ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ | ಅನ್ಯ ಧರ್ಮೀಯರಿಗೆ ಅವಕಾಶ ಬೇಡ: ತಹಶೀಲ್ದಾರ್‌ಗೆ ಮನವಿ

Last Updated 23 ಮಾರ್ಚ್ 2022, 20:27 IST
ಅಕ್ಷರ ಗಾತ್ರ

ಮೂಡಿಗೆರೆ: ‘ತಾಲ್ಲೂಕಿನ ದೇವರುಂದ ಪ್ರಸನ್ನ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ದಿನ ನಡೆಯುವ ರಥೋತ್ಸವದ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ನಡೆಸಲು ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿ ಬುಧವಾರ ಹಿಂದೂಪರ ಸಂಘಟನೆ ಮುಖಂಡರು ತಹಶೀಲ್ದಾರ್ ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

‘ಅನ್ಯ ಧರ್ಮಿಯರು ಹಿಂದೂ ಧರ್ಮದ ಅವಹೇಳನ, ಹಿಂದೂಗಳ ಹತ್ಯೆ, ಲವ್ ಜಿಹಾದ್ ಮೊದಲಾದ ಕೃತ್ಯದಲ್ಲಿ ತೊಡಗಿದ್ದಾರೆ. ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಯುಗಾದಿ ಹಬ್ಬದ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ನಡೆಸಲು ಇಂಥವರಿಗೆ ಅವಕಾಶ ನೀಡಬಾರದು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬಜರಂಗದಳ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಅವಿನಾಶ್, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ಸಾಲುಮರ, ಸಂಚಾಲಕ ವಿನಯ್‍ಶೆಟ್ಟಿ, ಸಹ ಸಂಚಾಲಕ ಸಂತೋಷ್, ಅಭಿಲಾಶ್ ಜನ್ನಾಪುರ, ಪ್ರಣೀತ್ ಇದ್ದರು.

ಮುಸ್ಲಿಮರು ಅಂಗಡಿ ಮಳಿಗೆ ತೆರೆಯದಿರಲು ಕ್ರಮಕ್ಕೆ ಮನವಿ
ಶೃಂಗೇರಿ: ಶೃಂಗೇರಿ ತಾಲ್ಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿತ್ರವಳ್ಳಿ ವನದುರ್ಗಾ ಪರಮೇಶ್ವರಿ ಜಾತ್ರೆಯಲ್ಲಿ ಅಂಗಡಿ ಮಳಿಗೆ ತೆರೆಯಲು ಅನ್ಯಧರ್ಮೀಯರಿಗೆ ಅವಕಾಶ ನೀಡದಂತೆ’ ಅಡ್ಡಗದ್ದೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಜಾತ್ರೋತ್ಸವದಲ್ಲಿ ಹಿಂದೂಗಳು ಹರಿಕೆ, ಕಾಣಿಕೆ ನೀಡುತ್ತಾರೆ. ಅನ್ಯಧರ್ಮೀಯರು ಹೊರ ಊರಿನಿಂದ ಬಂದು ಜಾತ್ರೋತ್ಸವದಲ್ಲಿ ಅಂಗಡಿ ಮಳಿಗೆ ತೆರೆಯುತ್ತಾರೆ. ಅವರು ದೇಗುಲಕ್ಕೆ ಅಥವಾ ದೇವರಿಗೆ ಯಾವುದೇ ಕಾಣಿಕೆ, ಹರಿಕೆ ನೀಡುವುದಿಲ್ಲ. ಅವರಿಂದ ದೇಗುಲಕ್ಕೆ ಯಾವುದೇ ಅನುಕೂಲ ಇಲ್ಲ ಎಂದು ಗ್ರಾಮಸ್ಥರು ಹೇಳಿದರು.

ಹಿಜಾಬ್ ಕುರಿತು ಹೈಕೋರ್ಟ್ ನೀಡಿದ ಆದೇಶ ವಿರೋಧಿಸಿ ರಾಜ್ಯದಾದ್ಯಂತ ಅವರ ಅಂಗಡಿ ಮುಂಗಟ್ಟು ಬಂದ್ ಮಾಡಿ, ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT