ಬುಧವಾರ, ಮೇ 19, 2021
22 °C
10ರಂದು ಸಭೆ ಸೇರಿ ನಿರ್ಧಾರ

ಮೇ 12 ರ ಬಳಿಕವೂ ಕಠಿಣ ಕರ್ಫ್ಯೂ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಮೇ 12 ರ ಬಳಿಕ ಇನ್ನೂ 15 ದಿನಗಳ ಕಾಲ ಕಠಿಣ ‘ಕರ್ಫ್ಯೂ’ ಮುಂದುವರಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಇದೇ 10 ರಂದು ಮತ್ತೊಮ್ಮೆ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

‘ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್‌ ಮಾಡುವಂತೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಕೇಂದ್ರ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಕಾದು ನೋಡೋಣ’ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.

‘ಒಂದು ವೇಳೆ ಕೇಂದ್ರ ಸರ್ಕಾರ ಲಾಕ್‌ಡೌನ್‌ ಬಗ್ಗೆ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ, ತಜ್ಞರ ಜತೆ ಸಭೆ ನಡೆಸಿ ಅವರ ಶಿಫಾರಸಿನಂತೆ ನಡೆದುಕೊಳ್ಳೋಣ. ಒಂದು ವೇಳೆ ಕಠಿಣ ಕರ್ಫ್ಯೂಗೆ ಶಿಫಾರಸು ಮಾಡಿದರೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲೇ ಬಳಸಿಕೊಳ್ಳಲು ಒಪ್ಪಿಗೆ:ರಾಜ್ಯದಲ್ಲಿ ಉತ್ಪಾದನೆ ಆಗುವ ವೈದ್ಯಕೀಯ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಗೃಹ ಸಚಿವ ಅಮಿತ್ ಶಾ ಅವರ ಜತೆ ಚರ್ಚೆ ನಡೆಸಿದ್ದು, ಇದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ಅಲ್ಲದೆ, ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಕಡಿಮೆ ಆಗುತ್ತಿರುವ ಕಾರಣ ಅಲ್ಲಿ ಜಿಂದಾಲ್‌ ಕಂಪನಿ ಉತ್ಪಾದಿಸುತ್ತಿರುವ ಆಮ್ಲಜನಕವನ್ನು ರಾಜ್ಯಕ್ಕೆ ಪಡೆಯಲು ಬೇಡಿಕೆ ಸಲ್ಲಿಸಿದ್ದೇವೆ. ನೆರೆಯ ರಾಜ್ಯಗಳಿಂದಲೂ ಪಡೆದುಕೊಳ್ಳಲಾಗುವುದು ಎಂದು ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಜತೆ ಮಾತುಕತೆ ನಡೆಸಿ ಈಗಷ್ಟೇ ಪದವಿ ಮುಗಿಸಿರುವ ಮತ್ತು ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ಮತ್ತು ನರ್ಸಿಂಗ್‌ ವಿದ್ಯಾರ್ಥಿಗಳನ್ನು ಕೋವಿಡ್‌ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೆ, ವೈದ್ಯರು ಮತ್ತು ನರ್ಸಿಂಗ್‌ ಸಿಬ್ಬಂದಿ ನೇಮಕಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಪತ್ರಕರ್ತರು ಕೋವಿಡ್ ಯೋಧರು: ಪತ್ರಕರ್ತರನ್ನು ಕೋವಿಡ್ ಸಮರದ ಮುಂಚೂಣಿ ಯೋಧರು ಎಂದು ಸರ್ಕಾರ ಪರಿಗಣಿಸಿದ್ದು, ಅವರಿಗೆ ಆದ್ಯತೆಯ ಮೇರೆಗೆ ಕೋವಿಡ್‌ ಲಸಿಕೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ಚಾಮರಾಜನಗರ ಘಟನೆಗೆ ವಿಷಾದ: ‘ಚಾಮರಾಜನಗರದಲ್ಲಿ ನಡೆದ ಘಟನೆ ವಿಷಾದನೀಯ. ಘಟನೆಯ ಬಗ್ಗೆ ಮೂರು ದಿನಗಳಲ್ಲಿ ವರದಿ ಬರಲಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಯಡಿಯೂರಪ್ಪ ತಿಳಿಸಿದರು.

ಅಲ್ಲದೆ, ಎಲ್ಲ ಜಿಲ್ಲೆಗಳಲ್ಲೂ ಆಮ್ಲಜನಕದ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ ಉಸ್ತುವಾರಿ ಸಚಿವರು ಹೆಚ್ಚಿನ ಶ್ರಮವಹಿಸಬೇಕು ಎಂದರು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ರಾಜೀನಾಮೆ ಕೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಯಾವಾಗಲೂ ರಾಜೀನಾಮೆ ಕೇಳುತ್ತಾರೆ. ಅದು ಅವರ ಕೆಲಸ. ರಾಜಿನಾಮೆ ಕೊಟ್ಟ ತಕ್ಷಣ ಸಮಸ್ಯೆ ಬಗೆಹರಿಯುತ್ತದೆಯೇ. ಈ ಸಂದರ್ಭದಲ್ಲಿ ರಚನಾತ್ಮಕ ಸಲಹೆಗಳನ್ನು ಕೊಟ್ಟರೆ  ಕೋವಿಡ್‌ ನಿರ್ವಹಣೆಗೆ ಸಹಾಯಕವಾಗುತ್ತದೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು