ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವೇಶತೀರ್ಥರಿಂದ ಆಧ್ಯಾತ್ಮಿಕ ಜ್ಞಾನ ಪ್ರಸರಣ’

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನೆರವೇರಿದ ಪೀಠಾರೋಹಣ ವರ್ಧಂತಿ ಸಂಸ್ಮರಣೆ
Last Updated 24 ಡಿಸೆಂಬರ್ 2020, 20:51 IST
ಅಕ್ಷರ ಗಾತ್ರ

ಬೆಂಗಳೂರು: ‘ಇಳಿ ವಯಸ್ಸಿನಲ್ಲಿಯೂ ದೇಶದಾದ್ಯಂತ ಸಂಚಾರ ಕೈಗೊಳ್ಳುತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥರು, ಮೇಲುಕೀಳು ಎಂಬ ಭಾವವಿಲ್ಲದೆ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಜ್ಞಾನವನ್ನು ಪಸರಿಸಲು ಶ್ರಮಿಸಿದರು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಉಡುಪಿಯ ಪೇಜಾವರ ಮಠವು ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಆಯೋಜಿಸಿದ ವಿಶ್ವೇಶತೀರ್ಥ ಶ್ರೀಪಾದರ 82ನೇ ದ್ವೈತ ವೇದಾಂತ ಸಿಂಹಾಸನ ಪೀಠಾರೋಹಣ ವರ್ಧಂತಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.

‘ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ವಿಶ್ವೇಶತೀರ್ಥರು, ತಮ್ಮ ಪರಿಶುದ್ಧ ಚಾರಿತ್ರ್ಯ, ಅಪಾರ ವಿದ್ವತ್ತಿನಿಂದ ಕೋಟ್ಯಾಂತರ ಭಕ್ತರಿಗೆ ಮಾರ್ಗದರ್ಶನ ಮಾಡಿದ್ದರು. 5 ಬಾರಿ ಉಡುಪಿಯ ಕೃಷ್ಣನ ಪರ್ಯಾಯ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ, ದಾಖಲೆ ನಿರ್ಮಿಸಿದ್ದರು. ದೇಶದಾದ್ಯಂತ 80 ಕ್ಕೂ ಹೆಚ್ಚು ಶಾಲಾ–ಕಾಲೇಜುಗಳು, ಅನಾಥಾಶ್ರಮ, ವೇದಪಾಠಶಾಲೆಗಳನ್ನು ನಿರ್ಮಿಸುವ ಮೂಲಕ ಸಮಾಜಸೇವೆಯಲ್ಲೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ದೇಶದ ಉದ್ದಗಲದಲ್ಲಿ ಅಮಿತವಾದ ಸಂಚಾರ, ಸಕ್ರಿಯ ಚಟುವಟಿಕೆಗಳಿಂದಾಗಿ ಅಪಾರ ಜನಮನ್ನಣೆ ಹೊಂದಿದ್ದರು’ ಎಂದು ಸ್ಮರಿಸಿಕೊಂಡರು.

ಆಶೀರ್ವಚನ ನೀಡಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು , ‘ವಿಶ್ವೇಶ ತೀರ್ಥರು ಸಮಾಜಸೇವೆಯ ಮೂಲಕವೇ ತಮ್ಮನ್ನು ಕೃಷ್ಣನ ಸೇವೆಯಲ್ಲಿ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ರಾಮಜನ್ಮ ಭೂಮಿ,ರಾಮಸೇತು ವಿವಾದ, ಗೋಹತ್ಯೆ ನಿಷೇಧ ಮುಂತಾದ ಸಂದರ್ಭದಲ್ಲಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಭಗವಂತನ ಸರ್ಕಾರದಲ್ಲಿ ದೀನದಲಿತರಿಗೆ ಸಲ್ಲಿಸುವ ಸೇವೆಯೇ ತೆರಿಗೆ ಎಂದು ಪರಿಗಣಿಸಲ್ಪಡುತ್ತದೆ. ಅದರ ಮೇಲೆ ಅವರಿಗೆ ನಂಬಿಕೆಯಿತ್ತು’ ಎಂದರು.

ವಿದ್ವಾನ್ ಪ್ರಭಂಜನಾಚಾರ್ಯ, ಉಡುಪಿ ಶಾಸಕ ರಘುಪತಿಭಟ್, ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT