ಮಂಗಳವಾರ, ಅಕ್ಟೋಬರ್ 20, 2020
23 °C
Bng bsy

ಅವಿಶ್ವಾಸ ನಿರ್ಣಯದಿಂದ ವಿಶ್ವಾಸಕ್ಕೆ ಬಲ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಾಂಗ್ರೆಸ್‌ನವರು ಆರು ತಿಂಗಳಿಗೊಮ್ಮೆ ಅವಿಶ್ವಾಸ ಮಂಡಿಸಿದರೆ, ಅಲ್ಲಿಂದ ಮತ್ತೆ ಆರು ತಿಂಗಳು ನನಗೆ ವಿಶ್ವಾಸ ಸಿಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿದ್ದಾರೆ.

ಅವಿಶ್ವಾಸ ನಿರ್ಣಯದ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಹೀಗೆ ಪ್ರತಿ ಆರು ತಿಂಗಳಿಗೊಮ್ಮೆ ನಿರ್ಣಯ ಮಂಡಿಸುತ್ತಲೇ ಇರಲಿ’ ಎಂದು ಲೇವಡಿ ಮಾಡಿದರು.

‘ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರಾಜ್ಯದ ಜನರ ಹಾಗೂ ಶಾಸಕರ ವಿಶ್ವಾಸ ಕಳೆದುಕೊಂಡಿದೆ’ ಎಂದು ಪ್ರತಿಪಾದಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.

ಈ ನಿರ್ಣಯದ ಮೇಲೆ ಚರ್ಚೆ ನಡೆಸಲು ಸಭಾಧ್ಯಕ್ಷರು ಶನಿವಾರ ಅವಕಾಶ ಕೊಡುವ ಸಾಧ್ಯತೆ ಇದೆ.

ಸರ್ಕಾರದ ಭ್ರಷ್ಟಾಚಾರ, ಬಿಡಿಎ ಗುತ್ತಿಗೆ ನೀಡುವಲ್ಲಿ ಆಗಿದೆ ಎಂದು ಆರೋಪಿಸಲಾಗಿರುವ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆಯಲು ಕಾಂಗ್ರೆಸ್‌ ಈ ಅವಿಶ್ವಾಸ ನಿರ್ಣಯ ಮಂಡಿಸಿದೆ. ಕಲಾಪದಲ್ಲಿ ಭ್ರಷ್ಟಾಚಾರದ ಬಗ್ಗೆ ‍ಪ್ರಸ್ತಾ‍ಪಿಸಿದರೆ ವಿವರವಾದ ಚರ್ಚೆಗೆ ಸಭಾಧ್ಯಕ್ಷರು ಅವಕಾಶ ನೀಡುವುದಿಲ್ಲ ಎಂಬ ಕಾರಣಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಬಗರ್‌ಹುಕುಂ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಗೆ ಆಗ್ರಹ
ಬೆಂಗಳೂರು:
ಬಗರ್‌ಹುಕುಂ ಜಮೀನುಗಳ ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಎರಡು ವರ್ಷ ವಿಸ್ತರಿಸಬೇಕು ಹಾಗೂ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಸಮಿತಿಗಳನ್ನು ರಚಿಸಬೇಕು ಎಂದು ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದರು.

ಬಗರ್‌ಹುಕುಂ ಪ್ರಕರಣಗಳ ವಿಲೇವಾರಿಗೆ ನೀಡಿರುವ ಕಾಲಮಿತಿಯನ್ನು ಮತ್ತೆ ಎರಡು ವರ್ಷಗಳಿಗೆ ವಿಸ್ತರಿಸಲು ಅನುವು ಮಾಡುವ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆ– 2020ಗೆ ವಿಧಾನಸಭೆಯಲ್ಲಿ ಶುಕ್ರವಾರ ಒಪ್ಪಿಗೆ ನೀಡಲಾಯಿತು.

ಬಿಜೆಪಿಯ ಆರಗ ಜ್ಞಾನೇಂದ್ರ, ‘ನಮೂನೆ 57ರ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು’ ಎಂದರು. ಬಿಜೆಪಿಯ ಕೆ.ಜಿ.ಬೋಪಯ್ಯ, ‘ಜಿಲ್ಲೆಗಳಲ್ಲಿ 500ರಿಂದ 1 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅರ್ಜಿದಾರರ ವಿರುದ್ಧ ಭೂಕಬಳಿಕೆ ತಡೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿವೆ. ಈ ನ್ಯಾಯಾಲಯ ಭೂಗಳ್ಳರ ಮೇಲೆ ಕ್ರಮ ಕೈಗೊಳ್ಳದೆ ಬಡ ಜನರ ಮೇಲೆ ಪ್ರಹಾರ ಮಾಡುತ್ತಿದೆ’ ಎಂದರು.

ಬಿಜೆಪಿಯ ವಿ.ಸುನೀಲ್‌ ಕುಮಾರ್‌, ‘ಡೀಮ್ಡ್‌ ಅರಣ್ಯಗಳಲ್ಲಿ ಕೃಷಿ ಮಾಡುತ್ತಿರುವವರಿಗೆ ಹಾಗೂ ಕುಮ್ಕಿ ಜಾಗಗಳ ಮಂಜೂರಾತಿಗೆ ಅವಕಾಶ ನೀಡಬೇಕು’ ಎಂದರು. ಟಿ.ಡಿ.ರಾಜೇಗೌಡ ಸಹ ಧ್ವನಿಗೂಡಿಸಿದರು.

ಬಗರ್‌ಹುಕುಂ ಸಮಿತಿಗಳಿಗೆ ಸದಸ್ಯರ ನೇಮಕ ಮಾಡಬೇಕು ಎಂದು ಜೆಡಿಎಸ್‌ನ ಡಾ.ಅನ್ನದಾನಿ ಒತ್ತಾಯಿಸಿದರು.

ಗ್ರಾಮೀಣ ಪ್ರದೇಶಗಳಲ್ಲೂ ಬಿ–ಖರಾಬು ಮಾರಾಟಕ್ಕೆ ಚಿಂತನೆ: ‘ಗ್ರಾಮೀಣ ಪ್ರದೇಶದಲ್ಲಿರುವ ಬಿ–ಖರಾಬು ಜಾಗಗಳನ್ನು ಮಾರಾಟ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು