ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

438 ಕಡೆ ‘ನಮ್ಮ ಕ್ಲಿನಿಕ್‌’: ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಘೋಷಿಸಿದ್ದ ಯೋಜನೆ

1,314 ಹುದ್ದೆಗಳ ನೇಮಕಕ್ಕೆ ಒಪ್ಪಿಗೆ
Last Updated 2 ಜುಲೈ 2022, 4:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಒಟ್ಟು 438 ನಗರ ಪ್ರಾಥಮಿಕ ಕೇಂದ್ರಗಳನ್ನು (ನಮ್ಮ ಕ್ಲಿನಿಕ್‌) ಆರಂಭಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಬಿಬಿಎಂಪಿಯ ಎಲ್ಲ ವಾರ್ಡ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ‘ನಮ್ಮ ಕ್ಲಿನಿಕ್‌’ಗಳನ್ನು ಆರಂಭಿಸಲಾಗುವುದು. ಇದಕ್ಕಾಗಿ 15 ನೇ ಹಣಕಾಸು ಆಯೋಗದ ಅನುದಾನದಡಿ ₹155 ಕೋಟಿ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಇಲ್ಲಿ ಕಾರ್ಯ ನಿರ್ವಹಿಸಲು 438 ವೈದ್ಯರು ಮತ್ತು 438 ನರ್ಸ್‌ಗಳ ಹುದ್ದೆಗಳ ಸೃಷ್ಟಿಸಿ, ನೇಮಕ ಮಾಡಿಕೊಳ್ಳಲಾಗುವುದು. ‘ಡಿ’ ದರ್ಜೆಯಡಿ 438 ಸಿಬ್ಬಂದಿಯನ್ನು ತಾತ್ಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ‘ನಮ್ಮ ಕ್ಲಿನಿಕ್‌’ಗೆ ತಲಾ ₹36.45 ಲಕ್ಷ ಮತ್ತು ಇತರ ಕಡೆಗಳಲ್ಲಿ ₹34.50 ಲಕ್ಷ ವೆಚ್ಚ ಮಾಡಲಾಗುವುದು. ಜ್ವರ, ನೆಗಡಿ, ಶೀತ ಸಂಬಂಧಿಸಿದಂತೆ ಸಣ್ಣ– ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ಮಧುಮೇಹ, ರಕ್ತದೊತ್ತಡದಂತಹ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಗುವುದು. ಪ್ರಯೋಗಾಲಯ ಸೇವೆಯೂ ಇಲ್ಲಿ ಇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು.

ಹಟ್ಟಿದ ಚಿನ್ನದ ಗಣಿ:ಹಟ್ಟಿ ಚಿನ್ನದ ಗಣಿ ಕಂಪನಿಯು ಸರ್ಕಾರದಿಂದ ಗುತ್ತಿಗೆ ಪಡೆದ ಭೂಮಿಯ ಉತ್ತರ ಭಾಗದಲ್ಲಿ ಚಿನ್ನದ ನಿಕ್ಷೇಪವಿದ್ದು, ಅಲ್ಲಿ ಗಣಿಗಾರಿಕೆ ನಡೆಸಲು ಭೂ ಕೆಳಮೈ ಮುಕ್ತ ಪ್ರವೇಶವನ್ನು ಕಲ್ಪಿಸುವ ಉದ್ದೇಶಕ್ಕಾಗಿ ₹307.95 ಕೋಟಿ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಮಾಧುಸ್ವಾಮಿ ಹೇಳಿದರು.

ಚಿತ್ರದುರ್ಗದ ಮುರುಘಾಮಠದ ಆವರಣದಲ್ಲಿ 325 ಅಡಿ ಎತ್ತರದ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ₹20 ಕೋಟಿ ಅನುದಾನ ನೀಡಿದ್ದು, ಹೆಚ್ಚುವರಿಯಾಗಿ ₹10 ಕೋಟಿ ಘಟನೋತ್ತರ ಅನುಮೋದನೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT