ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂದ್ರರ ಬ್ರಾಹ್ಮಣ್ಯ ಅಪಾಯಕಾರಿ: ಕಾಂಗ್ರೆಸ್ ಮುಖಂಡ ಮಹದೇವಪ್ಪ

Last Updated 15 ನವೆಂಬರ್ 2022, 16:03 IST
ಅಕ್ಷರ ಗಾತ್ರ

ಮೈಸೂರು: 'ಬ್ರಾಹ್ಮಣರ ಬ್ರಾಹ್ಮಣ್ಯಕ್ಕಿಂತ ಶೂದ್ರರ ಬ್ರಾಹ್ಮಣ್ಯ ಹೆಚ್ಚು ಅಪಾಯಕಾರಿ' ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಪ್ರತಿಪಾದಿಸಿದರು.

ರಾಮಕೃಷ್ಣನಗರದ ರಮಾಗೋಂವಿಂದ ರಂಗಮಂದಿರದಲ್ಲಿ ಮಂಗಳವಾರ ಡಾ.ಹರೀಶ್ ಕುಮಾರ್ ಅವರ 'ಸಿದ್ದರಾಮಯ್ಯ 75' ಕೃತಿ ಬಿಡುಗಡೆಯಲ್ಲಿ ಅವರು ಮಾತನಾಡಿದರು.

'ಶೂದ್ರರ ಬ್ರಾಹ್ಮಣ್ಯದ ವಿರುದ್ಧ ಪ್ರತಿಭಟಿಸದಿದ್ದರೆ ಸಮಸ್ಯೆಯಾಗಲಿದೆ. ಸರ್ವಾಧಿಕಾರಿ ಧೋರಣೆಯ ಆಡಳಿತ ಮುನ್ನಲೆಗೆ ಬಂದಿದೆ. ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದದೆ, ಜಾತಿ ಆಧಾರಿತ, ಧರ್ಮಾಧಾರಿತ ಪಕ್ಷವಾಗುತ್ತಿವೆ. ಹೀಗಾಗಿ,
ಸಿದ್ದರಾಮಯ್ಯ ಮತ್ತು ಅವರ ಸ್ನೇಹಿತರ ಕೈ ಬಲಪಡಿಸಬೇಕು' ಎಂದು ಹೇಳಿದರು.

ವಕೀಲ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, 'ಆಳುವ ಪಕ್ಷಗಳಲ್ಲಿಯೇ ಆಂತರಿಕ ಪ್ರಜಾಪ್ರಭುತ್ವ ಸತ್ತುಹೋಗಿದೆ. ಇನ್ನು ಸಂಸತ್, ವಿಧಾನ ಮಂಡಲದಲ್ಲಿ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಚರ್ಚೆ ನಡೆಯುತ್ತದೆ ಎಂಬುದು ಕನಸು' ಎಂದು ಅಭಿಪ್ರಾಯಪಟ್ಟರು.

'‌ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಮೀಸಲಾತಿಯನ್ನು ಸಂಸತ್ ನಲ್ಲಿ ಚರ್ಚೆ ನಡೆಯದೇ ಅನುಮೋದನೆಗೊಂಡಿತು. ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಕಾಂಗ್ರೆಸ್ ಹಾಕಬೇಕು. ರಾಷ್ಟ್ರದ ಎಲ್ಲ ಸಂಸ್ಥೆಗಳಲ್ಲಿ ಮೀಸಲಾತಿ ಇದ್ದರೂ, ನ್ಯಾಯಾಂಗದಲ್ಲಿ ಮೀಸಲಾತಿ ಇಲ್ಲ. ಹೀಗಾಗಿ ಅಲ್ಲಿಯೂ‌ ಮೀಸಲಾತಿ ತರಲು ಪಕ್ಷ ಹೋರಾಟ ನಡೆಸಬೇಕು' ಎಂದು ಸಲಹೆ ನೀಡಿದರು.

'ದಲಿತ ಕ್ರೈಸ್ತರು ಹಾಗೂ ಮುಸ್ಲಿಮರನ್ನು ಪರಿಶಿಷ್ಟ ಮೀಸಲಾತಿ ಕೊಡುವ ಕುರಿತು ಜಸ್ಟೀಸ್ ಬಾಲಕೃಷ್ಣ ಆಯೋಗ ರಚಿಸಲಾಗಿದ್ದು, ಅದರ ಬಗ್ಗೆ ‌ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕು' ಎಂದು ಒತ್ತಾಯಿಸಿದರು.

'ಡಿ.ದೇವರಾಜ ಅರಸು ಅವರಿಗೆ ಸಿದ್ದರಾಮಯ್ಯ ಅವರನ್ನು ಹೋಲಿಕೆ ಮಾಡಿ ಪುಸ್ತಕದಲ್ಲಿ ಲೇಖಕ ಡಾ.ಹರೀಶ್ ಕುಮಾರ್ ದಾಖಲಿಸಿದ್ದಾರೆ. ಸಾಮಾಜಿಕವಾಗಿ ಈ ಇಬ್ಬರೂ ನಾಯಕರು ಮಾಡಿದ ಕಾರ್ಯವನ್ನು ತೌಲನಿಕವಾಗಿ ನೆನೆದಿದ್ದಾರೆ. ಅಂತೆಯೇ ಕಾಂಗ್ರೆಸ್ ಆಡಳಿತ ಕಾಲದ ಕಾರ್ಯಗಳ ಬಗ್ಗೆ ತುಲಾನಾತ್ಮಕ ಅಧ್ಯಯನಗಳು ನಡೆಯಬೇಕು' ಎಂದು ಪ್ರತಿಪಾದಿಸಿದರು.

'ಸಿದ್ದರಾಮಯ್ಯ ಅವರ ಕಾಲದಲ್ಲಿ ಆದ ಸಾಧನೆ ಹಾಗೂ ಕಾರ್ಯಕ್ರಮಗಳನ್ನು ದಾಖಲಿಸುವಾಗ ಮೌಲ್ಯಮಾಪನದ ಕಾರ್ಯವನ್ನು ಲೇಖಕರು ಮಾಡಬೇಕಿತ್ತು' ಎಂದು ಸಲಹೆ ನೀಡಿದರು.

'ಅನ್ನಭಾಗ್ಯ ಯೋಜನೆ ರಾಜ್ಯದಲ್ಲಿ ಜಾರಿಯಾದಾಗ ನೆರೆ ರಾಜ್ಯಗಳಾದ ಆಂಧ್ರ, ತಮಿಳುನಾಡು, ತೆಲಂಗಾಣದಲ್ಲಿ ಹಸಿವಿನಿಂದ ಸಾಯುತ್ತಿದ್ದರು. ಅನ್ನಭಾಗ್ಯ ಬಡವರ ಹಸಿವು ತಪ್ಪಿಸಿದ್ದಷ್ಟೇ ಅಲ್ಲ. ಬಾಲಕಾರ್ಮಿಕ ಪದ್ಧತಿ ಕ್ಷೀಣಿಸಿ ಸರ್ವ ಶಿಕ್ಷಣ ಅಭಿಯಾನ ಸಾಕ್ಷಾತ್ಕಾರಗೊಳ್ಳು ಸಹಾಯ ಮಾಡಿತು. ಮಕ್ಕಳು ಶಾಲೆಗೆ ಹೋದರು. ದಾಖಲಾತಿ ಹೆಚ್ಚಾಯಿತು' ಎಂದು ಅಭಿಪ್ರಾಯಪಟ್ಟರು.

'ಸಿದ್ದರಾಮಯ್ಯ ಗುಟ್ಕಾ ನಿಷೇಧ ಮಾಡಿದಾಗ ರಾಜ್ಯದ ವಕೀಲರು ಸವಾಲು ಹಾಕಿದ್ದರು. ಲಕ್ಷಾಂತರ ಜನ ಕ್ಯಾನ್ಸರ್ ಭೀಕರ ಪರಿಣಾಮದಿಂದ ಪಾರಾಗುವ ನಿರ್ಧಾರ ತೆಗೆದುಕೊಂಡಿದ್ದು, ಸೇಂದಿ ನಿಷೇಧ ಮಾಡಿದ್ದು ಐತಿಹಾಸಿಕ' ಎಂದು ಬಣ್ಣಿಸಿದರು.

'ದೆಹಲಿಗೆ ಹೋಗಲು ಸಿದ್ದರಾಮಯ್ಯ ಬಳಿ ಹಣವಿರುತ್ತಿರಲಿಲ್ಲ. ಜಾಲಪ್ಪ ಅವರೇ ವಿಮಾನ ಟಿಕೆಟ್ ಹಣ ಭರಿಸುತ್ತಿದ್ದರು. ಹೋರಾಟದ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ‌ಆಗಬೇಕು' ಎಂದು ಆಶಿಸಿದರು.

ಚಿಂತಕ ಪ.ಮಲ್ಲೇಶ್ ಮಾತನಾಡಿ, 'ದಿಕ್ಕೆ ಇಲ್ಲದ ಸಮಾಜವನ್ನು ಪ್ರಧಾನಿ ಕಟ್ಟುತ್ತಿದ್ದಾರೆ. ಆರ್ ಎಸ್ ಎಸ್, ಬಿಜೆಪಿಗೆ ಮಾತ್ರ ಪ್ರಧಾನಿಯಾಗಿದ್ದಾರೆ. ಮಕ್ಕಳು, ಯುವಕರಿಗೆ ಭವಿಷ್ಯವೇ ಇಲ್ಲದಾಗಿದೆ' ಎಂದರು.

'ದೇಶವನ್ನು ಹಾಳು ಮಾಡಿದ್ದು ಬ್ರಾಹ್ಮಣರು, ಬ್ರಾಹ್ಮಣ್ಯ. ಅವರನ್ನು ಎಂದಿಗೂ ನಂಬಬಾರದು' ಎಂದು ಸಲಹೆ ನೀಡಿದರು.

'ಅನ್ಯಾಯ ಕಣ್ಣ ಮುಂದೆಯೇ ಇದ್ದಾಗ ಪ್ರಶ್ನಿಸುತ್ತಿಲ್ಲ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮುರುಘಾ ಮಠದ ಸ್ವಾಮೀಜಿ ಮಕ್ಕಳ‌ ಮೇಲೆ ಅನ್ಯಾಯ ಎಸಗಿದ್ದಾರೆ. ಯುವಕರು ಬೀದಿಗಿಳಿಯಬೇಕಿತ್ತು. ಕೇವಲ ಸುದ್ದಿಯನ್ನು ಚಪ್ಪರಿಸುತ್ತಿದ್ದಾರೆ' ಎಂದು ವ್ಯಂಗ್ಯವಾಡಿದರು.

'ಅಡ್ನಾಡಿ ಕಾರ್ಯಪ್ಪ ಟಿಪ್ಪುವಿನ ಮೇಲೆ ತನ್ನ ಕನಸುಗಳನ್ನು ಬರೆದಿದ್ದಾರೆ. ಅದಕ್ಕೆ ಭೈರಪ್ಪ ಬೆಂಬಲಿಸುತ್ತಾರೆ. ಯುವಕರು ಸುಮ್ಮನೆ ಕುಳಿತುಕೊಳ್ಳದೆ‌ ಸತ್ಯವನ್ನು ಎತ್ತಿಹಿಡಿಯಲು ಹೋರಾಟ ನಡೆಸಬೇಕು ' ಎಂದು ಸಲಹೆ ನೀಡಿದರುಮ

ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಮಾತನಾಡಿ, 'ದೇಶದ ಯಾವುದೇ ಸರ್ಕಾರವು ಚುನಾವಣೆ ಮುನ್ನ ನೀಡಿದ್ದ ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಈಡೇರಿಸಿದ್ದು, ನುಡಿದಂತೆ ನಡೆದ ಸರ್ಕಾರ ಇದ್ದರೆ, ಅದು ಸಿದ್ದರಾಮಯ್ಯ ಸರ್ಕಾರ ಮಾತ್ರ' ಎಂದು ಹೇಳಿದರು.

'ರಾಜಕಾರಣಿಗಳು ಜಾತಿವಾದಿ ಆಗಿರುತ್ತಾರೆ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಇಬ್ಬರು ಅಧಿಕಾರಿಗಳನ್ನು ಬಿಟ್ಟರೆ ತಮ್ಮದೇ ಜಾತಿಯ ಅಧಿಕಾರಿಗಳು ಇರಲಿಲ್ಲ. ಸಚಿವ ಸಂಪುಟದಲ್ಲೂ ಅವಕಾಶ ನೀಡಿರಲಿಲ್ಲ. ಹೀಗಾಗಿ ಅವರನ್ನು ಜಾತಿವಾದಿ ಎನ್ನಲಾಗದು' ಎಂದು ಹೇಳಿದರು.

'ರೀಡೂ, ವಾಚ್ ಪ್ರಕರಣ ಬಿಟ್ಟರೆ ಭ್ರಷ್ಟಾಚಾರ ಆರೋಪಗಳು ಸಿದ್ದರಾಮಯ್ಯ ಮೇಲಿಲ್ಲ. ಭ್ರಷ್ಟಾಚಾರ ಮಾಡಿದ್ದೇ ಆಗಿದ್ದರೆ ಲಾಲು ಪ್ರಸಾದ್ ಯಾದವ್ ಅವರಂತೆ ಜೈಲಿನಲ್ಲಿರಬೇಕಿತ್ತು' ಎಂದರು.

'ಕಾಂಗ್ರೆಸ್ ನಲ್ಲಿಯೇ ಮುಖಂಡರಿಗೆ ಸೈದ್ಧಾಂತಿಕ ಸ್ಪಷ್ಟತೆಯಿಲ್ಲ. ಆದರೆ, ಸಿದ್ದರಾಮಯ್ಯಗೆ ಇದೆ. ಹೀಗಾಗಿ, ಅವರ ಸಿದ್ಧಾಂತ, ಪಕ್ಷದ ಮೂಲ ಸಿದ್ಧಾಂತಕ್ಕೆ ಹೊಂದಿಕೆಯಾಗುತ್ತದೆ. ನೆಹರೂ ಹಾಗೂ ಸಿದ್ದರಾಮಯ್ಯ ಅವರ ಸಿದ್ಧಾಂತಗಳೆರಡೂ ಒಂದೇ' ಎಂದು ಬಣ್ಣಿಸಿದರು.

'ಉತ್ತರಪ್ರದೇಶದ ಮಾದರಿ, ಗುಜರಾತ್ ಮಾದರಿಯ ಆಡಳಿತ ಕೊಡುತ್ತೇನೆಂದು ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಹೇಳಿದರು‌. ಆದರೆ, ಸಿದ್ದರಾಮಯ್ಯ ಲಿಂಗಾಯತರಲ್ಲ. ಪ್ರಮಾಣವಚನ ಸ್ವೀಕಾರದ ಸಂದರ್ಭ ಬಸವಣ್ಣನ ಮಾದರಿ ಆಡಳಿತ ತರುತ್ತೇನೆ ಎಂದಿದ್ದರು' ಎಂದು ಅವರು ತಿಳಿಸಿದರು.

'ಜವಹರಲಾಲ್ ನೆಹರೂ ಅವರ ನಿಜವಾದ ಉತ್ತರಾಧಿಕಾರಿ ರಾಹುಲ್‌ಗಾಂಧಿ' ಎಂದು ಹೇಳಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT