ಶನಿವಾರ, ಅಕ್ಟೋಬರ್ 23, 2021
20 °C

ಅಪ್ಪನ ಪರ ಲಂಚ ಪಡೆದ ಗ್ರಾಮ ಲೆಕ್ಕಿಗನ ಮಗನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಮೀನಿನ ಖಾತೆ ಬದಲಾವಣೆ ಮಾಡಲು ಅಪ್ಪನ ಪರವಾಗಿ ₹ 5 ಲಕ್ಷ ಲಂಚದ ಹಣ ಪಡೆದ ಯಲಹಂಕ ಹೋಬಳಿಯ ಗ್ರಾಮಲೆಕ್ಕಿಗ ಮಹೇಶ್‌ ಅವರ ಮಗ ವಿನೋದ್‌ನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ಬಂಧಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಕೋಟೆ ಗ್ರಾಮದ ಪ್ರಕಾಶ್‌ ಎಂಬುವವರು ಯಲಹಂಕ ಹೋಬಳಿಯಲ್ಲಿ 24 ಗುಂಟೆ ಜಮೀನು ಖರೀದಿಸಿದ್ದರು. ಅದರ ಖಾತೆಯನ್ನು ತನ್ನ ಹೆಸರಿಗೆ ಬದಲಾವಣೆ ಮಾಡಿಕೊಡುವಂತೆ ಯಲಹಂಕ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಯಲಹಂಕ ಹೋಬಳಿಯ ಕಂದಾಯ ನಿರೀಕ್ಷಕ ಪುರುಷೋತ್ತಮ್‌ ಈ ಅರ್ಜಿಯನ್ನು ಗ್ರಾಮಲೆಕ್ಕಿಗ ಮಹೇಶ್‌ಗೆ ವರ್ಗಾಯಿಸಿದ್ದರು.

ನಂತರ ಪ್ರಕಾಶ್‌ ವಿಚಾರಿಸಿದಾಗ ₹ 10 ಲಕ್ಷ ಲಂಚ ಕೊಡುವಂತೆ ಪುರುಷೋತ್ತಮ್‌ ಮತ್ತು ಮಹೇಶ್‌ ಬೇಡಿಕೆ ಇಟ್ಟಿದ್ದರು. ಮತ್ತೆ ಚರ್ಚೆ ಮಾಡಿದಾಗ ₹ 5 ಲಕ್ಷ ನೀಡಿದರೆ ಖಾತೆ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.

ಲಂಚದ ಹಣವನ್ನು ಮಹೇಶ್‌ ಅವರ ಮಗ ವಿನೋದ್‌ಗೆ ತಲುಪಿಸುವಂತೆ ಆರೋಪಿ ಅಧಿಕಾರಿಗಳು ಸೂಚಿಸಿದ್ದರು. ಶನಿವಾರ ಸಂಜೆ ನಗರದ ಹೋಟೆಲ್‌ ಒಂದರ ಬಳಿ ಬಂದು ಪ್ರಕಾಶ್‌ ಅವರಿಂದ ಲಂಚದ ಹಣ ಪಡೆಯುತ್ತಿದ್ದ ಯುವಕನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದರು.

ಬಂಧಿತ ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪುರುಷೋತ್ತಮ್‌ ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.