ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಂದ ಯಾರೂ ತಬ್ಬಲಿಯಾಗುವುದಿಲ್ಲ: ಸಿದ್ದರಾಮಯ್ಯ

‘ಇಬ್ರಾಹಿಂಗೆ ರಾಜ್ಯಸಭಾ ಸದಸ್ಯತ್ವ ತಪ್ಪಿಸಿದ್ದೇ ದೇವೇಗೌಡರು’
Last Updated 28 ಜನವರಿ 2022, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ಜನರ ಪ್ರೀತಿ ಇರುವವರೆಗೆ ಯಾರಿಂದ ಯಾರೂ ತಬ್ಬಲಿಯಾಗುವುದಿಲ್ಲ. ನಾನಾದರೂ ಅಷ್ಟೇ, ಸಿ.ಎಂ. ಇಬ್ರಾಹಿಂ ಆದರೂ ಅಷ್ಟೇ. ಜನರ ಪ್ರೀತಿಯೇ ಮುಖ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕನ ಹುದ್ದೆ ಕೈತಪ್ಪಿರುವುದರಿಂದ ಕಾಂಗ್ರೆಸ್‌ ತ್ಯಜಿಸುವುದಾಗಿ ಸಿ.ಎಂ. ಇಬ್ರಾಹಿಂ ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಇಬ್ರಾಹಿಂ ಅವರು ಪಕ್ಷ ತೊರೆಯುವುದಿಲ್ಲ, ಜೆಡಿಎಸ್‌ಗೂ ಹೋಗುವುದಿಲ್ಲ. ಹಿಂದೆ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನವನ್ನು ತಪ್ಪಿಸಿದ್ದೇ ಎಚ್‌.ಡಿ. ದೇವೇಗೌಡರು. ಹೀಗಾಗಿ ಇಬ್ರಾಹಿಂ ಮತ್ತೆ ಅವರ ಜತೆ ಹೋಗುವುದಿಲ್ಲ ಎಂದು ನನಗೆ ಅನಿಸುತ್ತದೆ’ ಎಂದರು.

‘ಇಬ್ರಾಹಿಂ ಕೋಪದಲ್ಲಿ ಮಾತನಾಡಿರಬಹುದು. ನಾನು ಅವರೊಂದಿಗೆ ಮಾತನಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂಬುದು ಅವರಿಗೂ ಗೊತ್ತಿದೆ’ ಎಂದು ಹೇಳಿದರು.

‘ಬಾದಾಮಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನಗೆ ಹೇಳಿದವರಲ್ಲಿ ಇಬ್ರಾಹಿಂ ಕೂಡ ಒಬ್ಬರು. ಅವರು ನನಗೆ ಒಳ್ಳೆಯ ಸ್ನೇಹಿತ. ನನ್ನ ಬಗ್ಗೆ ಏನೇ ಹೇಳಿದರೂ ನನಗೆ ಶುಭ ಹಾರೈಸಿದಂತೆ ಎಂದುಕೊಳ್ಳುವೆ’ ಎಂದರು.

ನಾರಾಯಣ ಗುರುಗಳ ಸ್ತಬ್ಧಚಿತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ವಿ. ಸುನಿಲ್‌ ಕುಮಾರ್‌ ತಮ್ಮ ವಿರುದ್ಧ ಮಾಡಿರುವ ಟೀಕೆಗಳ ಕುರಿತು ಪ್ರತಿಕ್ತಿಯಿಸಿದ ಸಿದ್ದರಾಮಯ್ಯ, ‘ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದಿರುವ ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಅವರು ಹಿಂದುತ್ವದ ಹೆಸರಿನಲ್ಲಿ ಸಮಾಜ ಒಡೆಯುವವರು. ನಾವು ಹಿಂದೂಗಳು ಒಟ್ಟಿಗೆ ಬಾಳಲು ಕರೆ ಕೊಡುವವರು’ ಎಂದರು.

ಹಿಂದೂ ಬೇರೆ, ಹಿಂದುತ್ವ ಬೇರೆ. ಕರಾವಳಿ ಯಾರ ಭದ್ರಕೋಟೆಯೂ ಅಲ್ಲ. 2013ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಏಳು ಸ್ಥಾನ ಗೆದ್ದಿತ್ತು. ಬಿಜೆಪಿ ಗೆದ್ದಿದ್ದು ಒಂದೇ ಕ್ಷೇತ್ರದಲ್ಲಿ ಎಂದು ಹೇಳಿದರು.

ಕ್ರಮಕ್ಕೆ ಆಗ್ರಹ: ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಸ್ಥಳದಿಂದ ರಾಯಚೂರು ಜಿಲ್ಲಾ ನ್ಯಾಯಾಧೀಶರು ಸಂವಿಧಾನ ರಚನಾ ಸಮಿತಿ ಅಧ್ಯಕ್ಷ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆಸಿರುವುದು ಅಕ್ಷಮ್ಯ ಅಪರಾಧ. ಅವರ ವಿರುದ್ಧ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರು ಕ್ರಮ ಜರುಗಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಈ ಸರ್ಕಾರದ ಸಚಿವರು ಮತ್ತು ಶಾಸಕರು, ತಾವೇ ರೂಪಿಸಿದ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಅವರಿಗೆ ಕೋವಿಡ್‌ ನಿಯಂತ್ರಣ ನಿಯಮಗಳು ಅನ್ವಯಿಸುವುದಿಲ್ಲವೆ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT