ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 2ರ ನಂತರ ಯಡಿಯೂರಪ್ಪ ಬದಲಾವಣೆ ಖಚಿತ: ಬಸನಗೌಡ ಪಾಟೀಲ್ ಯತ್ನಾಳ್ 

ಫೆಡರಲ್ ಬ್ಯಾಂಕ್ ವ್ಯವಹಾರದಲ್ಲಿ ಇ.ಡಿಯಿಂದ ವಿಜಯೇಂದ್ರ ವಿಚಾರಣೆ
Last Updated 7 ಏಪ್ರಿಲ್ 2021, 12:42 IST
ಅಕ್ಷರ ಗಾತ್ರ

ಬೆಂಗಳೂರು: ‘ಮೇ 2ರ ನಂತರ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಖಚಿತ. ಪಕ್ಷ ಉಳಿಯಬೇಕು ಎಂದರೆ ಮೇ 2ರ ನಂತರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಲೇಬೇಕು. ಇಲ್ಲ ಅಂದರೆ ಪಕ್ಷ ಎಲ್ಲಿ ಉಳಿಯುತ್ರಿ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು. ‘ಇನ್ನೂ ಕೆಲವೇ ದಿನಗಳಲ್ಲೇ ಅಪ್ಪ (ಯಡಿಯೂರಪ್ಪ), ಮಗನ (ವಿಜಯೇಂದ್ರ) ನಿಜ ಬಣ್ಣ ಬಯಲಾಗಲಿದೆ. ವಿಜಯೇಂದ್ರ ಎಷ್ಟು ಲೂಟಿ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಫೆಡರಲ್ ಬ್ಯಾಂಕ್ ವ್ಯವಹಾರದಲ್ಲಿ ವಿಜಯೇಂದ್ರ ಅವರನ್ನು ಜಾರಿ ನಿರ್ದೇಶನಾಲಯದವರು (ಇ.ಡಿ) ಕರೆದುಕೊಂಡು ಹೋಗಿಲ್ಲ ಎಂದು ಹೇಳಲಿ. ನಾನು ಅವರಿಗೆ ಸವಾಲು ಹಾಕ್ತೇನೆ’ ಎಂದರು.

‘ಡಿ.ಕೆ. ಶಿವಕುಮಾರ್‌ ಅವರನ್ನು ಇ.ಡಿಯವರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ರಲ್ಲ. ಅಲ್ಲಿಗೆ ವಿಜಯೇಂದ್ರರನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಸೂಟು- ಬೂಟು ಹಾಕೊಂಡು ಹೋಗಿದ್ರು. ಅದೆನ್ನೆಲ್ಲಾ ಬಿಚ್ಚಿಸಿ, ಡಿ.ಕೆ.ಶಿವಕುಮಾರ್‌ ಥರನೇ ವಿಜಯೇಂದ್ರ ಅವರನ್ನೂ ವಿಚಾರಣೆ ಮಾಡಿದ್ದಾರೆ. ಇದೆಲ್ಲವೂ ಸ್ವಲ್ಪ ದಿನಗಳಲ್ಲೇ ಗೊತ್ತಾಗಲಿದೆ’ ಎಂದು ಯತ್ನಾಳ್ ಗುಡುಗಿದರು.

‘ಯಾರೋ ಒಬ್ಬರು ಚಿಲ್ಲರೆ ಪಲ್ಲರೆಗಳ ಕೈಯಲ್ಲಿ ಮಾತನಾಡಿಸುತ್ತಾರೆ. ತಾಕತ್ತಿದ್ದರೆ ನನ್ನ ಬಗ್ಗೆ ಅಪ್ಪ - ಮಗ ಮಾತನಾಡಲಿ’ ಎಂದು ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಸವಾಲು ಹಾಕಿದ ಯತ್ನಾಳ್‌, ‘ಯಾರ ಯಾರ ನಾಯಕತ್ವ ಎಷ್ಟೆಷ್ಟು ಅನ್ನೋದು ಗೊತ್ತಾಗುತ್ತೆ. ಈಶ್ವರಪ್ಪ ಈಲ್ಡ್ ಆಗಿಲ್ಲ ಅನಿಸುತ್ತಿದೆ. ಈಶ್ವರಪ್ಪ ರಾಜ್ಯಪಾಲರ ಭೇಟಿ ಮಾಡಿದ್ದು ನನಗೇನೂ ಗೊತ್ತಿರಲಿಲ್ಲ’ ಎಂದರು.

ಪಕ್ಷದ ಒಳಗೆ ಮಾತನಾಡುವಂತೆ ಯತ್ನಾಳಗೆ ಈಶ್ವರಪ್ಪ ಬುದ್ದಿಮಾತು ಹೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ‘ಪಕ್ಷದ ವೇದಿಕೆ ಅನ್ನೋದು ಏನು? ರಾಜ್ಯಪಾಲರ ಕಚೇರಿಯಾ’ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಈಶ್ವರಪ್ಪಗೆ ತಿರುಗೇಟು ನೀಡಿದರು.

‘ಏಪ್ರಿಲ್ 17ರ ನಂತರ ಶಾಸಕರು, ಸಚಿವರು ಬಹಳ ಮಂದಿ ರೊಚ್ಚಿಗೇಳುವವರಿದ್ದಾರೆ. ಸೂರ್ಯ ಚಂದ್ರ ಇರುವವರೆಗೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಅಂದ್ರೆ ಏನರ್ಥ? ಯಡಿಯೂರಪ್ಪ ಕುಟುಂಬದವರಿಗೇನಾದರೂ ರಾಜ್ಯವನ್ನು ಬರೆದುಕೊಟ್ಟಿದ್ದಾರಾ? ಪಕ್ಷದ ಸಿದ್ದಾಂತದ ಹಿನ್ನೆಲೆಯಲ್ಲಿ ಎರಡು ವರ್ಷ ಅವಕಾಶ ಕೊಟ್ಟಿದ್ದೇ ದೊಡ್ಡದ್ದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT