ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೊಂಡ ರಸ್ತೆಗಳ ‘ಮರು ಅಭಿವೃದ್ಧಿ’?

ತೀವ್ರ ಸಂಚಾರ ದಟ್ಟಣೆಯ ರಸ್ತೆಗಳ ಉನ್ನತೀಕರಣಕ್ಕೆ ರಾಜ್ಯ ಸರ್ಕಾರದ ‘ಮಿಷನ್‌–2022’
Last Updated 3 ಜನವರಿ 2021, 22:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸಂಚಾರ ಸಮಸ್ಯೆ ನೀಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಮಿಷನ್‌–2022’ರಡಿ ತೀವ್ರ ದಟ್ಟಣೆ ಇರುವ 12 ಕಾರಿಡಾರ್‌ಗಳ ಉನ್ನತೀಕರಣ ಹಾಗೂ ನಿರ್ವಹಣೆಯ ಕಾರ್ಯ ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಈ ಪಟ್ಟಿಯಲ್ಲಿರುವ ಅನೇಕ ಕಾಮಗಾರಿಗಳು ಅನುಮಾನಕ್ಕೆಡೆ ಮಾಡಿಕೊಟ್ಟಿವೆ.

ಉನ್ನತೀಕರಣಕ್ಕೆ ಗುರುತಿಸಿರುವ ಅನೇಕ ಕಾರಿಡಾರ್‌ಗಳಲ್ಲಿ ಬಹುತೇಕ ಮಾರ್ಗಗಳನ್ನು ಬಿಬಿಎಂಪಿ ನೂರಾರು ಕೋಟಿ ವೆಚ್ಚದಲ್ಲಿ ಈಗಾಗಲೇ ಅಭಿವೃದ್ಧಿಪಡಿಸಿದೆ. ಅನೇಕ ಕಡೆ ವೈಟ್‌ಟಾಪಿಂಗ್‌ ಮಾಡಲಾಗಿದೆ. ಈ ಕಾರಿಡಾರ್‌ಗಳಲ್ಲಿ ಕಾಮಗಾರಿಗಳು ನಡೆದಿರುವ ಅನೇಕ ಕಡೆ ದೋಷ ಸರಿಪಡಿಸುವ ಹೊಣೆಗಾರಿಕೆಯ ಅವಧಿಯೂ (ಡಿಎಲ್‌ಪಿ) ಇನ್ನೂ ಮುಗಿದಿಲ್ಲ. ಹಾಗಿರುವಾಗ ಮತ್ತೆ ಉನ್ನತೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವ ಅಗತ್ಯವಾದರೂ ಏನು ಎಂಬ ಪ್ರಶ್ನೆ ಎದುರಾಗಿದೆ.

‘12 ಕಾರಿಡಾರ್‌ಗಳ ಪ್ರಾರಂಭಿಕ ಹಂತದ ಅಭಿವೃದ್ಧಿಗೆ ₹335.17 ಕೋಟಿ ಅಗತ್ಯವಿದೆ. ಅವುಗಳ ವಾರ್ಷಿಕ ನಿರ್ವಹಣಾ ವೆಚ್ಚ ₹ 142.12 ಕೋಟಿಗಳಾಗುತ್ತವೆ. ಉನ್ನತೀಕರಣ ಮತ್ತು ಒಂದು ವಾರ್ಷಿಕ ನಿರ್ವಹಣಾ ಕಾರ್ಯಕ್ಕೆ 2021ನೇ ಸಾಲಿನಲ್ಲಿ ಒಟ್ಟು ₹ 477.29 ಕೋಟಿಗಳಾಗುತ್ತವೆ ಎಂದು ಅಂದಾಜಿಸಲಾಗಿದೆ. ಈ ಪ್ರಕಾರ ಅಧಿಕ ವಾಹನ ದಟ್ಟಣೆ ಇರುವ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕೈಗೆತ್ತಿಕೊಳ್ಳಲು ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ’ ಎಂದು ಕೆಆರ್‌ಡಿಸಿಎಲ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು.

ಈ ಕಾರಿಡಾರ್‌ಗಳ ಉನ್ನತೀಕರಣ ಕಾಮಗಾರಿಗಳಿಗೆ ಬಂಡವಾಳ ವೆಚ್ಚವಾಗಿ ಬೆಂಗಳೂರಿನ ವಿಶೇಷ ಮೂಲಸೌಕರ್ಯ ಯೋಜನೆ ಅಡಿ ₹ 400 ಕೋಟಿ ಮಂಜೂರು ಮಾಡಲು ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಉಳಿದ ₹ 77.29 ಕೋಟಿಯನ್ನು ಪಾಲಿಕೆಯೇ ಭರಿಸಬೇಕು ಎಂದು ಸೂಚಿಸಿದೆ.

ಗೊರಗುಂಟೆಪಾಳ್ಯದಿಂದ ಕೆ.ಆರ್‌.ಪುರವರೆಗೂ ಈಗಾಗಲೇ ಬಿಬಿಎಂಪಿ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕೆಲವೆಡೆ ಕಾಮಗಾರಿ ಈಗಲೂ ಪ್ರಗತಿಯಲ್ಲಿದೆ. ಅನೇಕ ಕಡೆ ಕಾಮಗಾರಿ ಪೂರ್ಣಗೊಂಡಿದೆ. ಈಗ ಕರೆದಿರುವ ಟೆಂಡರ್‌ ದಾಖಲೆಗಳ ಪ್ರಕಾರ, ಬಳ್ಳಾರಿ ರಸ್ತೆ ಅಭಿವೃದ್ಧಿ, ಹಳೆ ಮದ್ರಾಸ್‌ ರಸ್ತೆ ಅಭಿವೃದ್ಧಿ, ಗೊರಗುಂಟೆಪಾಳ್ಯದಿಂದ ಹಳೆ ಮದ್ರಾಸ್‌ ರಸ್ತೆವರೆಗೆ ಹೊರವರ್ತುಲ ರಸ್ತೆ (ಬಿ) ಅಭಿವೃದ್ಧಿ ಸೇರಿ ಒಟ್ಟು 44.56 ಕಿ.ಮೀ ಉದ್ದದ ರಸ್ತೆಯನ್ನು ಪ್ಯಾಕೇಜ್‌ –1ರಲ್ಲಿ ₹ 77.13 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದೆ. ಈಗಾಗಲೇ ಉನ್ನತೀಕರಣಗೊಂಡ ರಸ್ತೆಗಳನ್ನು ಮತ್ತೆ ಮೇಲ್ದರ್ಜೆಗೇರಿಸುವ ಉದ್ದೇಶವೇನು ತಿಳಿಯುತ್ತಿಲ್ಲ. ಬಳ್ಳಾರಿ ರಸ್ತೆಯನ್ನು ಯಾವ ರೀತಿ ಅಭಿವೃದ್ಧಿಪಡಿಸಲಾಗುತ್ತದೆ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ.

ಹಳೆ ವಿಮಾನ ನಿಲ್ದಾಣ ರಸ್ತೆಯನ್ನು ಸಿಗ್ನಲ್‌ಫ್ರೀ ಕಾರಿಡಾರ್‌ ಕಾರ್ಯಕ್ರಮದ ಅಡಿ ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಸರ್ಜಾಪುರ ರಸ್ತೆ ವಿಸ್ತರಣೆ ಕಾಮಗಾರಿಯೂ ನಡೆಯುತ್ತಿದೆ. ಈ ನಡುವೆ, ಪ್ಯಾಕೇಜ್‌–2ರಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ, ಕೆ.ಆರ್‌.ಪುರದಿಂದ ಹಳೆ ವಿಮಾನನಿಲ್ದಾಣ ರಸ್ತೆವರೆಗೆ ಹೊರವರ್ತುಲ ರಸ್ ಸೇರಿ ಒಟ್ಟು 42.39 ಕಿ.ಮೀ ಉದ್ದದ ರಸ್ತೆಯನ್ನು ಉನ್ನತೀಕರಣಕ್ಕಾಗಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಮತ್ತೆ ₹ 131.07 ಕೋಟಿ ವೆಚ್ಚ ಮಾಡಲಾಗುತ್ತಿದೆ.

ಪ್ಯಾಕೇಜ್‌–3ರಲ್ಲಿ ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಸಿಲ್ಕ್‌ ಬೋರ್ಡ್‌ನಿಂದ ಮೈಸೂರು ರಸ್ತೆವರೆಗಿನ ಹೊರವರ್ತುಲ ರಸ್ತೆ (ಡಿ) ಸೇರಿ ಒಟ್ಟು49.45 ಕಿ.ಮೀ ಉದ್ದದ ರಸ್ತೆಯ ಉನ್ನತೀಕರಣ ನಡೆಸಲಾಗುತ್ತದೆ. ಈ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ₹ 27.55 ಕೋಟಿ ವೆಚ್ಚವಾದರೆ, ಅವುಗಳ ವಾರ್ಷಿಕ ನಿರ್ವಹಣೆಗೆ ಅದಕ್ಕಿಂತಲೂ ಹೆಚ್ಚು
(₹ 35.66 ಕೋಟಿ) ವೆಚ್ಚವಾಗಲಿದೆ! ಇದರ ತರ್ಕವೇ ಅರ್ಥವಾಗುತ್ತಿಲ್ಲ. ಹೊಸೂರು ರಸ್ತೆಯನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಬನ್ನೇರುಘಟ್ಟ ರಸ್ತೆಯ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ. ಬನ್ನೇರುಘಟ್ಟ ರಸ್ತೆ ಹಾಗೂ ಸಿಲ್ಕ್‌ ಬೋರ್ಡ್‌–ಆರ್‌.ವಿ.ರಸ್ತೆ ಮಾರ್ಗದಲ್ಲಿ ಬಿಎಂಆರ್‌ಸಿಎಲ್‌ ನಮ್ಮ ಮೆಟ್ರೊ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಹಂತದಲ್ಲಿ ಹೇಗೆ ಹೊಸತಾಗಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತದೆ ಎಂಬುದು ಯಕ್ಷಪ್ರಶ್ನೆ.

ಪ್ಯಾಕೇಜ್‌–4ರಲ್ಲಿ ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಪಶ್ಚಿಮ ಕಾರ್ಡ್ ರಸ್ತೆ ಮತ್ತು ಮೈಸೂರು ರಸ್ತೆಯಿಂದ ಗೊರಗುಂಟೆಪಾಳ್ಯವರೆಗಿನ ಹೊರವರ್ತುಲ ರಸ್ತೆ (ಎ)ಗಳು ಸೇರಿ ಒಟ್ಟು 54.60 ಕಿ.ಮೀ ಉದ್ದದ ರಸ್ತೆಗಳನ್ನು ₹99.43 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇವುಗಳ ವಾರ್ಷಿಕ ನಿರ್ವಹಣೆಗೆ ₹ 42.17 ವೆಚ್ಚವಾಗುತ್ತದೆ. ಈ ಮಾರ್ಗಗಳಲ್ಲೂ ಬಹುತೇಕ ಕಡೆ ಬಿಬಿಎಂಪಿ ಈಗಾಗಲೇ ವೈಟ್‌ಟಾಪಿಂಗ್‌ ಕಾಮಗಾರಿಗಳನ್ನು ನಡೆಸಿದೆ. ಬಹುತೇಕ ಕಾಮಗಾರಿಗಳೂ ಮುಕ್ತಾಯದ ಹಂತದಲ್ಲಿವೆ. ಈ ರಸ್ತೆಗಳಿಗೆ ಮತ್ತೆ ₹99.43 ಕೋಟಿ ವಚ್ಚ ಮಾಡುವ ಔಚಿತ್ಯವೇನು ಎಂದು ಪ್ರಶ್ನಿಸುತ್ತಿದ್ದಾರೆ ಸಾರ್ವಜನಿಕರು.

ನಗರದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ 12 ರಸ್ತೆಗಳ ಅಭಿವೃದ್ಧಿ, ಉನ್ನತೀಕರಣ ಮತ್ತು ನಿರ್ವಹಣೆಯ ಹೊಣೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್‌) ವಹಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ 2019ರ ನ.11ರಂದು ನಡೆದಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.

‘ಈ 12 ಕಾರಿಡಾರ್‌ಗಳನ್ನೂ ಇದು ವರೆಗೆ ಬಿಬಿಎಂಪಿಯೇ ನಿರ್ವಹಣೆ ಮಾಡುತ್ತಿತ್ತು. ಇದಕ್ಕಾಗಿ ಸರ್ಕಾರ ಪ್ರತ್ಯೇಕ ಅನುದಾನ ನೀಡುತ್ತಿರಲಿಲ್ಲ. ಆದರೂ ತಕ್ಕ ಮಟ್ಟಿಗೆ ಈ ಕಾರಿಡಾರ್‌ಗಳನ್ನು ಚೆನ್ನಾಗಿಯೇ ನಿರ್ವಹಣೆ ಮಾಡಿದ್ದೇವೆ. ಬಹುತೇಕ ಎಲ್ಲ ರಸ್ತೆ ಗಳನ್ನು ಯಾವುದಾದರೊಂದು ಅನು ದಾನ ಹೊಂದಿಸಿ ಅಭಿವೃದ್ಧಿಪಡಿಸಿದ್ದೇವೆ. ವರ್ಷಕ್ಕೆ ನೂರಾರು ಕೋಟಿ ಅನುದಾನ ನೀಡಿದರೆ ಇವುಗಳ ನಿರ್ವಹಣೆಯನ್ನು ಇನ್ನೂ ಚೆನ್ನಾಗಿಯೇ ಮಾಡಬಹುದು. ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗದಲ್ಲಿ ಇವುಗಳ ನಿರ್ವಹಣೆಗಾಗಿ ಪ್ರತ್ಯೇಕ ಘಟಕವನ್ನು ಆರಂಭಿಸಬಹುದು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಾಲಿಕೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

5 ವರ್ಷ ನಿರ್ವಹಣೆಗೆ ₹ 785.3 ಕೋಟಿ!

12 ಹೈ–ಡೆನ್ಸಿಟಿ ಕಾರಿಡಾರ್‌ಗಳನ್ನು ಐದು ವರ್ಷಗಳ ಕಾಲ ನಿರ್ವಹಣೆ ಮಾಡಲು ₹ 785.3 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಅಭಿವೃದ್ಧಿಗೊಂಡ ರಸ್ತೆಗಳ ಪ್ರಾರಂಭಿಕ ಉನ್ನತೀಕರಣಕ್ಕೆ ಮಾಡುತ್ತಿರುವ ₹ 335.17 ಕೋಟಿ ವೆಚ್ಚ ಇದರಲ್ಲಿ ಸೇರಿಲ್ಲ. ಈ 12 ಕಾರಿಡಾರ್‌ಗಳು ಐದು ವರ್ಷಗಳಲ್ಲಿ ಸರ್ಕಾರದ ಬೊಕ್ಕಸದಿಂದ ಒಟ್ಟು ₹ 1,120.47 ಕೋಟಿಯನ್ನು ಕಬಳಿಸಲಿವೆ. ಈ 12 ಕಾರಿಡಾರ್‌ಗಳ ಅಭಿವೃದ್ಧಿಗೆ ಇದುವರೆಗೆ ಮಾಡಿರುವ ಎಲ್ಲ ವೆಚ್ಚಗಳನ್ನೂ ಸೇರಿಸಿದರೂ ಅವುಗಳ ಮೊತ್ತ ಇಷ್ಟಾಗಲಿಕ್ಕಿಲ್ಲ!

ಚೆನ್ನಾಗಿರುವ ರಸ್ತೆಗಳಿಗೆ ಮತ್ತೆ ವೆಚ್ಚವೇಕೆ?

ಇದೀಗ ಅಭಿವೃದ್ಧಿಪಡಿಸಲು ಹೊರಟ ಬಹುತೇಕ ರಸ್ತೆಗಳು ಈಗಾಗಲೇ ಅಭಿವೃದ್ಧಿಯಾಗಿರುವಂತಹವು. ಅವುಗಳ ಉನ್ನತೀಕರಣದ ಹೆಸರಿನಲ್ಲಿ ಮತ್ತೆ ನೂರಾರು ಕೋಟಿ ವೆಚ್ಚ ಮಾಡುತ್ತಿರುವುದು ಸರಿಯಲ್ಲ. ಬಿಬಿಎಂಪಿ ಕೌನ್ಸಿಲ್‌ ಈಗ ಅಸ್ತಿತ್ವದಲ್ಲಿಲ್ಲ. ಬೆಂಗಳೂರು ನಗರದಿಂದ ಆಯ್ಕೆ ಆಗಿರುವ ಆರು ಮಂದಿ ಸಚಿವರುಗಳು ಸರ್ಕಾರದಲ್ಲಿದ್ದರೂ ಅವರಿಗೆ ಬೆಂಗಳೂರು ನಗರದ ಉಸ್ತುವಾರಿ ನೀಡಿಲ್ಲ. ಮುಖ್ಯಮಂತ್ರಿಯವರು ತಮ್ಮ ಕಾರ್ಯಬಾಹುಳ್ಯದ ನಡುವೆ ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ಇಂತಹ ಸಂದರ್ಭದಲ್ಲಿ ಕೆಆರ್‌ಡಿಸಿಎಲ್‌ ಮೂಲಕ ₹ 400 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಇದು ಅವ್ಯವಹಾರಗಳಿಗೆ ಆಸ್ಪದ ಮಾಡಿಕೊಟ್ಟಂತೆ.

2010ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗಲೂ, ಬಿಬಿಎಂಪಿ ಕೌನ್ಸಿಲ್‌ ಇಲ್ಲದ ವೇಳೆ ತಲಾ ₹ 80 ಲಕ್ಷ ವೆಚ್ಚದಲ್ಲಿ ನಗರದಲ್ಲಿ ನಾಲ್ಕೈದು ಕಡೆ (ಬಸವೇಶ್ವರ ವೃತ್ತ, ನೃಪತುಂಗ ರಸ್ತೆ, ಹೆಬ್ಬಾಳ, ಮಹಾರಾಣಿ ಕಾಲೇಜು... ಇತ್ಯಾದಿ) ಸಬ್‌ವೇಗಳನ್ನು ನಿರ್ಮಿಸಲಾಗಿತ್ತು. ಅವುಗಳಿಗೆಲ್ಲ ಈಗ ಬೀಗ ಹಾಕಲಾಗಿದೆ. ಈಗ ಮತ್ತೆ ಅಂತಹ ಅವ್ಯವಹಾರಕ್ಕೆ ಅವಕಾಶ ಕಲ್ಪಿಸಬಾರದು. ‘ವಿಷನ್‌ ಬೆಂಗಳೂರು 2022’ ಎಂದು ಯೋಜನೆ ರೂಪಿಸಿದರೆ ಸಾಲದು. ಬೆಂಗಳೂರಿನ ಜನರಿಗೆ ಶಾಶ್ವತವಾಗಿ ಉಪಯೋಗಕ್ಕೆ ಬರುವಂತಹ ಹಾಗೂ ಜನ ಮೆಚ್ಚುವಂತಹ ಕಾರ್ಯವನ್ನು ಸರ್ಕಾರ ಮಾಡಬೇಕು.

-ಎಂ.ರಾಮಚಂದ್ರಪ್ಪ, ಮಾಜಿ ಮೇಯರ್‌

ರಸ್ತೆ ಹದಗೆಟ್ಟರೆ ಯಾರನ್ನು ಕೇಳೋದು?

ನಗರದಲ್ಲಿ ಕೆಆರ್‌ಡಿಸಿಎಲ್‌ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಅನೇಕ ಕಡೆ ಬಿಬಿಎಂಪಿಯೂ ಕಾಮಗಾರಿಗಳನ್ನು ನಡೆಸಿದೆ. ಇವುಗಳಲ್ಲಿ ಲೋಪ ಕಂಡು ಬಂದರೆ ಯಾವ ಸಂಸ್ಥೆ ಹೊಣೆಯಾಗುತ್ತದೆ?

ಬಿಬಿಎಂಪಿ ವ್ಯಾಪ್ತಿಯಲ್ಲಿನ ಬಹುತೇಕ ಎಲ್ಲ ರಸ್ತೆಗಳನ್ನು ಪಾಲಿಕೆಯೇ ನಿರ್ವಹಣೆ ಮಾಡುತ್ತಿತ್ತು. ಅವುಗಳಲ್ಲಿ ಏನೇ ದೋಷಗಳು ಕಂಡುಬಂದರೂಜನ ಬಿಬಿಎಂಪಿಯನ್ನೇ ಪ್ರಶ್ನೆ ಮಾಡುತ್ತಿದ್ದರು. ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲೂ ಸಂಬಂಧಪಟ್ಟ ಅಧಿಕಾರಿಗಳನ್ನು ಮೇಯರ್‌, ಪಾಲಿಕೆ ಸದಸ್ಯರು ಅಥವಾ ಶಾಸಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇನ್ನು ಕೆಆರ್‌ಡಿಸಿಎಲ್‌ ಈ ರಸ್ತೆಗಳ ನಿರ್ವಹಣೆ ಮಾಡಲಿದೆ. ಈ ಸಂಸ್ಥೆ ನೇರವಾಗಿ ಬಿಬಿಎಂಪಿ ಕೌನ್ಸಿಲ್‌ ಅಧೀನದಲ್ಲಿ ಇಲ್ಲ. ಅವರ ಕಾರ್ಯವ್ಯಾಪ್ತಿ ಬೆಂಗಳೂರಿಗೆ ಸೀಮಿತವಲ್ಲ. ರಾಜ್ಯದಾದ್ಯಂತ ರಸ್ತೆಗಳ ನಿರ್ವಹಣೆಯ ಹೊಣೆ ಅವರಿಗಿದೆ. ಹಾಗಾಗಿ ಬೆಂಗಳೂರಿನ ಜೀವನಾಡಿಗಳಂತಿರುವ ಈ 12 ಕಾರಿಡಾರ್‌ಗಳನ್ನು ಈ ಸಂಸ್ಥೆಯವರು ನಿರ್ವಹಣೆ ಮಾಡುವುದು ಸೂಕ್ತವಲ್ಲ ಎಂಬುದು ತಜ್ಞರ ಅಭಿಮತ.

‘ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲವು ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ಅಭಿವೃದ್ಧಿಪಡಿಸಿತ್ತು. ಅವರುಗಳ ದೋಷ ನಿವಾರಣೆ ಹೊಣೆಯ ಅವಧಿ ಮುಗಿಯುವುದರೊಳಗೇ ರಸ್ತೆಗಳಲ್ಲಿ ಲೋಪಗಳು ಕಾಣಿಸಿಕೊಂಡವು. ಬಳಿಕ ಬಿಬಿಎಂಪಿಯೇ ಅವುಗಳನ್ನು ದುರಸ್ತಿ ಪಡಿಸಬೇಕಾಯಿತು. ಅಂತಹ ಪ್ರಮೇಯ ಮರುಕಳಿಸುವುದಕ್ಕೆ ಅವಕಾಶ ನೀಡಬಾರದು’ ಎಂದು ಬಿಬಿಎಂಪಿಯ ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT