ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ಕಲ್ಲು ಗಣಿಗಳ ಒತ್ತುವರಿಗೆ ರಿಯಾಯ್ತಿ

ಉಪ ಖನಿಜ ನಿಯಮಗಳ ತಿದ್ದುಪಡಿ ಪ್ರಸ್ತಾವಕ್ಕೆ ಸಂಪುಟದ ಅನುಮೋದನೆ
Last Updated 20 ಜನವರಿ 2023, 15:29 IST
ಅಕ್ಷರ ಗಾತ್ರ

ಬೆಂಗಳೂರು: ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿ ಆಕಸ್ಮಿಕವಾಗಿ ಗುತ್ತಿಗೆ ಹೊರಭಾಗದಲ್ಲಿ ನಡೆದ ಗಣಿಗಾರಿಕೆಯನ್ನು ಮೂಲ ಗುತ್ತಿಗೆ ಪ್ರದೇಶಕ್ಕೆ ಹೊಂದಾಣಿಕೆ ಮಾಡಲು ಅವಕಾಶ ಕಲ್ಪಿಸುವುದಕ್ಕೆ ಪೂರಕವಾಗಿ ಕರ್ನಾಟಕ ಉಪ ಖನಿಜ ರಿಯಾಯ್ತಿ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆ ನಡೆಸುವವರು ಕೆಲವು ಸಂದರ್ಭಗಳಲ್ಲಿ ಅರಿವಿಲ್ಲದೆ ಅಥವಾ ಆಕಸ್ಮಿಕವಾಗಿ ಗುತ್ತಿಗೆ ಪ್ರದೇಶದ ಬದಲಿಗೆ ಇನ್ನೊಂದು ಸ್ಥಳದಲ್ಲಿ ಗಣಿಗಾರಿಕೆ ನಡೆಸಿರುತ್ತಾರೆ. ಅಂತಹ ಪ್ರಕರಣಗಳಲ್ಲಿ ವಾಸ್ತವಿಕ ಸ್ಥಿತಿಯ ವರದಿ ಆಧರಿಸಿ, ಗಣಿಗಾರಿಕೆ ನಡೆಸಿದ ವಿಸ್ತೀರ್ಣವನ್ನು ಗುತ್ತಿಗೆ ಪ್ರದೇಶದ ಜತೆ ಹೊಂದಾಣಿಕೆ ಮಾಡಲು ತಿದ್ದುಪಡಿ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದರು.

ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ. ಆದರೆ, ಸಣ್ಣ ಪುಟ್ಟ ಲೋಪಗಳಿಂದ ಕಾನೂನು ಇಕ್ಕಟ್ಟಿನಲ್ಲಿ ಸಿಲುಕಿರುವ ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆ ನಡೆಸುವವರಿಗೆ ನೆರವಾಗುವ ದೃಷ್ಟಿಯಿಂದ ಈ ತಿದ್ದುಪಡಿ ತರಲಾಗುತ್ತಿದೆ ಎಂದು ತಿಳಿಸಿದರು.

ಸೆಸ್‌ ಹೆಚ್ಚಳಕ್ಕೆ ಒಪ್ಪಿಗೆ: ಎಸ್‌. ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಸಂಸ್ಥೆಯ ನಿರ್ವಹಣೆಗಾಗಿ ಸಕ್ಕರೆ ಕಾರ್ಖಾನೆಗಳಿಂದ ಸಂಗ್ರಹಿಸುವ ಸೆಸ್‌ ಮೊತ್ತ ಹೆಚ್ಚಿಸಲು ‘ಕರ್ನಾಟಕ ಸಕ್ಕರೆ (ಉತ್ಪಾದನಾ ನಿಯಂತ್ರಣ) ಆದೇಶ 2022’ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ದಿನವೊಂದಕ್ಕೆ 2,500 ಟನ್‌ಗಳಿಗಿಂತ ಕಡಿಮೆ ಕಬ್ಬು ಅರೆಯುವ ಸಕ್ಕರೆ ಕಾರ್ಖಾನೆಗೆ ವಿಧಿಸುತ್ತಿದ್ದ ಸೆಸ್‌ ಮೊತ್ತವನ್ನು ₹ 10,000 ದಿಂದ ₹ 50,000ಕ್ಕೆ, ದಿನವೊಂದಕ್ಕೆ 2,500 ದಿಂದ 5,000 ಟನ್‌ ಕಬ್ಬು ಅರೆಯುವ ಕಾರ್ಖಾನೆಗಳಿಗೆ ವಿಧಿಸುವ ಸೆಸ್‌ ಮೊತ್ತವನ್ನು ₹ 15,000ದಿಂದ ₹ 1 ಲಕ್ಷಕ್ಕೆ, 5,000 ಟನ್‌ಗಳಿಗಿಂತ ಹೆಚ್ಚು ಕಬ್ಬು ಅರೆಯುವ ಕಾರ್ಖಾನೆಗಳ ಸೆಸ್‌ ಮೊತ್ತವನ್ನು ₹25,000 ದಿಂದ ₹ 1.5 ಲಕ್ಷಕ್ಕೆ ಹಾಗೂ 15,000 ಟನ್‌ಗಳಿಗಿಂತ ಹೆಚ್ಚು ಕಬ್ಬು ಅರೆಯುವ ಕಾರ್ಖಾನೆಗಳಿಗೆ ವಿಧಿಸುವ ಸೆಸ್‌ ಮೊತ್ತವನ್ನು ₹ 1 ಲಕ್ಷದಿಂದ ₹ 2 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಸೆಸ್‌ನಿಂದ ಸಂಗ್ರಹವಾಗುವ ಹಣದಲ್ಲೇ ಸಕ್ಕರೆ ಸಂಶೋಧನಾ ಸಂಸ್ಥೆ ನಡೆಸಲಾಗುತ್ತಿದೆ. ಈಗ ಸಂಸ್ಥೆಗೆ ಹಣಕಾಸಿನ ಕೊರತೆ ಎದುರಾಗಿದೆ. 30 ವರ್ಷಗಳಿಂದ ಸೆಸ್‌ ಪರಿಷ್ಕರಣೆ ನಡೆದಿರಲಿಲ್ಲ. ಈಗ ಸೆಸ್‌ ಹೆಚ್ಚಳಕ್ಕ ತೀರ್ಮಾನಿಸಲಾಗಿದೆ ಎಂದರು.

ನಮ್ಮ ಕ್ಲಿನಿಕ್‌: ಪ್ರಧಾನಮಂತ್ರಿ– ಅಭೀಮ್‌ ಯೋಜನೆಯಡಿ 114 ನಗರ ಅರೋಗ್ಯ ಕ್ಷೇಮ ಕೇಂದ್ರಗಳಲ್ಲಿ ನಮ್ಮ ಕ್ಲಿನಿಕ್‌ ಆರಂಭಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ. ಕೇಂದ್ರ ಸರ್ಕಾರ ಈ ಕ್ಲಿನಿಕ್‌ಗಳ ಆರಂಭಕ್ಕೆ ₹ 100 ಕೋಟಿ ಅನುದಾನ ಒದಗಿಸಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿರುವ 847 ಆರೋಗ್ಯ ಉಪ ಕೇಂದ್ರಗಳನ್ನು ₹ 71.56 ಕೋಟಿ ವೆಚ್ಚದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೂ ಒಪ್ಪಿಗೆ ದೊರಕಿದೆ ಎಂದರು.

ವಿದ್ಯಾರ್ಥಿನಿಲಯ, ವಸತಿ ಶಾಲೆ ಆರಂಭಕ್ಕೆ ಒಪ್ಪಿಗೆ

2022ರ ಬಜೆಟ್‌ನಲ್ಲಿ ಘೋಷಿಸಿದ್ದಂತೆ ರಾಜ್ಯದಾದ್ಯಂತ 100 ಡಾ.ಬಿ.ಆರ್‌. ಅಂಬೇಡ್ಕರ್‌ ವಸತಿ ನಿಲಯ ಆರಂಭಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ₹ 600 ಕೋಟಿ ವೆಚ್ಚ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಮೂಲಕ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ, ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ವಡ್ಡರ್ಸೆ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಜಾಲಿ ಗ್ರಾಮ ಹಾಗೂ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಹಿರೇಶಕುನ ಗ್ರಾಮಗಳಲ್ಲಿ ಒಟ್ಟು ₹ 72 ಕೋಟಿ ವೆಚ್ಚದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭಿಸುವ ಪ್ರಸ್ತಾವಕ್ಕೂ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಯೋಜನೆಯನ್ನೂ 2022ರ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು.

ಉಚಿತ ನೇತ್ರ ಚಿಕಿತ್ಸೆ ಯೋಜನೆ ಪರಿಷ್ಕರಣೆಗೆ ಸೂಚನೆ

ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಎಲ್ಲ ವಯೋಮಾನ ಹಾಗೂ ಎಲ್ಲ ವರ್ಗದ ಜನರಿಗೆ ಉಚಿತವಾಗಿ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ ನಡೆಸಿ, ಕನ್ನಡಕ ವಿತರಿಸುವ ₹ 31.10 ಕೋಟಿ ವೆಚ್ಚದ ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ಕೋರಿದ್ದ ಪ್ರಸ್ತಾವವನ್ನು ಸಂಪುಟ ಸಭೆಯಲ್ಲಿ ತಡೆಹಿಡಿಯಲಾಗಿದೆ.

‘ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿ ಯೋಜನೆ ಅನುಷ್ಠಾನಗೊಳಿಸುವುದಕ್ಕೆ ಹಲವು ಸಚಿವರು ಆಕ್ಷೇಪ ಎತ್ತಿದರು. ಪ್ರಸ್ತಾವವನ್ನು ತಡೆಹಿಡಿಯುವಂತೆ ಸೂಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಾದ್ಯಂತ ಯೋಜನೆ ವಿಸ್ತರಿಸಲು ಪರಿಷ್ಕೃತ ಪ್ರಸ್ತಾವ ಸಲ್ಲಿಸುವಂತೆ ಇಲಾಖೆಗೆ ಸೂಚಿಸಿದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT