ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ| ಶಾಸಕರ ವಿರುದ್ಧ– ಪರ ಕಾರ್ಯಕರ್ತರ ಘೋಷಣೆ; ವಿಜಯ ಸಂಕಲ್ಪ ಯಾತ್ರೆ ರದ್ದು

Last Updated 17 ಮಾರ್ಚ್ 2023, 1:47 IST
ಅಕ್ಷರ ಗಾತ್ರ

ಮೂಡಿಗೆರೆ (‌ಚಿಕ್ಕಮಗಳೂರು ಜಿಲ್ಲೆ): ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಮತ್ತು ಪರ ಸ್ವಪಕ್ಷದ ಕಾರ್ಯಕರ್ತರು ಘೋಷಣೆ ಕೂಗಿ, ತಳ್ಳಾಟ ನಡೆಸಿದ್ದರಿಂದ ಕುಪಿತರಾದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ಇಲ್ಲಿನ ವಿಜಯ ಸಂಕಲ್ಪ ಯಾತ್ರೆಯನ್ನು ರದ್ದುಗೊಳಿಸಿ ಚಿಕ್ಕಮಗಳೂರಿಗೆ ತೆರಳಿದರು.

ಯುಡಿಯೂರಪ್ಪ ಅವರು ಗುರುವಾರ ಶೃಂಗೇರಿಯಲ್ಲಿ ಬೆಳಿಗ್ಗೆ ವಿಜಯ ಸಂಕಲ್ಪ ಯಾತ್ರೆ ಮುಗಿಸಿ ಮಧ್ಯಾಹ್ನ ಮೂಡಿಗೆರೆ ತಲುಪಿದರು. ಪಟ್ಟಣದ ಅಯ್ಯಪ್ಪ ಸ್ವಾಮಿ ದೇಗುಲದಿಂದ ರೋಡ್‌ ಶೋ ಶುರುವಾಗಬೇಕಿತ್ತು. ಶಾಸಕ ಕುಮಾರಸ್ವಾಮಿ ವಿರುದ್ಧದ ಬಣದವರು ಯಡಿಯೂರಪ್ಪ ಅವರಿಗೆ ಮನವಿ ನೀಡಲು ಮುಂದಾದರು.

ಬಿಎಸ್‌ವೈ ವಾಹನಕ್ಕೆ ತಡೆ: ಯುಡಿಯೂರಪ್ಪ ಅವರಿದ್ದ ವಾಹನವನ್ನು ತಡೆಯಲು ಕಾರ್ಯಕರ್ತರು, ಮುಖಂಡರು ಮುಂದಾದರು. ಈ ಸಂದರ್ಭದಲ್ಲಿ ತಳ್ಳಾಟವಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಕಾರ್ಯಕತರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

‘ಕುಮಾರಸ್ವಾಮಿ ಹಠಾವೋ, ಬಿಜೆಪಿ ಬಚಾವೋ’ ಎಂಬ ಫಲಕಗಳನ್ನು ಹಿಡಿದು ಹಲವರು ಘೋಷಣೆ ಕೂಗಿದರು. ಇನ್ನು ಹಲವರು ‘ಬೇಕೇ ಬೇಕು ಕುಮಾರಸ್ವಾಮಿ ಬೇಕು’ ಎಂದು ಘೋಷಣೆ ಕೂಗಿದರು.

ಕಾರ್ಯಕರ್ತರ ವರ್ತನೆ ಕಂಡು ಯಡಿಯೂರಪ್ಪ ಸಿಡಿಮಿಡಿಗೊಂಡರು. ಕಾರಿನಿಂದ ಇಳಿಯಲಿಲ್ಲ. ಮುಖಂಡರ ಕಡೆಗೆ ಸಿಟ್ಟಿನಿಂದ ನೋಡಿ ಕಾರಿನಲ್ಲಿ ತೆರಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ, ಎಂ.ಕೆ.ಪ್ರಾಣೇಶ್‌ ಇದ್ದರು.

ವಿಜಯ ಸಂಕಲ್ಪ ಯಾತ್ರೆ ರದ್ದಾದ ನಂತರ ಪ್ರವಾಸಿ ಮಂದಿರದ ಆವರಣಲ್ಲಿ ಶಾಸಕರ ವಿರೋಧಿ ಬಣದವರು ಮತ್ತೆ ಸಭೆ ನಡೆಸಿದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅನುಕುಮಾರ್ ಮಾತನಾಡಿ, ‘ಶಾಸಕರು ತಾಲ್ಲೂಕು ಕಚೇರಿಯನ್ನು ಭ್ರಷ್ಟಾಚಾರದ ಕೇಂದ್ರವನ್ನಾಗಿಸಿದ್ದಾರೆ. ಊರುಬಗೆ ಸಮೀಪದ ಖಾಸಗಿ ರೆಸಾರ್ಟ್‌ಗೆ ತೆರಳಲು ₹70 ಲಕ್ಷಕ್ಕೂ ಅಧಿಕ ಅನುದಾನ ಒದಗಿಸಿ ರಸ್ತೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಇಂತಹ ಶಾಸಕರು ನಮಗೆ ಬೇಕಾ‘ ಎಂದು ಪ್ರಶ್ನಿಸಿದರು. ಬಿಜೆಪಿ ಹಿರಿಯ ಮುಖಂಡ ಎಂ.ಆರ್ ಜಗದೀಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ ರತನ್ ಸಹಿತ ಹಲವು ಮುಖಂಡರು ಮಾತನಾಡಿದರು.

ಕಣ್ಣೀರಿಟ್ಟ ಕಲಾವಿದರು: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗಾಗಿ ವಿವಿಧೆಡೆಯಿಂದ ಕಲಾ ತಂಡಗಳನ್ನು ಕರೆಸಲಾಗಿತ್ತು. ಕಾರ್ಯಕ್ರಮ ರದ್ದಾದ ಬಳಿಕ ನಮ್ಮನ್ನು ಮಾತನಾಡಿಸುವವರು ಸಹ ಇಲ್ಲ. ಮುಂಗಡ ಕೂಟ ಕೊಟ್ಟಿಲ್ಲ. ಈಗ ನಾವು ಯಾರನ್ನು ಕೇಳುವುದು ಎಂದು ಬಂಟ್ವಾಳದ ಗೊಂಬೆ ಬಳಗದಲ್ಲಿ ಬಂದಿದ್ದ ಪ್ರಕಾಶ್ ಅಳಲು ತೋಡಿಕೊಂಡರು.

‘ಪರಿಶಿಷ್ಟ ಜಾತಿಯವನಾದ ಕಾರಣಕ್ಕೆ ಗುರಿ’
‘ನಾನೊಬ್ಬ ಪರಿಶಿಷ್ಟ ಜಾತಿಯವನು ಎಂಬ ಕಾರಣಕ್ಕೆ ಗುರಿಯಾಗಿಸಿಕೊಂಡಿದ್ದಾರೆ, ಕೆಲವರಲ್ಲಿ ಆ ಮನೋಭಾವ ಇದೆ’ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಕಣ್ಣೀರಿಟ್ಟರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿ,‘ನಾನು ಎಸ್‌ಸಿ ಎಂದು ಒಂದು ಗುಂಪಿನವರು ಮೊದಲಿನಿಂದಲೂ ನನ್ನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ’ ಎಂದು ಉತ್ತರಿಸಿದರು.

‘ಯಡಿಯೂರಪ್ಪ ಅವರು ನನ್ನನ್ನು ಕರೆದೊಯ್ದು ಮಾತನಾಡಿದರು. ಅಭ್ಯರ್ಥಿ ನೀನೇ, ತಲೆಕೆಡಿಸಿಕೊಳ್ಳಬೇಡ, ನಿನ್ನ ಜತೆಗಿರುತ್ತೇನೆ ಎಂದು ಭರವಸೆ ನೀಡಿದರು. ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ’ ಎಂದರು.

**

ಮೂಡಿಗೆರೆ ಕ್ಷೇತ್ರದ ಟಿಕೆಟ್‌ ಗೊಂದಲದ ವಿಚಾರವನ್ನು ಬಗೆಹರಿಸುತ್ತೇವೆ. ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ.
–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT