ಮಂಗಳವಾರ, ಸೆಪ್ಟೆಂಬರ್ 29, 2020
21 °C

ಬಿಎಸ್‌ಎನ್‌ಎಲ್‌ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ: ಅನಂತ್ ಕುಮಾರ್ ಹೆಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Ananat kumar hegde

ಕಾರವಾರ: ‘ದೇಶದ್ರೋಹಿಗಳೇ ತುಂಬಿರುವ ವ್ಯವಸ್ಥೆ ಬಿಎಸ್‌ಎನ್‌ಎಲ್‌ ಆಗಿದೆ. ಅದು ಇಡೀ ದೇಶಕ್ಕೆ ಒಂದು ಕಳಂಕ ಆಗಿದೆ’ ಎಂದು ಸಂಸದ ಅನಂತ ಕುಮಾರ ಹೆಗಡೆ ಹೇಳಿದ್ದಾರೆ.

ಕುಮಟಾ ತಾಲ್ಲೂಕಿನ ಕೂಜಳ್ಳಿಯಲ್ಲಿ ಸೋಮವಾರ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬಿಎಸ್‌ಎನ್‌ಎಲ್‌ನಿಂದ ಬಂಡ ವಾಳ ವಾಪಸ್ ಪಡೆಯುವ ಮೂಲಕ ಮುಗಿಸ್ತಿದ್ದೇವೆ. ಮುಂದಿನ ದಿನಗಳಲ್ಲಿ ಆ ಜಾಗವನ್ನು ಖಾಸಗಿ ಸಂಸ್ಥೆಗಳು ತುಂಬಲಿವೆ. ದೇಶದ್ರೋಹಿಗಳೇ ತುಂಬಿ ಕೊಂಡಿರುವ ವ್ಯವಸ್ಥೆ ಅದಾಗಿದೆ. ನನ್ನ ಶಬ್ದದಲ್ಲಿ ನಿಖರತೆ ಇದೆ. ನೀವು ಅಧಿಕಾರಿಗಳಲ್ಲ, ದೇಶದ್ರೋಹಿಗಳು ಎಂದು ಕಾರವಾರದಲ್ಲಿ ನಡೆದ ಸಭೆಯಲ್ಲೂ ಅವರಿಗೆ ಬೈಯ್ದಿದ್ದೆ’ ಎಂದು ಅವರು ಪುನರುಚ್ಚರಿಸಿದರು.

‘ಈಗಾಗಲೇ 85 ಸಾವಿರ ಸಿಬ್ಬಂದಿ ಯನ್ನು ತೆಗೀತಾ ಇದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೌಕರರನ್ನು ತೆಗೆಯ ಬೇಕಾಗಬಹುದು. ಮೇಜರ್ ಸರ್ಜರಿ ಆದರೂ ಸರಿ, ಅದನ್ನು ಸರಿಪಡಿಸಲು ಖಾಸಗೀಕರಣ ಮಾಡುತ್ತೇವೆ’ ಎಂದರು.

‘ಸಮರ್ಪಕ ಸೇವೆ ನೀಡಲು ಬಿಎಸ್‌ಎನ್‌ಎಲ್‌ ಸಂಸ್ಥೆಯ ಸಿಬ್ಬಂದಿಯಿಂದ ಸಾಧ್ಯವಾಗುವುದಿಲ್ಲ. ಸರ್ಕಾರ ಹಣ ಕೊಟ್ಟಿದೆ. ಜನರಿಗೆ ಸಂಸ್ಥೆಯ ಅವಶ್ಯಕತೆಯಿದೆ. ಅಗತ್ಯ ಮೂಲ ಸೌಕರ್ಯವೂ ಇದೆ. ಯಾವುದಕ್ಕೂ ಕೊರತೆ ಇಲ್ಲದಿದ್ದರೂ ಕೆಲಸ ಮಾತ್ರ ಮಾಡುವುದಿಲ್ಲ’ ಎಂದು ಅವರು ವಾಗ್ದಾಳಿ ನಡೆಸಿದರು.

‘ಬಿಎಸ್‌ಎನ್‌ಎಲ್‌ ಸರಿಪಡಿಸಲು ನಮ್ಮ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಹಾಗಿದ್ದರೆ, ವ್ಯವಸ್ಥೆ ಎಷ್ಟು ಜಡ್ಡು ಹಿಡಿ ದಿರಬಹುದು ಎಂದು ಯೋಚಿಸಿ. ಪ್ರಧಾನಿಯವರು ಒಂದು ಕಡೆ ಡಿಜಿಟಲ್ ಇಂಡಿಯಾಕ್ಕೆ ಒತ್ತು ಕೊಡ್ತಿದ್ದಾರೆ. ಬಿಎಸ್‌ ಎನ್‌ಎಲ್‌ಗೆ ಬೇಕಾದ ಹಣವನ್ನೂ, ತಂತ್ರಜ್ಞಾನವೂ ಸಿದ್ಧವಿದೆ. ಆದರೂ ಕೆಲಸ ಮಾಡಲ್ಲ. ಅಷ್ಟೊಂದು ಮನೆ ಮುರುಕುತನ ತುಂಬಿದೆ’ ಎಂದು ಟೀಕಿಸಿದರು.

‘ನಮಗೆ ಕೈ ಕೊಟ್ಟಿರೋದು ಎರಡೇ. ಒಂದು ಬಿಎಸ್‌ಎನ್‌ಎಲ್‌, ಮತ್ತೊಂದು ಏರ್ ಇಂಡಿಯಾ’ ಎಂದೂ ಅವರು ಹೇಳಿದರು.

ಅವರ ಭಾಷಣದ ವಿಡಿಯೊ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೊದಲ್ಲಿ ಅವರು ಹೇಳಿರುವ ಮಾತುಗಳು ಹೀಗಿದೆ
ಬಿಎಸ್‌ಎನ್‍‌ಎಲ್ ನೆಟ್ವರ್ಕ್, ಹೌದು ನಮಗೂ ಗೊತ್ತಿದೆ, ನಿಮಗೂ ಗೊತ್ತಿದೆ. ಉತ್ತರ ಕನ್ನಡ ಜಿಲ್ಲೇನೇ ಎಷ್ಟೋ ಬೆಟರ್. ಬೆಂಗಳೂರಿನಲ್ಲಿಯುೂ ನೆಟ್ವರ್ಕ್ ಸಿಗುವುದಿಲ್ಲ. ಇಡೀ ಬಿಎಸ್‌ಎನ್‌ಎಲ್ ಇವತ್ತು ದೇಶಕ್ಕೊಂದು ಕಳಂಕ ಆಗಿದೆ. ಅದನ್ನು ನಾವು ಮುಗಿಸ್ತಾ ಇದ್ದೀವಿ. ಕೇಂದ್ರ ಸರ್ಕಾರವು ಹೂಡಿಕೆಹರಣ ನೀತಿ ಮೂಲಕ ಬಿಎಸ್‌ಎನ್‌ಎಲ್‌ನ್ನು ಮುಗಿಸ್ತಾ ಇದ್ದೀವಿ. ಮುಂಬರುವ ದಿನಗಳಲ್ಲಿ ಆ ಸ್ಥಾನವನ್ನು ಖಾಸಗಿ ಸಂಸ್ಥೆಗಳು ತುಂಬಲಿವೆ.

ಇದನ್ನು ಸರಿ ಮಾಡಲು ಸಾಧ್ಯವಿಲ್ಲ. ಅಷ್ಟೊಂದು ಜಿಡ್ಡು ಹಿಡಿದಿರುವ ವ್ಯವಸ್ಥೆ ಬಿಎಸ್‌ಎನ್‌ಎಲ್ ವ್ಯವಸ್ಥೆ. ನಮ್ಮ ಸರ್ಕಾರಕ್ಕೂ ಅದನ್ನು ಸರಿಮಾಡಲು ಸಾಧ್ಯವಿಲ್ಲ ಎಂದಾದರೆ ಯೋಚಿಸಿ ಎಷ್ಟು ಜಿಡ್ಡು ಹಿಡಿದಿರಬಹುದು ಅಂತ. ದೇಶದ್ರೋಹಿಗಳೇ ತುಂಬಿಕೊಂಡಿರುವ ವ್ಯವಸ್ಥೆ ಅದಾಗಿದೆ. ನನ್ನ ಶಬ್ದದಲ್ಲಿ ನಿಖರತೆ ಇದೆ.  ಇದೇ ಶಬ್ದದಲ್ಲಿ ಮೊನ್ನೆ ಕಾರವಾರದಲ್ಲಿ ಮೀಟಿಂಗ್ ನಡೆದಾಗ ಬೈದಿದ್ದೆ. ನೀವು ಕೇವಲ ಅಧಿಕಾರಿಗಳಲ್ಲ, ದೇಶದ್ರೋಹಿಗಳು ಅಂತ.

ಸರ್ಕಾರ ಹಣ ಕೊಟ್ಟಿದೆ. ಜನರಿಗೆ ಅವಶ್ಯಕತೆ ಇದೆ. ಮೂಲಸೌಕರ್ಯ ಇದೆ. ಎಲ್ಲವೂ ಇದೆ. ಆದರೆ ಕೆಲಸ ಮಾಡುವುದಿಲ್ಲ. ಯಾವುದಕ್ಕೂ ಕೊರತೆ ಇದೆ ಅಂತಲ್ಲ. ಪ್ರಧಾನಿಯವರು ಒಂದು ಒಂದು ಕಡೆ ಡಿಜಿಟಲ್ ಇಂಡಿಯಾ, ಅದೂ ಇದು ಅಂತ ನಾವು ಹೇಳ್ತಾ ಇದ್ದೀವಿ. ಅದಕ್ಕೆ ಬೇಕಾಗಿರುವ ಹಣವನ್ನೂ ಕೊಡ್ತಾ ಇದ್ದೀವಿ, ತಂತ್ರಜ್ಞಾನವನ್ನು ಕೊಡ್ತಾ ಇದ್ದೀವಿ. ಆದರೆ ಕೆಲಸ ಮಾಡಲು ರೆಡಿ ಇಲ್ಲ. ಅಷ್ಟು ಮನೆಮುರಕತನ. 

ತೀರ್ಮಾನ ಮಾಡಿದೆ ಇಡೀ ದೇಶದಲ್ಲಿ 85,000 ಜನರನ್ನು ತೆಗೀತಾ ಇದ್ದೀವಿ. ಮುಂದಿನ ದಿನಗಳಲ್ಲಿ ಇನ್ನಷ್ಟು ತೆಗೆಯಬೇಕಾದ ಅಗತ್ಯ ಬರಬಹುದು. ಏನಾದರೂ ಸರಿ, ಮೇಜರ್ ಸರ್ಜರಿ ಆದರೂ ಸರಿ. ಅದನ್ನು ಸರಿ ಮಾಡಲು ಬಿಎಸ್‌ಎನ್‌ಎಲ್‌ನ್ನು ಖಾಸಗೀಕರಣ ಮಾಡುತ್ತೀವಿ. ಇದೊಂದೇ ದಾರಿ, ಮತ್ತೆ ಬೇರೆ ದಾರಿ ಇಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು