ಭಾನುವಾರ, ಅಕ್ಟೋಬರ್ 25, 2020
21 °C
ಉಪಚುನಾವಣೆ ಮುಗಿಯುವವರೆಗೆ ಆಕಾಂಕ್ಷಿಗಳಿಗೆ ನಿರಾಸೆ

ಸಂಪುಟ ವಿಸ್ತರಣೆ ಸದ್ಯಕ್ಕೆ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠ ಒಪ್ಪಿಗೆ ಪಡೆಯಲು ದೆಹಲಿಗೆ ಹೊರಟಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಉಪಚುನಾವಣೆ ಘೋಷಣೆಯಿಂದ ಹಿನ್ನಡೆಯಾಗಿದ್ದು, ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಪ್ರಕ್ರಿಯೆ ನಡೆಯುವುದು ಅನುಮಾನ.

ಉಪಚುನಾವಣೆಗೆ ಮುನ್ನವೇ ಸಂಪುಟ ವಿಸ್ತರಣೆ ಮಾಡಿದರೆ ಸಚಿವ ಸ್ಥಾನ ಸಿಗದ ಆಕಾಂಕ್ಷಿಗಳ ಸಿಟ್ಟು ಸಿಡಿಯಬಹುದು. ಅವರ ಸಮುದಾಯದವರ ಮತಗಳು ಚುನಾವಣೆಯಲ್ಲಿ ಕೈತಪ್ಪುವ ಸಂಭವ ಇದೆ. ಹೀಗಾಗಿ, ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸಂಪುಟ ವಿಸ್ತರಣೆ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮುಖ್ಯಮಂತ್ರಿಯವರ ಕೈ ಕಟ್ಟಿಹಾಕಿದ ಸ್ಥಿತಿ ಸೃಷ್ಟಿಯಾಗಿದೆ ಎಂಬ ವಿಶ್ಲೇಷಣೆ ಪಕ್ಷದಲ್ಲಿ ನಡೆದಿದೆ.

ವಿಧಾನಮಂಡಲ ಅಧಿವೇಶನಕ್ಕೂ ಮೊದಲು ನವ ದೆಹಲಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು, ಪ್ರಧಾನಿ ನರೇಂದ್ರ  ಮೋದಿ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಕೋರಿಕೆ ಸಲ್ಲಿಸಿದ್ದರು. ಆ ಭೇಟಿಯ ವೇಳೆ ಗೃಹ ಸಚಿವ ಅಮಿತ್ ಶಾ ಭೇಟಿ ಆಗಲಿಲ್ಲ. ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಹಸಿರು ನಿಶಾನೆಯೂ ಸಿಕ್ಕಿರಲಿಲ್ಲ. ಶನಿವಾರ (ಸೆ. 19) ಸಂಜೆಯೊಳಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಯಡಿಯೂರಪ್ಪ ವಿಶ್ವಾಸದಲ್ಲಿಯೇ ಹೇಳಿದ್ದರು. ಆದರೆ, ವರಿಷ್ಠರು ಒಪ್ಪಿಗೆ ನೀಡಿರಲಿಲ್ಲ. ಬೇರೆ ದಾರಿ ಕಾಣದ ಯಡಿಯೂರಪ್ಪ, ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದರು.

ಸಚಿವ ಸ್ಥಾನದ ಆಕಾಂಕ್ಷಿಗಳ ಸಹನೆಯ ಕಟ್ಟೆ ಒಡೆಯುತ್ತಿದ್ದು, ಆದಷ್ಟು ಬೇಗನೆ ಕೆಲವರನ್ನಾದರೂ ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಸಂಪುಟ ಪುನಾರಚನೆಗೆ ಯಡಿಯೂರಪ್ಪ ಬಯಸಿದ್ದರು. ಅದಕ್ಕಾಗಿ ಕೈಬಿಡಬೇಕಾದವರ ಪಟ್ಟಿಯನ್ನೂ ದೆಹಲಿಗೆ ಒಯ್ದಿದ್ದರು. ಆದರೆ, ಅವರ ಯಾವುದೇ ಪ್ರಸ್ತಾಪಕ್ಕೂ ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ.

ಈ ಮಧ್ಯೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಉಸ್ತುವಾರಿ ನೋಡಿಕೊಳ್ಳಲು ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರನ್ನು ದೆಹಲಿಯಿಂದ ವರಿಷ್ಠರು ಕಳುಹಿಸಿದ್ದರು. ಇದು ಪಕ್ಷದ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಅವರಿಗೆ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಮತ್ತು ಸಚಿವ ಸಿ.ಟಿ.ರವಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹುದ್ದೆಗೆ ಬಡ್ತಿ ಸಿಕ್ಕಿದೆ.

ತೇಜಸ್ವಿ ಸೂರ್ಯ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದರು. ಪಕ್ಷಕ್ಕೆ ಹೊಸಬರಂತಿರುವ ತೇಜಸ್ವಿ ಅವರ ಭೇಟಿಗೆ ಸಮಯ ಕೊಡುವ ಶಾ, ಯಡಿಯೂರಪ್ಪ ಅವರ ಭೇಟಿಗೆ ಸಮಯ ಕೊಡದೇ ಇರುವುದು ಪಕ್ಷದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಪಕ್ಷದಲ್ಲಿ ಯಡಿಯೂರಪ್ಪ ಹಿಡಿತ ಸಡಿಲವಾಗುತ್ತಿರುವುದಕ್ಕೆ ಇವೆಲ್ಲ ಸಾಕ್ಷಿ ಎಂಬಂತಿವೆ ಎಂಬ ಚರ್ಚೆಯೂ ಪಕ್ಷದ ಒಳಗೆ ಶುರುವಾಗಿದೆ. 

ಪೂರ್ವ ನಿಗದಿಯಂತೆ ಅಕ್ಟೋಬರ್ 2ರಂದು ಯಡಿಯೂರಪ್ಪ ಅವರು ದೆಹಲಿಗೆ ತೆರಳಬೇಕಾಗಿದೆ. ಅಮಿತ್ ಶಾ ಸಮಯ ಕೊಟ್ಟರೆ ಮಾತ್ರ ಸಂಪುಟ ವಿಸ್ತರಣೆಯ ಚರ್ಚೆ ನಡೆಯಬಹುದು. ಇಲ್ಲದಿದ್ದರೆ ಉಪಚುನಾವಣೆ ಮುಗಿಯುವರೆಗೂ ಆಕಾಂಕ್ಷಿಗಳು ಕಾಯಬೇಕಾಗುತ್ತದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಮೇಲ್ಮನೆ: ಅ.28ಕ್ಕೆ ಮತದಾನ

ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದ್ದು, ಅಕ್ಟೋಬರ್‌ 28 ರಂದು ಮತದಾನ ನಡೆಯಲಿದೆ.

ಆಗ್ನೇಯ ಪದವೀಧರರ ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಜೂನ್‌ 30 ಕ್ಕೆ ಚೌಡರೆಡ್ಡಿ ತೂಪಲ್ಲಿ, ಎಸ್‌.ವಿ.ಸಂಕನೂರ, ಶರಣಪ್ಪ ಮಟ್ಟೂರು ಮತ್ತು ಪುಟ್ಟಣ್ಣ ಅವರ ಸದಸ್ಯತ್ವದ ಅವಧಿ ಕೊನೆಗೊಂಡಿತ್ತು.

ನಾಮಪತ್ರ ಸಲ್ಲಿಸಲು ಕೊನೆಯ ದಿನ ಅ.8, ನಾಮಪತ್ರ ಪರಿಶೀಲನೆ ಅ.9, ನಾಮಪತ್ರ ಹಿಂದಕ್ಕೆ ಪಡೆಯಲು ಅ.12 ಕೊನೆಯ ದಿನವಾಗಿದೆ. ಮತಗಳ ಎಣಿಕೆ ನವೆಂಬರ್‌ 2 ರಂದು ನಡೆಯಲಿದೆ.

ನ.3ಕ್ಕೆ ಶಿರಾ, ಆರ್‌.ಆರ್‌.ನಗರ ಉಪಚುನಾವಣೆ

ರಾಜ್ಯದ ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿದೆ. ನವೆಂಬರ್ 3 ರಂದು ಮತದಾನ, ನ.‌ 10 ರಂದು ಮತ ಎಣಿಕೆ ನಡೆಯಲಿದೆ.ಜೆಡಿಎಸ್ ಶಾಸಕ ಸತ್ಯನಾರಾಯಣ ನಿಧನದಿಂದ ಶಿರಾ ಮತ್ತು ರಾಜರಾಜೇಶ್ವರಿ ನಗರದ ಶಾಸಕರಾಗಿದ್ದ ಮುನಿರತ್ನ ರಾಜೀನಾಮೆಯಿಂದ ಕ್ಷೇತ್ರಗಳು ತೆರವಾಗಿದ್ದವು.

ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಮತ್ತು ತಮ್ಮನ್ನು ಚುನಾಯಿತ ಎಂದು ಘೋಷಿಸಬೇಕು ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅವರು ನ್ಯಾಯಾಲಯದಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಅದರಲ್ಲಿ ತಮ್ಮನ್ನೇ ಚುನಾಯಿತ ಎಂದು ಘೋಷಿಸಬೇಕೆಂಬ ಅರ್ಜಿ ತಿರಸ್ಕೃತವಾಗಿರುವುದರಿಂದ ಚುನಾವಣೆ ನಡೆಸಲಾಗುತ್ತಿದೆ. ಚುನಾವಣೆ ಅಕ್ರಮಕ್ಕೆ ಸಂಬಂಧಿಸಿದ ಅರ್ಜಿ ಇತ್ಯರ್ಥವಾಗಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಅ.16, ನಾಮಪತ್ರ ಪರಿಶೀಲನೆ ಅ.17, ಮತದಾನ ನ.3, ಮತಗಳ ಎಣಿಕೆ ನ.10.

‘ನಾನೂ ಟಿಕೆಟ್‌‌ ಆಕಾಂಕ್ಷಿ’

‘ಆರ್‌.ಆರ್‌.ನಗರ ಉಪಚುನಾವಣೆಗೆ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಅಂತಿಮವಾಗಿ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳುತ್ತೇನೆ’ ಎಂದು ತುಳಸಿ ಮುನಿರಾಜುಗೌಡ ಹೇಳಿದರು.

‘ಪಕ್ಷವು ನಿಷ್ಠಾವಂತ ಕಾರ್ಯಕರ್ತರ ಕೈಬಿಡುವುದಿಲ್ಲ. ಟಿಕೆಟ್‌ ಸಿಗುವ ವಿಶ್ವಾಸವಿದೆ. ಕಳೆದ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಅರ್ಜಿ ಇತ್ಯರ್ಥಗೊಂಡಿಲ್ಲ. ಮುಂದಿನ ವಾರ ವಿಚಾರಣೆಗೆ ಬರಲಿದೆ’ ಎಂದು ಅವರು ಹೇಳಿದರು.

ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಮುನಿರತ್ನ, ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದಾರೆ. ಈಗ ಅವರು ಆ ಪಕ್ಷದ ಟಿಕೆಟ್ ಆಕಾಂಕ್ಷಿ. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷ ಅಭ್ಯರ್ಥಿಯನ್ನು ಆಖೈರುಗೊಳಿಸಿಲ್ಲ.

ಶಿರಾ ಕ್ಷೇತ್ರದಲ್ಲಿ ಪರಾಭವಗೊಂಡಿದ್ದ ಟಿ.ಬಿ. ಜಯಚಂದ್ರ ತಮ್ಮ ಪಕ್ಷದ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿದೆ. ಬಿಜೆಪಿ, ಜೆಡಿಎಸ್‌ ಇನ್ನೂ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು