ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಕೋಟಿ ರೂಪಾಯಿ ಲಂಚದ ಆರೋಪ: ಬಿಎಸ್‌ವೈ ಕುಟುಂಬವನ್ನೇ ಸುತ್ತಿಕೊಂಡ ಪ್ರಕರಣ

₹ 12.5 ಕೋಟಿ ಲಂಚ, ವಾಟ್ಸ್‌ ಆ್ಯಪ್‌ ಸಂಭಾಷಣೆ, ಬ್ಯಾಂಕ್‌ ದಾಖಲೆಗಳೇ ಮಹತ್ವದ ಸಾಕ್ಷ್ಯ
Last Updated 17 ಸೆಪ್ಟೆಂಬರ್ 2022, 16:37 IST
ಅಕ್ಷರ ಗಾತ್ರ

ಬೆಂಗಳೂರು: ಬಿಡಿಎ ವತಿಯಿಂದ ವಸತಿ ಸಮುಚ್ಚಯ ನಿರ್ಮಾಣಕ್ಕೆ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂತಿಮಗೊಳಿಸಿದ್ದ ಗುತ್ತಿಗೆ ಯನ್ನು ಮುಂದುವರಿಸುವುದಕ್ಕೆ ಒತ್ತಡ ಹೇರಿ ಬಹುಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪ ಬಿಜೆಪಿ ಶಾಸಕ ಬಿ.ಎಸ್‌. ಯಡಿಯೂರಪ್ಪ ಅವರ ಕುಟುಂಬವನ್ನೇ ಸುತ್ತಿಕೊಂಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾ ಲಯದ ಆದೇಶದಂತೆ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣ ದಲ್ಲಿ ಯಡಿಯೂರಪ್ಪ ಅವರ ಕುಟುಂಬದ ಐವರು ಆರೋಪಿಗಳಾಗಿದ್ದಾರೆ. ಮಗ, ಅಳಿಯ, ಮೊಮ್ಮಗ ಮತ್ತು ಮಗಳ ಅಳಿಯನ ಹೆಸರು ಆರೋಪಿಗಳ ಸಾಲಿನಲ್ಲಿದೆ.

‘ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂತಿಮಗೊಳಿಸಿದ್ದ ಗುತ್ತಿಗೆ ಮುಂದುವರಿಸಲು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ₹ 12 ಕೋಟಿ ಲಂಚ ನೀಡುವಂತೆ ಬಿಡಿಎ ಆಯುಕ್ತರಾಗಿದ್ದ ಜಿ.ಸಿ. ಪ್ರಕಾಶ್‌, ಗುತ್ತಿಗೆದಾರ ಚಂದ್ರಕಾಂತ್‌ ರಾಮಲಿಂಗಂ ಬಳಿ ಬೇಡಿಕೆ ಇಟ್ಟಿದ್ದರು. ಗುತ್ತಿಗೆದಾರರ ಪರವಾಗಿ 37 ಕ್ರೆಸೆಂಟ್‌ ಹೋಟೆಲ್‌ ಮಾಲೀಕ ಕೆ. ರವಿ ಅವರಿಂದ ₹ 12 ಕೋಟಿಯನ್ನು ಪಡೆದುಕೊಂಡು, ವಿಜಯೇಂದ್ರ ಅವರಿಗೆ ತಲುಪಿಸುವುದಾಗಿ ಹೇಳಿದ್ದರು. ಆದರೆ, ಆ ಹಣ ತಲುಪಿಲ್ಲ ಎಂದು ಮತ್ತೆ ತಕರಾರು ತೆಗೆದು ₹ 12.5 ಕೋಟಿ ಯನ್ನು ಸುಲಿಗೆ ಮಾಡಲಾಗಿತ್ತು’ ಎಂಬ ಆರೋಪ ಎಫ್‌ಐಆರ್‌ನಲ್ಲಿದೆ.

‘ಬಿಡಿಎ ಗುತ್ತಿಗೆ ಮಾತ್ರವಲ್ಲದೇ ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯ ತುಂಗಾ ನಾಲೆ ಆಧುನೀಕರಣ, ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳ ಕಾಮಗಾರಿಗಳು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಇಲಾಖೆಗಳ ಕಾಮಗಾರಿ
ಗಳನ್ನು ಕೊಡಿಸುವಂತೆ ಗುತ್ತಿಗೆದಾರರು ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ ಮರಡಿ ಬಳಿ ವಿನಂತಿಸಿಕೊಂಡಿದ್ದರು.

ಆ ಬಳಿಕ ಲಂಚದ ಕುರಿತೂ ಚರ್ಚಿಸಿರುವುದು ವಾಟ್ಸ್‌ ಆ್ಯಪ್‌
ಸಂಭಾಷಣೆಯಲ್ಲಿದೆ’ ಎಂಬ ಉಲ್ಲೇಖವಿದೆ.

‘₹ 12.5 ಕೋಟಿ ತಲುಪಿರುವ ಕುರಿತು ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ ವಾಟ್ಸ್‌ ಆ್ಯಪ್‌ ಸಂಭಾಷಣೆಯಲ್ಲಿ ಚಂದ್ರಕಾಂತ್‌ ರಾಮಲಿಂಗಂ ಅವರಿಗೆ ಖಚಿತಪಡಿಸಿರುವ ದಾಖಲೆ ಇದೆ’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಇದೇ ಆರೋಪಗಳ ಕುರಿತು ತನಿಖೆಗೆ ಆದೇಶಿಸುವಂತೆ ಟಿ.ಜೆ. ಅಬ್ರಹಾಂ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ದೂರನ್ನು ವಜಾಗೊಳಿಸಿ ವಿಶೇಷ ನ್ಯಾಯಾಲಯ 2021ರ ಜುಲೈ 8ರಂದು ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಅಬ್ರಹಾಂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಹೈಕೋರ್ಟ್‌ ಇದೇ 7ರಂದು ಆದೇಶ ಹೊರಡಿಸಿತ್ತು. ಪುನಃ ವಿಚಾರಣೆ ಆರಂಭಿಸಿದ ವಿಶೇಷ ನ್ಯಾಯಾಲಯ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇ ಶನ ನೀಡಿ ಬುಧವಾರ ಆದೇಶ ಹೊರಡಿ ಸಿತ್ತು.

ಶೆಲ್‌ ಕಂಪನಿಗಳ ಬಳಕೆ

ಲಂಚದ ಹಣವನ್ನು ಶಶಿಧರ ಮರಡಿ ಮತ್ತು ಸಂಜಯ್‌ ಶ್ರೀ ಕೋಲ್ಕತ್ತ ವಿಳಾಸದಲ್ಲಿ ನೋಂದಣಿಯಾಗಿರುವ ರಾಜ್‌ಗರಾನಾ ಸೇಲ್ಸ್‌ ಪ್ರೈವೇಟ್‌ ಲಿಮಿಟೆಡ್‌, ನವ್‌ಟೆಕ್‌ ಕ್ರಿಯೇಷನ್ಸ್‌ ಪ್ರೈ.ಲಿ., ಗನ್ನಾಯಕ್‌ ಕಮಾಡಿಟೀಸ್‌ ಪ್ರೈ.ಲಿ., ಜಗದಾಂಬ ಕಮೋಸೇಲ್ಸ್‌ ಪ್ರೈ.ಲಿ., ರಮ್ಯಾಕ್‌ ಡಿಸ್ಟ್ರಿಬ್ಯೂಟರ್ಸ್‌ ಪ್ರೈ.ಲಿ., ಶಾಕಾಂಬರಿ ಮರ್ಚಂಟ್ಸ್‌ ಪ್ರೈ.ಲಿ. ಮತ್ತು ಸ್ಟ್ರಾಟಜಿಕ್‌ ವಿಂಕೋಮ್‌ ಪ್ರೈ.ಲಿ. ಎಂಬ ‘ಶೆಲ್‌’ ಕಂಪನಿಗಳ ಖಾತೆಗೆ ಹಾಕುತ್ತಿದ್ದರು. ಬಳಿಕ ಈ ಇಬ್ಬರೇ ಪಾಲುದಾರರಾಗಿರುವ ಬೆಲ್‌ಗ್ರಾವಿಯ ಎಂಟರ್‌ಪ್ರೈಸಸ್‌ ಪ್ರೈ.ಲಿ. ಮತ್ತು ವಿಎಸ್‌ಎಸ್‌ ಸ್ಟೇಟ್ಟ್‌ ಮತ್ತಿತರ ಕಂಪನಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂಬುದು ಎಫ್‌ಐಆರ್‌ನಲ್ಲಿದೆ.

ಸವಾಲು ಹಾಕಿದ್ದ ಯಡಿಯೂರಪ್ಪ

ಇದೇ ಪ್ರಕರಣ 2020ರ ಸೆಪ್ಟೆಂಬರ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಪ್ರಕರಣದ ಕುರಿತು ತನಿಖೆಗೆ ಆದೇಶಿಸುವಂತೆ ವಿರೋಧ ಪಕ್ಷ ಕಾಂಗ್ರೆಸ್‌ ಪಟ್ಟು ಹಿಡಿದಿತ್ತು.

‘ನೀವು ಮಾಡುತ್ತಿರುವ ಆರೋಪದ ಕುರಿತು ಸಿಬಿಐ ಅಥವಾ ಲೋಕಾ ಯುಕ್ತಕ್ಕೆ ಹೋಗಿ. ಹೈಕೋರ್ಟ್‌ಗಾದರೂ ಹೋಗಿ ತನಿಖೆ ಮಾಡಿಸಿ. ಸತ್ಯಾಂಶವಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ’ ಎಂದು ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ 2020ರ ಸೆಪ್ಟೆಂಬರ್‌ 26ರಂದು ವಿಧಾನಸಭೆಯಲ್ಲಿ ಸವಾಲು ಹಾಕಿದ್ದರು.

ಯಾವ ಸೆಕ್ಷನ್‌ಗಳಡಿ ಪ್ರಕರಣ?

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ

ಸೆಕ್ಷನ್‌ 7– ಸಾರ್ವಜನಿಕ ನೌಕರನಿಂದ ಲಂಚಕ್ಕೆ ಬೇಡಿಕೆ.

ಸೆಕ್ಷನ್‌ 8– ಸಾರ್ವಜನಿಕ ನೌಕರನ ಮೇಲೆ ಪ್ರಭಾವ ಬೀರಲು ಲಂಚಕ್ಕೆ ಬೇಡಿಕೆ.

ಸೆಕ್ಷನ್‌ 9– ಸರ್ಕಾರಿ ಅಧಿಕಾರಿಯ ಮೇಲೆ ವೈಯಕ್ತಿಕ ಪ್ರಭಾವ ಬೀರಲು ಲಂಚಕ್ಕೆ ಬೇಡಿಕೆ.

ಸೆಕ್ಷನ್‌ 10– ಮೇಲಿನ ಆರೋಪಗಳಿಗೆ ಶಿಕ್ಷೆಯ ಪ್ರಮಾಣ

ಸೆಕ್ಷನ್‌ 13– ಸಾರ್ವಜನಿಕ ನೌಕರರು ತಮ್ಮ ಕರ್ತವ್ಯ ನಿರ್ವಹಿಸಲು ಲಂಚ ಪಡೆದಿರುವುದು.


ಭಾರತೀಯ ದಂಡ ಸಂಹಿತೆ (ಐಪಿಸಿ)

ಸೆಕ್ಷನ್‌ 383– ಸುಲಿಗೆ

ಸೆಕ್ಷನ್‌ 384– ಮೇಲಿನ ಆರೋಪಕ್ಕೆ ಮೂರು ವರ್ಷಗಳವರೆಗೆ ಜೈಲು.

ಸೆಕ್ಷನ್‌ 415– ಮೋಸ.

ಸೆಕ್ಷನ್‌ 418– ನಷ್ಟವಾಗಲಿದೆ ಎಂದು ತಿಳಿದೂ ಮೋಸ ಮಾಡುವುದು.

ಸೆಕ್ಷನ್‌ 420– ವಂಚನೆ.

ಸೆಕ್ಷನ್‌ 120ಬಿ– ಕ್ರಿಮಿನಲ್‌ ಒಳಸಂಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT