ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪ್ರಕರಣ: ಮಾಡಾಳ್‌ಗೆ ನ್ಯಾಯಾಂಗ ಬಂಧನ

Last Updated 1 ಏಪ್ರಿಲ್ 2023, 18:57 IST
ಅಕ್ಷರ ಗಾತ್ರ

ಬೆಂಗಳೂರು: ಲಂಚ ಪ್ರಕರಣದಲ್ಲಿ ಬಂಧಿತರಾಗಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಮಾಜಿ ಅಧ್ಯಕ್ಷ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಏಪ್ರಿಲ್‌ 11ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೆಎಸ್‌ಡಿಎಲ್‌ ಕಚ್ಚಾವಸ್ತು ಪೂರೈಕೆಗೆ ಕಾರ್ಯಾದೇಶ ನೀಡಿರುವುದಕ್ಕಾಗಿ ಶ್ರೇಯಸ್‌ ಕಶ್ಯಪ್‌ ಎಂಬುವವರಿಂದ ₹ 40 ಲಕ್ಷ ಲಂಚ ಪಡೆಯುತ್ತಿದ್ದ ವಿರೂಪಾಕ್ಷಪ್ಪ ಅವರ ಮಗ, ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿ ಪ್ರಶಾಂತ್‌ ಮಾಡಾಳ್‌ ಅವರನ್ನು ಮಾರ್ಚ್‌ 2ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಹೈಕೋರ್ಟ್‌ ಇದೇ 27ರಂದು ಆದೇಶ ಹೊರಡಿಸಿತ್ತು. ಅದೇ ದಿನ ರಾತ್ರಿ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಲೋಕಾಯುಕ್ತ ಪೊಲೀಸರ ಕೋರಿಕೆಯಂತೆ ನಾಲ್ಕು ದಿನಗಳ ಕಾಲ ಶಾಸಕರನ್ನು ತನಿಖಾ ತಂಡದ ವಶಕ್ಕೆ ನೀಡಲಾಗಿತ್ತು.

ಪೊಲೀಸ್‌ ಕಸ್ಟಡಿ ಅವಧಿ ಪೂರ್ಣಗೊಂಡ ಕಾರಣದಿಂದ ಶನಿವಾರ ಸಂಜೆ ವಿರೂಪಾಕ್ಷಪ್ಪ ಅವರನ್ನು ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಯನ್ನು ಏ.11ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಬಳಿಕ ತನಿಖಾಧಿಕಾರಿಗಳು ಶಾಸಕರನ್ನು ಕರೆದೊಯ್ದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಶಕ್ಕೆ ಒಪ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT