ಬುಧವಾರ, ಜೂನ್ 29, 2022
25 °C

ಕಾಂಗ್ರೆಸ್‌ ತ್ಯಜಿಸಿದ ಸಿ.ಎಂ. ಇಬ್ರಾಹಿಂ: ಸೋನಿಯಾಗೆ ರಾಜೀನಾಮೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಇಬ್ರಾಹಿಂ, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಕಾರಣದಿಂದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಪತ್ರವನ್ನು ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

‘ವಿಧಾನ ಪರಿಷತ್‌ನಲ್ಲಿ 18 ಸದಸ್ಯರ ಬೆಂಬಲ ನನಗೆ ಇತ್ತು. ಆದರೆ, ಪರಿಷತ್‌ ಸದಸ್ಯರಲ್ಲೇ ಕಿರಿಯರಾದ ಬಿ.ಕೆ. ಹರಿಪ್ರಸಾದ್‌ ಅವರನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನೇಮಿಸಲಾಗಿದೆ. ಪಕ್ಷದ ಬೆಳವಣಿಗೆಗಳ ಕುರಿತು ನಿಮ್ಮನ್ನು ಹಾಗೂ ರಾಹುಲ್‌ ಗಾಂಧಿಯವರನ್ನು ಭೇಟಿಮಾಡಿ ಚರ್ಚಿಸಲು ಮುಕ್ತ ಅವಕಾಶವೇ ದೊರೆಯಲಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಿ. ವಿಧಾನ ಪರಿಷತ್‌ ಸದಸ್ಯತ್ವಕ್ಕೂ ರಾಜೀನಾಮೆ ಪತ್ರವನ್ನು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮುಖಾಂತರ ಸಭಾಪತಿಯವರಿಗೆ ಕಳುಹಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹಿಂ, ‘ಕಾಂಗ್ರೆಸ್‌ ಪಕ್ಷದಲ್ಲಿ ಸ್ವಾಭಿಮಾನಕ್ಕೆ ಜಾಗವಿಲ್ಲ. ಆದ್ದರಿಂದ ರಾಜೀನಾಮೆ ನೀಡಿದ್ದೇನೆ. ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ನಾನು ಧ್ವನಿ ಎತ್ತಿದ ಬಳಿಕ ಯು.ಟಿ. ಖಾದರ್‌ ಅವರಿಗೆ ವಿಧಾನಸಭೆ ವಿರೋಧಪಕ್ಷದ ಉಪ ನಾಯಕನ ಸ್ಥಾನ ನೀಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ಅವರಿಗಾಗಿ ಕಾಂಗ್ರೆಸ್‌ ಸೇರಿದ್ದೆ. ಅವರೇ ನಡು ನೀರಿನಲ್ಲಿ ಕೈಬಿಟ್ಟರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ನಾನು ದೇವೇಗೌಡರ ಮನೆಗೆ ಹೋದರೆ ಹಲವರಿಗೆ ಉರಿಯುತ್ತದೆ. ಶಾಸಕ ಶಾಮನೂರು ಶಿವಶಂಕರಪ್ಪ ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಪರ ಹೇಳಿಕೆ ಕೊಟ್ಟರೂ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜೆಡಿಎಸ್‌ ಪಕ್ಷ ನನಗೆ ಸರಿ ಹೊಂದುತ್ತದೆ. ಯಾವುದೇ ಷರತ್ತಿಲ್ಲದೆ ಜೆಡಿಎಸ್‌ ಸೇರುತ್ತಿದ್ದೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು