ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆಗೆ ಸೈ: ಬಿಎಸ್‌ವೈ

ಎರಡು ತಿಂಗಳ ಹಿಂದೆಯೇ ನಿರ್ಧಾರ – ಯಡಿಯೂರಪ್ಪ
Last Updated 22 ಜುಲೈ 2021, 19:02 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷದ ವರಿಷ್ಠರು ಹೇಳುವ ತನಕ ಮಾತ್ರ ಮುಖ್ಯಮಂತ್ರಿಯಾಗಿರುತ್ತೇನೆ. ರಾಜೀನಾಮೆ ನೀಡಿ ಎಂದ ತಕ್ಷಣವೇ ಕೊಡುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ನಿರ್ಧಾರಪ್ರಕಟಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದಾಗಲೂ ಮೌನಕ್ಕೆ ಶರಣಾಗಿದ್ದ ಯಡಿಯೂರಪ್ಪ ಅವರು ಗುರುವಾರ ಮೌನ ಮುರಿದರು. ಇದೇ 25ರ ಬಳಿಕ ತಾವು ರಾಜೀನಾಮೆ ನೀಡಲು ಸಿದ್ಧರಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಬೆಳಿಗ್ಗೆ ಮಾತನಾಡಿದ್ದ ಅವರು, ‘ಇದೇ 25ಕ್ಕೆ ವರಿಷ್ಠರಿಂದ ಸಂದೇಶ ಬರಲಿದ್ದು, ಆ ಪ್ರಕಾರವೇ ನಡೆದುಕೊಳ್ಳು
ತ್ತೇನೆ’ ಎಂದಿದ್ದರು. ಸಂಜೆ ವೇಳೆಗೆಅವರ ಮಾತುಗಳಲ್ಲಿ ರಾಜೀನಾಮೆ ನೀಡುವ ಕುರಿತು ಹೆಚ್ಚಿನ ಸ್ಪಷ್ಟತೆ ಕಂಡುಬಂದಿತು.

ಸಚಿವ ಸಂಪುಟ ಸಭೆಗೆ ಹಾಜರಾಗುವುದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ‘ವರಿಷ್ಠರು ರಾಜೀನಾಮೆ ಕೊಡಿ ಎಂದ ತಕ್ಷಣವೇ ರಾಜೀನಾಮೆ ನೀಡುತ್ತೇನೆ. ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಆದರೆ, ವರಿಷ್ಠರಿಂದ ಅಧಿಕೃತ ಸೂಚನೆ ಬಂದಿರಲಿಲ್ಲ. ಇದೇ 25ಕ್ಕೆ ಸೂಚನೆ ಬರಬಹುದು. ಅದಕ್ಕಾಗಿ ಕಾಯುತ್ತಿದ್ದೇನೆ’ ಎಂದರು.

‘ರಾಜೀನಾಮೆ ಬಳಿಕ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುತ್ತೇನೆ. ಆದರೆ, ಹೊಸ ಮುಖ್ಯಮಂತ್ರಿ ಯಾರು ಆಗಬೇಕು ಎಂಬ ಬಗ್ಗೆ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ. ಅದರ ಅಗತ್ಯವೂ ಇಲ್ಲ. ಕೇಳಿದರೂ ಯಾರ ಹೆಸರನ್ನೂ ಹೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಇದೇ 26 ಕ್ಕೆ ಮುಖ್ಯಮಂತ್ರಿ ಆಗಿ ಎರಡು ವರ್ಷ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನೆಯ ಬಗ್ಗೆ ವಿಶೇಷ ಕಾರ್ಯಕ್ರಮವಿದೆ’ ಎಂದು ಬೆಳಿಗ್ಗೆ ಹೇಳಿದ್ದರು.

‘ದೇಶದಲ್ಲಿ 75 ವರ್ಷ ಮೀರಿದ ಯಾರಿಗೂ ಅಧಿಕಾರ ನೀಡಿಲ್ಲ. ಆದರೆ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಷಾ ಮತ್ತು ಪಕ್ಷದ ಅಧ್ಯಕ್ಷ ನಡ್ಡಾ ಅವರು ನನ್ನ ಕಾರ್ಯನಿರ್ವಹಣೆಯ ಬಗ್ಗೆ ತೃಪ್ತಿ ಇದ್ದ ಕಾರಣ, 75 ವರ್ಷದ ಬಳಿಕವೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದರು. ನನ್ನ ಬಗ್ಗೆ ಅವರಿಗಿರುವ ವಿಶೇಷ ಕಾಳಜಿಯೇ ಇದಕ್ಕೆ ಕಾರಣ’ ಎಂದರು.

‘ಈ ಎಲ್ಲ ಬೆಳವಣಿಗೆಗಳಿಂದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಗೊಂದಲಕ್ಕೆ ಒಳಗಾಗಬಾರದು. ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಿ, ಅಧಿಕಾರಕ್ಕೆ ತರುವುದು ನನ್ನ ಗುರಿ. ಯಾರೂ ಕೂಡ ನನ್ನ ಪರವಾಗಿ ಹೇಳಿಕೆ ನೀಡುವುದು ಬೇಡ. ಪ್ರತಿಭಟನೆ ನಡೆಸುವುದು ಬೇಡ’ ಎಂದು ತಿಳಿಸಿದರು.

‘ಕಳೆದ ಎರಡು ಮೂರು ದಿನಗಳಿಂದ ನೂರಕ್ಕೂ ಹೆಚ್ಚು ಮಠಾಧೀಶರು ನನ್ನನ್ನು ಭೇಟಿ ಮಾಡಿ ಆಶೀರ್ವಾದ ಮಾಡಿದ್ದಾರೆ. ಇದನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಹಿಂದೆ ಈ ರೀತಿ ಯಾರಿಗೂ ಆಶೀರ್ವಾದ ನೀಡಿದ ಉದಾಹರಣೆ ಇಲ್ಲ. ಮುಂದೆಯೂ ಮಠಾಧೀಶರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ರವಿ, ಸಂತೋಷ್, ನಿರಾಣಿ ಹೆಸರು ಮುನ್ನೆಲೆಗೆ

ವಯಸ್ಸಿನ ಕಾರಣ ಕೊಟ್ಟು ಪದತ್ಯಾಗಕ್ಕೆ ಸಿದ್ಧ ಎಂದು ಯಡಿಯೂರಪ್ಪ ಘೋಷಣೆ ಮಾಡುತ್ತಿದ್ದಂತೆ, 15ನೇ ವಿಧಾನಸಭೆಯ ಇನ್ನುಳಿದ 20 ತಿಂಗಳ ಅವಧಿಯಲ್ಲಿ ಸರ್ಕಾರದ ಚುಕ್ಕಾಣಿ ಹಿಡಿಯುವರು ಯಾರು ಎಂಬ ಚರ್ಚೆ ಬಿಜೆಪಿಯಲ್ಲಿ ಬಿರುಸುಗೊಂಡಿದೆ.

ಯಡಿಯೂರಪ್ಪ ಅವರು ದೆಹಲಿಯಿಂದ ವಾಪಸ್ ಆದ ಬಳಿಕ, ನಾಯಕತ್ವ ಬದಲಾವಣೆ ಬಹುತೇಕ ಖಚಿತವಾಗಿತ್ತು. ಆ ವೇಳೆ, ಲಿಂಗಾಯತರನ್ನೇ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುವ ಬಗ್ಗೆ ಬಿಜೆಪಿ ವರಿಷ್ಠರು ಒಲವು ತೋರಿದ್ದಾರೆ ಎಂದು ಹೇಳಲಾಗಿತ್ತು. ವಾರ ಕಳೆಯುತ್ತಿದ್ದಂತೆ ಈ ಯಾದಿಯಲ್ಲಿ ಬದಲಾವಣೆಯಾಗುತ್ತಲೇ ಇದ್ದು, ಉತ್ತರಾಧಿಕಾರಿ ಯಾದಿಯಲ್ಲಿರುವವರ ಹೆಸರು ಮೇಲೆ–ಕೆಳಗೆ ಬದಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಹೆಸರು ಎರಡು ದಿನಗಳಿಂದೀಚೆಗೆ ಮೊದಲ ಸಾಲಿಗೆ ಬಂದಿದೆ. ಒಕ್ಕಲಿಗ ಸಮುದಾಯಕ್ಕೆ ನೀಡುವುದಾದರೆ ಮೊದಲ ಆದ್ಯತೆ ರವಿ ಹಾಗೂ ಎರಡನೇಯದು ಸಿ.ಎನ್‌. ಅಶ್ವತ್ಥನಾರಾಯಣ ಅವರದ್ದಾಗಿದೆ.

ಬ್ರಾಹ್ಮಣ ಸಮುದಾಯಕ್ಕೆ ನೀಡುವುದಾದಲ್ಲಿ ಪ್ರಲ್ಹಾದ ಜೋಶಿ ಹೆಸರು ಪ್ರಧಾನವಾಗಿತ್ತು. ಆದರೆ, ಇನ್ನು 20 ತಿಂಗಳ ಅವಧಿಗೆ ರಾಜ್ಯ ರಾಜಕಾರಣಕ್ಕೆ ಬರಲು ಅವರು ಒಲವು ತೋರಿಲ್ಲ. ಕೇಂದ್ರ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಅವರನ್ನು ಬಿಟ್ಟುಕೊಡಲು ಪ್ರಧಾನಿ ಮೋದಿ ಅವರಿಗೆ ಮನಸ್ಸಿಲ್ಲ ಎನ್ನಲಾಗುತ್ತಿದೆ. ಹೀಗಾಗಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್. ಸಂತೋಷ್ ಹೆಸರು ಮುಂಚೂಣಿಗೆ ಬಂದಿದೆ.

ಕ್ರೈಸ್ತ ಪಾದ್ರಿಗಳ ಬೆಂಬಲ

ಯಡಿಯೂರಪ್ಪ ಅವರಿಗೆ ವಿವಿಧ ಸಮುದಾಯಗಳ ಮಠಾಧೀಶರು ಮಾತ್ರವಲ್ಲದೆ, ಕ್ರೈಸ್ತ ಪಾದ್ರಿಗಳು ಮತ್ತು ಅಖಿಲ ಭಾರತ ಕ್ರೈಸ್ತ ಮಹಾಸಭಾದ ಸದಸ್ಯರೂ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುಂದಿನ ಅವಧಿಯವರೆಗೆ ಯಡಿಯೂರಪ್ಪ ಅವರನ್ನೇ ಮುಂದುವರಿಸಬೇಕು ಎಂದು ಮನವಿ ಪತ್ರವನ್ನು ಬಿಜೆಪಿಯ ರಾಷ್ಟ್ರೀಯ ವರಿಷ್ಠರಿಗೆ ಪತ್ರ ಕಳುಹಿಸುವುದಾಗಿ ಕ್ರೈಸ್ತ ಮುಖಂಡರ ನಿಯೋಗ ಹೇಳಿದೆ.

ಮಾದಿಗ ಸಮುದಾಯದ ಆದಿಜಾಂಬವ ಮಠಾಧೀಶರು ಸೇರಿದಂತೆಹಲವು ಸ್ವಾಮೀಜಿಗಳು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದರು.

ಬಿಎಸ್‌ವೈ ಪಕ್ಷ ಕಟ್ಟುವಾಗ ಸ್ವಾಮಿಗಳು ಎಲ್ಲಿದ್ದರು?

‘ಯಡಿಯೂರಪ್ಪ ನಾಲ್ಕು ಶಾಸಕರನ್ನು ಇಟ್ಟುಕೊಂಡು ಪಕ್ಷ ಕಟ್ಟುವಾಗ ಸ್ವಾಮೀಜಿಗಳು ಎಲ್ಲಿದ್ದರು? ನಿತ್ಯವೂ ರೈತರ ಜಪ ಮಾಡುತ್ತಲೇ ಯಡಿಯೂರಪ್ಪ ಪಕ್ಷ ಕಟ್ಟಿದರು. ರಾಜ್ಯದಲ್ಲಿ ಎಚ್‌.ಡಿ.ದೇವೇಗೌಡ ಬಿಟ್ಟರೆ, ಯಡಿಯೂರಪ್ಪ ಮಾತ್ರ ರೈತರ ಜಪ ಮಾಡಿದ್ದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

‘ಮುಖ್ಯಮಂತ್ರಿ ವಿರುದ್ಧ ಮೊದಲ ಮಾತನಾಡಿದವರೇ ಲಿಂಗಾಯತ ಶಾಸಕರು. ಆಗ ಅವರನ್ನು ಕರೆಸಿ ಸ್ವಾಮೀಜಿಗಳು ಬುದ್ಧಿ ಮಾತು ಹೇಳಬಹುದಿತ್ತಲ್ಲ’ ಎಂದು ಮಠಾಧೀಶರನ್ನು ಪ್ರಶ್ನಿಸಿದರು.

‘ಯಡಿಯೂರಪ್ಪ ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ನನಗೆ ಸಮಾಧಾನ ಮತ್ತು ಸಂತಸವಾಗಿದೆ. ಅವರು ಪಕ್ಷವನ್ನು ಮಾತೃ ಸಮಾನ ಎಂದಿದ್ದಾರೆ. ಇದು ಸರಿಯಾದ ಮಾತು. ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಯಲು ಬಿಡುವುದಿಲ್ಲ ಎಂದು ಪಕ್ಷದಲ್ಲಿ ಯಾರೂ ಹೇಳಿಲ್ಲ’ ಎಂದು ಈಶ್ವರಪ್ಪ ತಿಳಿಸಿದರು.

***

ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿರುತ್ತೇವೆ. ಅವರು ಯಾವ ನಿರ್ದೇಶನ ನೀಡುತ್ತಾರೋ ಅದನ್ನು ಪಾಲಿಸುತ್ತೇವೆ. ಜುಲೈ 26 ಕ್ಕೆ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ
– ಆರ್‌.ಅಶೋಕ, ಕಂದಾಯ ಸಚಿವ

ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಲುವಾಗಿ ಶಾಸಕರಿಗೆ ಔತಣ ಕೂಟ ನಡೆಸಬೇಕಿತ್ತು. ಆದರೆ, ವರಿಷ್ಠರ ಸೂಚನೆ ಮೇರೆಗೆ ರದ್ದುಪಡಿಸಲಾಯಿತು
– ಬಸವರಾಜ ಬೊಮ್ಮಾಯಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT