರಿ ಮಾಡುತ್ತಿದ್ದಾರೆ. ದೇವಸ್ಥಾನಗಳ ಆಡಳಿತ ಮಂಡಳಿಗಳ ಕ್ರಮ ಕಾನೂನು ವಿರುದ್ಧ ಅಲ್ಲ. ದೇವಸ್ಥಾನದ ಆವರಣದಲ್ಲಿ ಕಾನೂನು ಬಳಕೆಗೆ ವಿರೋಧ ವ್ಯಕ್ತಪಡಿಸಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಆ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲು ಅವಕಾಶ ಇಲ್ಲ’ ಎಂದೂ ವಿವರಿಸಿದರು.

ಕಾಂಗ್ರೆಸ್ಸಿನ ಸಲೀಂ ಅಹ್ಮದ್ ಮತ್ತು ನಜೀರ್ ಅಹ್ಮದ್, ‘ಅಲ್ಪಸಂಖ್ಯಾತರ ವ್ಯಾಪಾರಕ್ಕೆ ಅಡ್ಡಿಪಡಿಸುವುದು ಬೇರೆ ಜಾಗಗಳಿಗೂ ವಿಸ್ತರಿಸುತ್ತಿದೆ. ‌ಬೆಂಗಳೂರಿನ ಚಿಕ್ಕಪೇಟೆಯಲ್ಲೂ ನಡೆದಿದೆ. ಸರ್ಕಾರ ಇದನ್ನು ತಡೆಯಬೇಕು’ ಎಂದು ಆಗ್ರಹಿಸಿದರು.

'ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ: ಬಿಜೆಪಿಯ ರಹಸ್ಯ ಕಾರ್ಯಸೂಚಿ’
ಬೆಳಗಾವಿ: ‘ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಿರುವು ದು ಬಿಜೆಪಿಯ ರಹಸ್ಯ ಕಾರ್ಯಸೂಚಿಯಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.

ಇಲ್ಲಿ ಗುರುವಾರ ಮಾತನಾಡಿದ ಅವರು, ‘ನಮ್ಮದು ಜಾತ್ಯತೀತ ದೇಶ. ಮುಸ್ಲಿಮರಿಗೆ ವ್ಯಾಪಾರವನ್ನು ಸಂ‍ಪೂರ್ಣವಾಗಿ ನಿರ್ಬಂಧಿಸುವುದು ಅಸಾಧ್ಯ. ಎಲ್ಲ ಸಮುದಾಯದವರೂ ಒಂದಾಗಿ ಬಾಳುವುದು ಹಿಂದಿನಿಂದಲೂ ಇದೆ’ ಎಂದರು. ‘ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿವಾದ ಸೃಷ್ಟಿಸುವಂತಹ ಸೂಕ್ಷ್ಮ ವಿಚಾರಗಳನ್ನೇ ತನ್ನ ಅಸ್ತ್ರವನ್ನಾಗಿಸಿಕೊಂಡು ಬಿಜೆಪಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ದೂರಿದರು.

*
2002 ರ ಕಾಯ್ದೆ ಅನುಸಾರ ದೇವಸ್ಥಾನದ ಆವರಣದೊಳಗೆ ಹಿಂದೂಯೇತರರು ಮಳಿಗೆ ಹಾಕಲು ಅವಕಾಶ ಇಲ್ಲ. ಒಂದು ವೇಳೆ ಬೇರೆ ಜಾಗದಲ್ಲಿ ವ್ಯಾಪಾರಕ್ಕೆ ಅಡ್ಡಿಪಡಿಸಿದರೆ ಕ್ರಮ ಕೈಗೊಳ್ಳಲಾಗುವುದು.
-ಜೆ.ಸಿ. ಮಾಧುಸ್ವಾಮಿ, ಕಾನೂನು ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು