ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿವ್ಯಾ ಹಾಗರಗಿ ಬಂಧನಕ್ಕೆ ರಾಜಕೀಯ ಪ್ರಭಾವ ಅಡ್ಡಿ: ಬಿ.ಆರ್. ಪಾಟೀಲ

Last Updated 20 ಏಪ್ರಿಲ್ 2022, 12:39 IST
ಅಕ್ಷರ ಗಾತ್ರ

ಕಲಬುರಗಿ: ‘ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಎಲ್ಲಿ ಅಡಗಿದ್ದಾರೆ ಎಂಬುದು ಬಿಜೆಪಿ ನಾಯಕರು ಹಾಗೂ ಪೊಲೀಸರಿಗೆ ಗೊತ್ತಿದೆ. ಆದರೆ, ಅವರ ಬಂಧನಕ್ಕೆ ರಾಜಕೀಯ ಪ್ರಭಾವ ಅಡ್ಡಿಯಾಗುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಆರ್. ಪಾಟೀಲ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಸರ್ಕಾರದ ಏಜೆನ್ಸಿಗಳಿಂದ ನಡೆಯುವ ತನಿಖೆಯಿಂದ ಸತ್ಯ ಹೊರ ಬರುತ್ತದೆ ಎಂಬುದನ್ನು ನಿರೀಕ್ಷಿಸಲಾಗದು. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವೇ ಕರ್ನಾಟಕ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ದೊಡ್ಡ ಗುಂಪು ಭಾಗಿಯಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿ ಅಕ್ರಮ ಎಸಗಿದ್ದಾರೆ. ಸಿಸಿ ಕ್ಯಾಮೆರಾ ಬಂದ್‌ ಮಾಡಿಸಿದ್ದಾರೆ, ಸ್ಕ್ವಾಡ್‌ ಬರದಂತೆ ನೋಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಆರ್‌ಟಿಐ ಕಾರ್ಯಕರ್ತನೂ ಭಾಗಿಯಾಗಿದ್ದು, ಅವರ ಮೇಲೆ ಪೊಲೀಸ್‌ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿವೆ’ ಎಂದು ಹೇಳಿದರು.

‘ದಿವ್ಯಾ ಹಾಗರಗಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ರಾಜಕೀಯ ಸಂಬಂಧ ಇದೆ. ಇದೇ ಕಾರಣಕ್ಕೆ ಹಾಗರಗಿ ಮನೆಗೆ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದರು. ಹಾಗರಗಿ ಅವರ ಹಿನ್ನೆಲೆ ಗೊತ್ತಿಲ್ಲದೆಯೇ ಅವರ ಮನೆಗೆ ಹೋಗಿದ್ದರೇ? ಪೊಲೀಸರು ಮಾಹಿತಿ ನೀಡಿರಲಿಲ್ಲವೇ?’ ಎಂದು ಪ್ರಶ್ನಿಸಿದರು.

‘9 ವರ್ಷಗಳಿಂದ ಬಿಜೆಪಿ ಸದಸ್ಯೆಯಾಗಿದ್ದೇನೆ ಎಂದು ಸ್ವತಃ ದಿವ್ಯಾ ಹಾಗರಗಿ ಹೇಳಿಕೊಂಡಿದ್ದಾರೆ. ಅವರನ್ನು ಬಿಜೆಪಿಯು ನರ್ಸಿಂಗ್‌ ಕೌನ್ಸಿಲ್‌ ಹಾಗೂ ದಿಶಾ ಸಮಿತಿಯ ಸದಸ್ಯೆಯನ್ನಾಗಿಸಿದೆ. ಇಷ್ಟೆಲ್ಲಾ ದಾಖಲೆಗಳಿದ್ದರೂ ಬಿಜೆಪಿಗೂ ದಿವ್ಯಾಗೂ ಸಂಬಂಧವಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ನೈತಿಕತೆ ಇದೆಯೇ’ ಎಂದುಬಿ.ಆರ್‌.ಪಾಟೀಲ ಟೀಕಿಸಿದರು.

‘ಇದೊಂದು ಕಮಿಷನ್‌ ಸರ್ಕಾರವಾಗಿದ್ದು, ಗುತ್ತಿಗೆದಾರರಿಂದ, ವರ್ಗಾವಣೆ ಬಯಸುವ ಅಧಿಕಾರಿಗಳಿಂದ, ಮಠಗಳಿಗೆ ಅನುದಾನ ಕೇಳುವ ಸ್ವಾಮೀಜಿಗಳಿಂದಲೂ ಕಮಿಷನ್ ಕೇಳುತ್ತಿದೆ’ ಎಂದು ದೂರಿದರು.

ಮುಖಂಡ ಗಣೇಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT