ಮಂಗಳವಾರ, ಜುಲೈ 27, 2021
25 °C
ಅಧ್ಯಕ್ಷರು, ಸದಸ್ಯರ ಪ್ರಾಸಿಕ್ಯೂಷನ್‌ ಅನುಮತಿಗೆ ಸರ್ಕಾರ ನಕಾರ

ಕೆಪಿಎಸ್‌ಸಿ: ನೇಮಕಾತಿ ಅಕ್ರಮಕ್ಕೆ ರಕ್ಷಣೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕರ್ನಾಟಕಲೋಕಸೇವಾ ಆಯೋಗದ (ಕೆಪಿಎಸ್‌ಸಿ)ಅಂದಿನ ಅಧ್ಯಕ್ಷ ಮತ್ತು 9 ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ‘ವಿಧಾನ ಮಂಡಲ
ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆಯಾಗಿದ್ದು, ವಿರೋಧ ಪಕ್ಷದವರೂ ಪ್ರಾಸಿಕ್ಯೂಷನ್‌ ಕೈಬಿಡಲು ಬೇಡಿಕೆ ಇಟ್ಟಿದ್ದರು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಪ್ರಸ್ತಾವವನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಕೆಪಿಎಸ್‌ಸಿ ಕಾರ್ಯದರ್ಶಿ ಕೂಡಾ ಕೈಬಿಡುವಂತೆ ಹೇಳಿದ್ದರು. ಹೀಗಾಗಿ, ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದರು.

ವಿವಾದವೇನು: ವ್ಯಾಪಕ ಭ್ರಷ್ಟಾಚಾರ ನಡೆದಿದೆಯೆಂದು ತೀವ್ರ ವಿವಾದಕ್ಕೆ ಒಳಗಾಗಿದ್ದ ಈ ಸಾಲಿನ ನೇಮಕಾತಿಯನ್ನು ರದ್ದುಗೊಳಿಸಿ ಹೈಕೋರ್ಟ್‌ 2018ರ ಮಾರ್ಚ್ 9ರಂದುತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್‌ ಕೂಡಾ ಅದೇ ತೀರ್ಪನ್ನು ಎತ್ತಿಹಿಡಿದಿತ್ತು.

‘ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದೇ ಇದ್ದರೆ ಅಕ್ರಮದಲ್ಲಿ ಭಾಗಿಯಾದವರಿಗೆ ಕ್ಲೀನ್‌ ಚೀಟ್‌ ನೀಡಿದಂತೆ. ಅಕ್ರಮ ಪ್ರಕರಣವನ್ನೇ ಕೈಬಿಟ್ಟು, ಆರೋಪ ಎದುರಿಸುತ್ತಿರುವವರನ್ನು ದೋಷಮುಕ್ತಗೊಳಿಸಿದಂತೆ. ಆ ಮೂಲಕ, ಆಯ್ಕೆಯಾದವರನ್ನು ಹುದ್ದೆಗಳಿಗೆ ನೇಮಿಸಿಕೊಳ್ಳಲು ದಾರಿ ತೆರೆದುಕೊಟ್ಟಂತೆ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಡಿಪಿಎಆರ್‌) ಅಧಿಕಾರಿಯೊಬ್ಬರು ಹೇಳಿದರು.

ಅಕ್ರಮ ನೇಮಕಾತಿ ಆರೋಪದ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಕರಡು ದೋಷಾರೋಪ ಪಟ್ಟಿ ಸಿದ್ಧಪಡಿಸಿದೆ.

ಪ್ರಕರಣದಲ್ಲಿ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988ರ 19(1) ಸೆಕ್ಷನ್ ಮತ್ತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 1973ರ ಸೆಕ್ಷನ್197ರ ಅಡಿಯಲ್ಲಿ ಕೇಸು ದಾಖಲಿಸಿಕೊಂಡು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೇ, ಬೇಡವೇ ಎಂಬ ಪ್ರಸ್ತಾವವನ್ನು ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆ (ಡಿಪಿಎಆರ್‌) ಸೆ. 15ರಂದು ನಡೆದ ಸಚಿವ ಸಂಪುಟ ಸಭೆಗೆ ಮಂಡಿಸಿತ್ತು.  ಅಂದು, ಈ ಬಗ್ಗೆ ಪರಿಶೀಲಿಸಿ ಶಿಫಾರಸು ಮಾಡಲು ಕಾನೂನು ಮತ್ತು ಸಂಸದೀಯ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಡಿ. 29ರಂದು ಸಭೆ ನಡೆಸಿದ್ದ ಈ ಸಮಿತಿ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದು ಬೇಡವೆಂದು ತೀರ್ಮಾನಕ್ಕೆ ಬಂದಿದ್ದರೂ, ಅಂತಿಮ ತೀರ್ಮಾನವನ್ನು ಸಂಪುಟ ಸಭೆಯ ವಿವೇಚನೆಗೆ ಬಿಟ್ಟಿತ್ತು.

ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ನೇಮಕಾತಿಯಲ್ಲಿ ಸಕ್ಷಮ ಪ್ರಾಧಿಕಾರ ರಾಷ್ಟ್ರಪತಿಯಾಗಿದ್ದು, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಬಗ್ಗೆ ಅವರೇ ನಿರ್ಣಯ ಕೈಗೊಳ್ಳಬೇಕು. ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ಕಳುಹಿಸಬೇಕು. ಡಿಒಪಿಟಿ ಅದನ್ನು ರಾಷ್ಟ್ರಪತಿ ಮುಂದೆ ಮಂಡಿಸುವುದು ನಿಯಮ. ಆದರೆ, ಸಂಪುಟ ಸಭೆ ವಿಚಾರಣೆ ಕೈಬಿಡಲು ನಿರ್ಧರಿಸಿರುವುದರಿಂದ ಇಡೀ ಪ್ರಕರಣವನ್ನು ಕೈ ಬಿಟ್ಟಂತೆ ಆಗಿದೆ ಎಂಬ ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು