ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿರಿಯ ಸಚಿವರ ಜತೆ ಚರ್ಚಿಸಿ ಖಾತೆ ಹಂಚಿಕೆ’

Last Updated 19 ಜನವರಿ 2021, 0:51 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಂಗಳವಾರ ಸಂಜೆ ಹಿರಿಯ ಸಚಿವರ ಜತೆ ಚರ್ಚೆ ನಡೆಸಿ ಬಳಿಕ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

‘ಉಡುಪಿಯಿಂದ ಮಂಗಳವಾರ ಮಧ್ಯಾಹ್ನ ವಾ‍ಪಸ್‌ ಬಂದ ನಂತರ ಹಿರಿಯ ಸಚಿವರ ಜತೆ ಚರ್ಚಿಸುತ್ತೇನೆ. ಬಳಿಕ ಸಂಜೆ ಅಥವಾ ಬುಧವಾರ ಯಾರಿಗೆ ಯಾವ ಖಾತೆ ಎಂಬುದನ್ನು ಪ್ರಕಟಿಸುತ್ತೇನೆ’ ಎಂದು ಅವರು ಹೇಳಿದರು.

ಇತ್ತೀಚೆಗೆ ಸಂಪುಟ ಸೇರಿದ ಉಮೇಶ ಕತ್ತಿ, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಎಂ.ಟಿ.ಬಿ.ನಾಗರಾಜ್, ಎಸ್‌.ಶಂಕರ್‌, ಸಿ.ಪಿ.ಯೋಗೇಶ್ವರ್‌ ಮತ್ತು ಎಸ್‌.ಅಂಗಾರ ಅವರಿಗೆ ಖಾತೆಗಳನ್ನು ಹಂಚಬೇಕಾಗಿದೆ. ಅಲ್ಲದೆ, ಕೆಲವು ಸಚಿವರ ಖಾತೆಗಳೂ ಬದಲಾವಣೆ ಆಗುವ ಸಾಧ್ಯತೆ. ಇವರಲ್ಲಿ ಕೆಲವು ಹಿರಿಯ ಸಚಿವರು ಖಾತೆಗಳನ್ನು ಬದಲಿಸುವಂತೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆ ಆದವರಲ್ಲಿ ಕೆಲವರು ಪ್ರಬಲ ಖಾತೆಗಳಿಗಾಗಿ ಲಾಬಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯವರು ತಮ್ಮಲ್ಲಿರುವ ಹೆಚ್ಚುವರಿ ಖಾತೆಗಳನ್ನು ಹೊಸಬರಿಗೆ ಹಂಚುವುದರ ಜತೆಗೆ, ಸಿ.ಟಿ.ರವಿ ಮತ್ತು ಎಚ್‌.ನಾಗೇಶ್ ಅವರ ರಾಜೀನಾಮೆಯಿಂದ ಖಾಲಿ ಇರುವ ಕನ್ನಡ ಮತ್ತು ಸಂಸ್ಕೃತಿ, ಕ್ರೀಡೆ, ಯುವಜನ ಸಬಲೀಕರಣ, ಅಬಕಾರಿ ಖಾತೆಗಳನ್ನೂ ಹಂಚಿಕೆ ಮಾಡಬೇಕಿದೆ. ಈಗಾಗಲೇ ಪಕ್ಷದ ವಲಯದಲ್ಲಿ ಇಂಧನ ಖಾತೆನಿರಾಣಿಗೆ, ಪ್ರವಾಸೋದ್ಯಮ ಉಮೇಶ ಕತ್ತಿಗೆ, ಬೆಂಗಳೂರು ಅಭಿವೃದ್ಧಿ ಅರವಿಂದ ಲಿಂಬಾವಳಿ ಅವರಿಗೆ ನೀಡಬಹುದು ಎಂಬ ಚರ್ಚೆ ನಡೆಸಿದೆ.

ಆದರೆ, ಕತ್ತಿ ಪ್ರವಾಸೋದ್ಯಮಕ್ಕಿಂತ ಮಹತ್ವದ ಖಾತೆಗಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇಂಧನ ಖಾತೆ ಆದರೂ ಅಡ್ಡಿ ಇಲ್ಲ ಎಂಬ ಮನಸ್ಥಿತಿಯಲ್ಲಿನಿರಾಣಿ ಇದ್ದಾರೆ. ಬಿಜೆಪಿ ವರಿಷ್ಠರ ಮಟ್ಟದಲ್ಲಿ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಒಳ್ಳೆಯ ಖಾತೆಯೇ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT