ಮಂಗಳವಾರ, ಆಗಸ್ಟ್ 16, 2022
22 °C
ಸಿ.ಪಿ. ಯೋಗೇಶ್ವರ್‌ಗೆ ಸಚಿವ ಸ್ಥಾನ: ಮುಂದುವರಿದ ವಿರೋಧ

ರಾಜ್ಯ ಸಚಿವ ಸಂಪುಟ ವಿಸ್ತರಣೆ ರಗಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡುವುದನ್ನು ವಿರೋಧಿಸಿ ಬಿಜೆಪಿಯ ಎಚ್‌.ವಿಶ್ವನಾಥ್‌ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ವಾಗ್ದಾಳಿ ಮುಂದುವರಿಸಿದ್ದು, ಪಕ್ಷದ ವಿದ್ಯಮಾನಗಳ ಬಗ್ಗೆ ಶಾಸಕರಿಗೆ ತಮ್ಮ ಅಭಿಪ್ರಾಯ ಮುಕ್ತವಾಗಿ ಹೇಳಿಕೊಳ್ಳಲು ತಕ್ಷಣವೇ ಸಭೆ ಕರೆಯಬೇಕು ಎಂದು ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್‌ ಒತ್ತಾಯಿಸಿದ್ದಾರೆ.

ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ಹೇಳಿದ್ದರು. ಈ ಕುರಿತು ಬುಧವಾರ ಮೈಸೂರಿನಲ್ಲಿ ಮಾತನಾಡಿದ ಎಚ್‌.ವಿಶ್ವನಾಥ್‌ ಮುಖ್ಯಮಂತ್ರಿ ಮೇಲೆ ಹರಿಹಾಯ್ದರು. ಬೆಂಗಳೂರಿನಲ್ಲಿ ಎಂ.ಪಿ.ರೇಣುಕಾಚಾರ್ಯ ಅವರು ಪಕ್ಷದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರನ್ನು ಭೇಟಿ ಮಾಡಿ, ಚುನಾವಣೆಯಲ್ಲಿ ಗೆಲ್ಲದವರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬಾರದು ಎಂದು ಆಗ್ರಹಿಸಿದರು.

‘ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡಲು ಅವಸರ ಏಕೆ? ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದರಲ್ಲಿ ಅವರ ಪಾತ್ರವಿಲ್ಲ. ಅವರಿಗಿಂತ ಹಿರಿಯರಾದ ಉಮೇಶ್‌ ಕತ್ತಿ, ಬಸನಗೌಡ ಪಾಟೀಲ ಯತ್ನಾಳ್‌ ಸರತಿಯಲ್ಲಿದ್ದಾರೆ. ಅವರನ್ನು ಮಂತ್ರಿ ಮಾಡಿ’ ಎಂದು ವಿಶ್ವನಾಥ್‌ ಹೇಳಿದರು. ‘ಯೋಗೇಶ್ವರ್‌ ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದು ಕೇಳಿ ನನಗೆ ಆಘಾತವಾಗಿದೆ’ ಎಂದು ರೇಣುಕಾಚಾರ್ಯ ತಿಳಿಸಿದರು.

ನಳಿನ್ ಭೇಟಿ ಮಾಡಿದ ರೇಣುಕಾಚಾರ್ಯ

ರಾಜ್ಯ ಬಿಜೆಪಿ ಕಚೇರಿಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಬುಧವಾರ ಭೇಟಿಮಾಡಿದ ಎಂ.ಪಿ. ರೇಣುಕಾಚಾರ್ಯ, ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂಬ ಬೇಡಿಕೆ ಮುಂದಿಟ್ಟರು. ವಿಧಾನಸಭಾ ಚುನಾವಣೆಯಲ್ಲಿ ಸೋತವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಆಗ್ರಹಿಸಿದರು.

‘ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ. ನೇರವಾಗಿ ಜನರಿಂದ ಆಯ್ಕೆಯಾದ ಶಾಸಕರು ಎಲ್ಲಿಗೆ ಹೋಗಬೇಕು? ನಮ್ಮಂತಹವರ ರಾಜಕೀಯ ಭವಿಷ್ಯದ ಗತಿ ಏನು‘ ಎಂಬುದಾಗಿ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೈಯಕ್ತಿಕವಾಗಿ ಸಚಿವ ಸ್ಥಾನ ನೀಡಬೇಕು ಎಂಬ ಕಾರಣಕ್ಕೆ ವಿರೋಧಿಸುತ್ತಿಲ್ಲ. ಕೆಳ ಹಂತದಿಂದ ಪಕ್ಷ ಸಂಘಟನೆಯಲ್ಲಿ ತೊಡಿಗಿಸಿಕೊಂಡವರು ಮತ್ತು ನೇರವಾಗಿ ಜನರಿಂದ ಆಯ್ಕೆಯಾದವರಿಗೆ ಅವಕಾಶ ನೀಡಬೇಕು. ಹೆಚ್ಚಿನ ಶಾಸಕರಲ್ಲಿ ಈ ಭಾವನೆ ಇದೆ. ಈ ಕುರಿತು ಚರ್ಚಿಸಲು ಶಾಸಕರ ಸಭೆ ಕರೆಯಬೇಕು ಎಂದು ಅವರು ಆಗ್ರಹಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.

ಶಾಸಕರ ಸಭೆಗೆ ಆಗ್ರಹ: ಪಕ್ಷದಲ್ಲಿ ‘ಮೂಲ’ ಮತ್ತು ‘ವಲಸಿಗರು’ ಎಂದು ಎರಡು ಗುಂಪುಗಳಾಗಿ ರಾಜಕೀಯ ಚಟುವಟಿಕೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಪತ್ರ ಬರೆದಿರುವ ಸುನಿಲ್‌ ಕುಮಾರ್‌, ನಿಗಮ, ಮಂಡಳಿಗಳ ನೇಮಕಾತಿ ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತು ಶಾಸಕರ ಅಭಿಪ್ರಾಯವನ್ನು ನೇರವಾಗಿ ಮತ್ತು ಮುಕ್ತವಾಗಿ ಆಲಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಸಚಿವರು, ಕೆಲವು ಶಾಸಕರು ಮತ್ತು ಪ್ರಮುಖರ ಬಹಿರಂಗ ಹೇಳಿಕೆಗಳು ಸಮಾಧಾನ ತರುವಂತಹದ್ದಲ್ಲ. ಮೂಲ ಮತ್ತು ಹೊಸಬರು ಎನ್ನುವ ಭಾವನೆ ವ್ಯಕ್ತ ಮಾಡದೇ ಪಕ್ಷದ ಶಿಸ್ತಿನ ಚೌಕಟ್ಟನ್ನು ಎಲ್ಲರಿಗೂ ಗಟ್ಟಿಯಾಗಿ ಹೇಳಬೇಕು. ಅದನ್ನು ತಕ್ಷಣ ನೀವು ಮಾಡುತ್ತೀರಿ ಎಂದು ಭಾವಿಸಿದ್ದೇವೆ‘ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

17 ಜನರಿಗೂ ಅರ್ಹತೆ ಇದೆ: ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ನಳಿನ್‌ ಕುಮಾರ್‌ ಕಟೀಲ್‌, ‘ನಮ್ಮ ಪಕ್ಷದಲ್ಲಿ ಮೂಲ ಮತ್ತು ವಲಸಿಗರು ಎಂಬುದೇ ಇಲ್ಲ. ಎಲ್ಲರೂ ಒಂದೇ. ಇತರ ಪಕ್ಷಗಳಿಂದ ಬಿಜೆಪಿಗೆ ಬಂದಿರುವ 17 ಜನರಿಗೂ ಸಚಿವರಾಗುವ ಅರ್ಹತೆ ಇದೆ’ ಎಂದರು.

‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಯಾವಾಗ ಬೇಕಾದರೂ ನಡೆಯಬಹುದು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಿಜೆಪಿಯ ಕೇಂದ್ರ ನಾಯಕರ ಜತೆ ಚರ್ಚಿಸಿದ ಬಳಿಕ ಹೊಸ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುತ್ತಾರೆ’ ಎಂದು ಹೇಳಿದರು.

ಸಂದೇಶ ತರುವರೇ ಅರುಣ್‌ ಸಿಂಗ್‌?

ಡಿಸೆಂಬರ್‌ 4 ಮತ್ತು 5ರಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ (ಕೋರ್‌ ಕಮಿಟಿ) ಸಭೆ ಹಾಗೂ ರಾಜ್ಯ ಕಾರ್ಯಕಾರಿಣಿ ನಡೆಯಲಿವೆ. ಈ ಸಭೆಗಳಲ್ಲಿ ಭಾಗವಹಿಸಲು ಬರುತ್ತಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಗೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರ ಸಂದೇಶ ಹೊತ್ತು ತರುವ ಸಾಧ್ಯತೆ ಇದೆ.

ಶುಕ್ರವಾರ ಪ್ರಮುಖ ನಾಯಕರ ಸಭೆ ನಡೆಯಲಿದೆ. ಶನಿವಾರ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಗೆ ಸಮ್ಮತಿಸಿ ವರಿಷ್ಠರು ಸಂದೇಶ ಕಳುಹಿಸಿದರೆ, ಈ ಕುರಿತು ಬೆಳಗಾವಿಯಲ್ಲೇ ಮೊದಲ ಸುತ್ತಿನ ಚರ್ಚೆ ನಡೆಯಲಿದೆ. ವಿಧಾನ ಮಂಡಲ ಅಧಿವೇಶನ ಮುಕ್ತಾಯವಾದ ಬಳಿಕ ಸಂಪುಟ ವಿಸ್ತರಣೆ ನಡೆಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

***

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು. ಲವ್‌ ಜಿಹಾದ್‌ ವಿರುದ್ಧವೂ ಕಾಯ್ದೆ ಜಾರಿಗೊಳಿಸುತ್ತೇವೆ

-ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು