ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳಿತಕ್ಕೊಳಗಾದವರ ಮೇಲೆತ್ತಲು ಬ್ರಾಹ್ಮಣರು ಶ್ರಮಿಸಿದರೆ?: ವಿಧಾನಸಭೆಯಲ್ಲಿ ಚರ್ಚೆ

ಕಾರಜೋಳ– ಸಿದ್ದರಾಮಯ್ಯ ಭಿನ್ನ ಅಭಿಪ್ರಾಯ
Last Updated 29 ಮಾರ್ಚ್ 2022, 19:43 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜದಲ್ಲಿ ದಲಿತರು, ಶೋಷಿತರು ಮತ್ತು ತುಳಿತಕ್ಕೆ ಒಳಗಾದವರನ್ನು ಸಾಮಾಜಿಕವಾಗಿ ಮೇಲಕ್ಕೆತ್ತಲು ಬಸವಣ್ಣ ಅವರು ಸೇರಿದಂತೆ ಹಲವು ಬ್ರಾಹ್ಮಣರು ಶ್ರಮಿಸಿದ್ದಾರೆ ಮತ್ತು ಸುಧಾರಣೆಗಳನ್ನು ತಂದಿದ್ದಾರೆ ಎನ್ನುವುದನ್ನು ಒಪ್ಪಲೇಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಹೇಳಿದರು.

ವಿಧಾನಸಭೆಯಲ್ಲಿ ಮಂಗಳವಾರ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಉತ್ತರ ನೀಡುವ ಸಂದರ್ಭದಲ್ಲಿ ಜಾತಿ ವಿಚಾರ ಪ್ರಸ್ತಾಪ ಆದಾಗ ಕಾರಜೋಳ ಹೀಗಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ‘ಯಾರು ಮಾಡಿದ್ದಾರೆ ಹೇಳ್ರಿ, ಸುಮ್ಮನೇ ಏನೇನೊ ಹೇಳಬೇಡಿ’ ಎಂದರು.

‘ನೀವು ಒಪ್ಪದೇ ಇರಬಹುದು. ಆದರೆ, ಸಾಕಷ್ಟು ಜನ ಬ್ರಾಹ್ಮಣರ ಕೊಡುಗೆ ಇದೆ. ಅನುಭವ ಮಂಟಪದ ಸಿಂಹಾಸನದಲ್ಲಿ ಹಿಂದುಳಿದವರನ್ನು ಕೂರಿಸಿದರು’ ಎಂದರು ಕಾರಜೋಳ.

‘ಬಸವಣ್ಣ ಅವರು ಹಿಂದುಳಿದವರಿಗೆ ಸ್ಥಾನಮಾನ ನೀಡಲು ಶ್ರಮಿಸಿದ್ದರಿಂದ ಅವರನ್ನು ಓಡಿಸುವ ಪ್ರಯತ್ನ ಮಾಡಿದರು. ಸಮ ಸಮಾಜ ನಿರ್ಮಾಣವಾಗಿದ್ದರೆ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಏಕೆ ಮತಾಂತರ ಆಗುತ್ತಿದ್ದರು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಜಾತಿ ವಿಚಾರವಾಗಿ ಬಹುತೇಕರಲ್ಲಿ ಹಲವು ತಪ್ಪು ಕಲ್ಪನೆಗಳು, ಪೂರ್ವಾಗ್ರಹಗಳೂ ಇವೆ. ಈ ಬಗ್ಗೆ ಪ್ರತ್ಯೇಕ ಚರ್ಚೆ ನಡೆಸುವುದು ಸೂಕ್ತ. ಚರ್ಚೆಯಿಂದ ತಪ್ಪು ಕಲ್ಪನೆಗಳನ್ನು ನಿವಾರಿಸಲು ಸಾಧ್ಯವಾಗಬಹುದು. ಪ್ರತಿಯೊಬ್ಬ ಸದಸ್ಯರು ಅವರವರ ಅಭಿಪ್ರಾಯ ವ್ಯಕ್ತಪಡಿಸಬಹುದು’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಚರ್ಚೆಗೆ ತೆರೆ ಎಳೆದರು.

‘ನೌಡಗೌಡ’ ಈಗ ಬರಿ ಹೆಸರು ಮಾತ್ರ!

‘ಕೃಷಿ ಇಲಾಖೆ ರೈತರಿಗೆ ನೀಡುವ ಯೋಜನೆಗಳು ದುರುಪಯೋಗ ಆಗುತ್ತದೆ ಎಂದು ನಾಡಗೌಡರು ಹೇಳಿದ್ದಾರೆ. ಇವರೆಲ್ಲ ದೊಡ್ಡ ಹಿಡುವಳಿದಾರರು ಈ ರೀತಿ ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಆಗ ಕ್ರಿಯಾಲೋಪವೆತ್ತಿದ ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ಕುಮಾರ್‌, ‘ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆ ಜಾರಿ ಬಂದಾಗಿನಿಂದ ಯಾರೂ ಹೆಚ್ಚು ಜಮೀನು ಇಟ್ಟುಕೊಳ್ಳುವಂತಿಲ್ಲ. ಆ ರೀತಿ ಇಟ್ಟುಕೊಂಡರೆ ಅದು ಅಪರಾಧ ಆಗುತ್ತದೆ. ನೀವು ಸಚಿವ ಸ್ಥಾನದಲ್ಲಿ ನಿಂತು ಹೇಳಿದ್ದಿರಿ. ಅದಕ್ಕೆ ಬದ್ಧರಾಗಬೇಕಾಗುತ್ತದೆ’ ಎಂದು ಕಾಲೆಳೆದರು.

ಮುಖ್ಯಮಂತ್ರಿ ಬೊಮ್ಮಾಯಿ ಆಗ ಪಾಟೀಲರ ನೆರವಿಗೆ ಬಂದು, ‘ನಾಡಗೌಡರ ಕೂಡು ಕುಟುಂಬಗಳು ಕಾಯ್ದೆಗಳು ಬಂದ ಮೇಲೆ ಒಡೆದು ಹೋಗಿವೆ, ಭೂಮಿಯೂ ಹರಿದು ಹಂಚಿ ಹೋಗಿದೆ’ ಎಂದು ಮಾರ್ಮಿಕವಾಗಿ ನುಡಿದರು.

‘ಈಗ ನಾಡಗೌಡ ಎಂಬುದು ಹೆಸರು ಮಾತ್ರ. ನಮ್ಮ ಕಡೆ ಸಂಪತ್ತ್‌ಅಯ್ಯಂಗಾರ್‌ ಎಂಬ ವಕೀಲರು ಇರುತ್ತಿದ್ದರು. ಆದರೆ, ಅವರ ಬಳಿ ಸಂಪತ್ತು ಇರುತ್ತಿರಲಿಲ್ಲ. ಸಂಡೆ –ಮಂಡೆ ಲಾಯರ್‌ಗಳು ಅಷ್ಟೇ’ ಎಂದು ಸಿದ್ದರಾಮಯ್ಯ ಚಟಾಕಿ ಹಾರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಸಿದ್ರಾಮಣ್ಣ ಅವರಂತ ಬುದ್ಧಿವಂತ ವಕೀಲರು ಹಗಲು ರಾತ್ರಿ ಕೂತು ಅವಿಭಕ್ತ ಕುಟುಂಬಗಳನ್ನು ಹೇಗೆ ವಿಭಕ್ತ ಮಾಡಿ ಭೂಮಿ ಹಂಚಿಕೊಳ್ಳಬೇಕು ಎಂದು ಸಲಹೆ ಕೊಟ್ಟಿರುತ್ತಾರೆ’ ಎಂದು ಛೇಡಿಸಿದರು. ‘ನಾನು ವಕೀಲನಾಗಿದ್ದಾಗ ಅಂತಹ ಕೆಲಸ ಮಾಡಿಲ್ಲ, ನನ್ನ ತರಹದವರು ಯಾರೂ ಮಾಡಲ್ಲ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

‘ಕುಲ ಕಸುಬು ಮಾಡಿಕೊಂಡು ಬಂದವರು ನಾಡಗೌಡ್ರು, ದೇಶಪಾಂಡೆ, ದೇಶಮುಖ, ಸರ್‌ದೇಸಾಯಿಗಳಿಗೆ ಇನ್ನೂ 50 ವರ್ಷ ನಿಷ್ಠರಾಗಿಯೇ ಇರುತ್ತಾರೆ. ಆ ವಾತಾವರಣ ಬದಲಿಸಲು ಆಗಲ್ಲ’ ಎಂದು ಗೋವಿಂದ ಕಾರಜೋಳ ಹೇಳಿದರು.

‘ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ, ಅಂದಿನ ಸಚಿವ ಬಿ.ರಾಚಯ್ಯ ಅವರ ಜತೆ ಚರ್ಚೆ ನಡೆಸುತ್ತಿದ್ದರು. ಆಗ ಜೆ.ಎಚ್‌.ಪಟೇಲರು ಬ್ರಾಹ್ಮಣರಿಗೆ 5 ಸಾವಿರ ವರ್ಷಗಳ ಇತಿಹಾಸ, ಲಿಂಗಾಯತರಿಗೆ 800 ವರ್ಷಗಳ ಇತಿಹಾಸ, ದಲಿತರಿಗೆ 50 ವರ್ಷಗಳ ಅಂದರೆ ಸಂವಿಧಾನ ರಚನೆ ಆದ ಮೇಲಿನ ಇತಿಹಾಸ ಇದೆ ಎಂದರು. ಬ್ರಾಹ್ಮಣರನ್ನು ಬಿಟ್ಟರೆ, ಲಿಂಗಾಯಿತರೇ ಮೇಧಾವಿಗಳು. ಹೀಗಾಗಿ ಮುಖ್ಯಮಂತ್ರಿಯವರು ಸತ್ಯಕ್ಕೆ ಅಪಚಾರ ಆಗುವಂತೆ ಸತ್ಯ ಹೇಳಿದ್ದಾರೆ ಎಂದು ರಮೇಶ್‌ಕುಮಾರ್ ಕಾಲೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT