ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕ ಕಡಿತ: ಕೆಪಿಎಸ್‌ಸಿಗೆ ಗೊತ್ತೇ ಇಲ್ಲ!

ಏಕಪಕ್ಷೀಯ ತೀರ್ಮಾನ, ಸರ್ಕಾರದ ವಿರುದ್ಧ ಸದಸ್ಯರ ಅಸಮಾಧಾನ
Last Updated 25 ಫೆಬ್ರುವರಿ 2022, 1:06 IST
ಅಕ್ಷರ ಗಾತ್ರ

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳ ಆಯ್ಕೆಗೆ ನಡೆಯುವ ವ್ಯಕ್ತಿತ್ವ ಪರೀಕ್ಷೆಯ (ಸಂದರ್ಶನ) ಅಂಕವನ್ನು 50ರಿಂದ 25ಕ್ಕೆ ಕಡಿಮೆ ಮಾಡುವಂತೆ ಸಚಿವ ಸಂಪುಟಕ್ಕೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆ ಬಗ್ಗೆ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಮಾಹಿತಿಯೇ ಇರಲಿಲ್ಲ!

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಈ ಪ್ರಸ್ತಾವನೆ ಸಿದ್ಧಪಡಿಸಿ, ಮುಖ್ಯಮಂತ್ರಿಯವರ ಅನುಮೋದನೆ ಪಡೆದು ಫೆ. 18ರಂದು ನಡೆದ ಸಚಿವ ಸಂಪುಟ ಸಭೆಗೆ ಮಂಡಿಸಿತ್ತು. ಸಂಪುಟ ಸಭೆ ಇದಕ್ಕೆ ಒಪ್ಪಿಗೆಯನ್ನೂ ನೀಡಿದೆ.

ಆ ಬೆನ್ನಲ್ಲೆ, ತಮ್ಮ ಜೊತೆ ಚರ್ಚಿಸದೆ ಸರ್ಕಾರ ತೆಗೆದುಕೊಂಡ ಈ ಕ್ರಮಕ್ಕೆ ಕೆಪಿಎಸ್‌ಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆಯೋಗಕ್ಕೆ ಯಾವುದೇ ಮಾಹಿತಿ ನೀಡದೆ ತೆಗೆದುಕೊಂಡ ತೀರ್ಮಾನವನ್ನು ಮರು ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿಗೆ ಕೆಪಿಎಸ್‌ಸಿ ಸದಸ್ಯರು ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ಕಾನೂನು ಸಚಿವ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, ನೇಮಕಾತಿಗೆ ಮುಖ್ಯ ಪರೀಕ್ಷೆಯಲ್ಲಿ ಅರ್ಹತಾ ಪರೀಕ್ಷೆಯಾಗಿ ತಲಾ 150 ಅಂಕಗಳ ಕನ್ನಡ ಮತ್ತು ಇಂಗ್ಲಿಷ್‌ ಪತ್ರಿಕೆ ಇವೆ. ಈ ಪತ್ರಿಕೆಗಳ ಅಂಕಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.‌ ಉಳಿದಂತೆ, 250 ಅಂಕಗಳ ಪ್ರಬಂಧ ಪತ್ರಿಕೆ, ಒಟ್ಟು 1,000 ಅಂಕಗಳ ಸಾಮಾನ್ಯ ಜ್ಞಾನದ 4 ಪತ್ರಿಕೆಗಳು, ಜೊತೆಗೆ ಒಂದು ಐಚ್ಚಿಕ ವಿಷಯದ ತಲಾ 250 ಅಂಕಗಳ ಎರಡು ಪತ್ರಿಕೆಗಳು ಇರುತ್ತಿದ್ದವು. ಹೀಗೆ 1,750 ಅಂಕಗಳಿಗೆ ಮುಖ್ಯ ಪರೀಕ್ಷೆ ನಡೆಸಲಾಗುತ್ತಿತ್ತು. ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಉಲ್ಲೇಖಿಸಿ, 1:3 ಅನುಪಾತದಲ್ಲಿ 200 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆ ನಡೆಸಲಾಗುತ್ತಿತ್ತು.

ಎಲ್ಲ ಅಭ್ಯರ್ಥಿಗಳು ಒಂದೇ ವಿಷಯದ ಪತ್ರಿಕೆಗಳನ್ನು ಬರೆಯಬೇಕೆಂದು ಈ ನಿಯಮಕ್ಕೆ 2020ರ ಜೂನ್ 6ರಂದು ತಿದ್ದುಪಡಿ ಮಾಡಿದ ಸರ್ಕಾರ, ತಲಾ 250 ಅಂಕಗಳ ಐಚ್ಚಿಕ ವಿಷಯ‌ದ ಪತ್ರಿಕೆಗಳನ್ನು ತೆಗೆದುಹಾಕಿತ್ತು. ಹೀಗಾಗಿ, ಮುಖ್ಯಪರೀಕ್ಷೆಯಲ್ಲಿ ಆಯ್ಕೆಗೆ ಪರಿಗಣಿಸುವ ಅಂಕಗಳನ್ನು 1,250ಕ್ಕೆ ಇಳಿಸಲಾಗಿತ್ತು. ಅಲ್ಲದೆ, ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 50ಕ್ಕೆ ನಿಗದಿಪಡಿಸಲಾಗಿತ್ತು.

‘ಮುಖ್ಯ ಪರೀಕ್ಷೆಯ ಒಟ್ಟು ಅಂಕಗಳು 1,250 ಆಗಿರುವುದರಿಂದ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಹಲವರು ಒಂದೇ ರೀತಿಯ ಅಂಕಗಳನ್ನು ಪಡೆಯುವ ಸಂಭವ ಇರುತ್ತದೆ. ಈ ಗೊಂದಲ ತಡೆಯಲು ಒಟ್ಟು ಅಂಕ 1,750 ನ್ನು ಉಳಿಸಿಕೊಳ್ಳಲು ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 50 ಅಂಕಗಳಿಂದ 25 ಅಂಕಗಳಿಗೆ ಕಡಿಮೆ ಮಾಡಲು ಕರ್ನಾಟಕ ಗೆಜೆಟೆಡ್‌ ಪ್ರೋಬೇಷನರ್ಸ್‌ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳಿಗೆ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ಡಿಪಿಎಆರ್‌ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈ ಪ್ರಸ್ತಾವನೆ ಬಗ್ಗೆ ಕೆಪಿಎಸ್‌ಸಿಗೆ ಯಾವುದೇ ಮಾಹಿತಿ ಇರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಆಯೋಗದ ಸದಸ್ಯರೊಬ್ಬರು, ‘ಮಾಧ್ಯಮಗಳ ಮೂಲಕ ಸಂಪುಟ ಸಭೆಯ ತೀರ್ಮಾನ ಗೊತ್ತಾಯಿತು. ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದೆ. ಈ ಬಗ್ಗೆ ಮುಖ್ಯಮಂತ್ರಿಗೆ ಆಕ್ಷೇಪಣೆ ಸಲ್ಲಿಸಿದ್ದೇವೆ. ಮರು ಪರಿಶೀಲಿಸುವ ಬಗ್ಗೆ ಭರವಸೆ ನೀಡಿದ್ದಾರೆ’ ಎಂದರು.

‘ಎರಡು ಐಚ್ಚಿಕ ವಿಷಯಗಳನ್ನು ಕೈಬಿಟ್ಟು ಮುಖ್ಯಪರೀಕ್ಷೆಯ ಒಟ್ಟು ಅಂಕಗಳನ್ನು 1,250 ಕ್ಕೆ ಇಳಿಸುವಂತೆ ಈ ಹಿಂದೆ ಸರ್ಕಾರಕ್ಕೆ ಆಯೋಗದಿಂದ ಶಿಫಾರಸು ಮಾಡಲಾಗಿತ್ತು. ಆದರೆ, ವ್ಯಕ್ತಿತ್ವ ಪರೀಕ್ಷೆಯ ಅಂಕವನ್ನು 200 ರಿಂದ 50 ಅಂಕಕ್ಕೆ ಕಡಿಮೆ ಮಾಡುವ ತೀರ್ಮಾನವನ್ನು ಸರ್ಕಾರ ಸ್ವಯಂಪ್ರೇರಿತವಾಗಿ ತೆಗೆದುಕೊಂಡಿತ್ತು. ಆಗ ಆಯೋಗದಲ್ಲಿ ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲಾಗಿತ್ತು’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಲಭ್ಯರಾಗಲಿಲ್ಲ.

ಮುಖ್ಯಪರೀಕ್ಷೆ ಮತ್ತೆ 1,750ಕ್ಕೆ

ಮುಖ್ಯಪರೀಕ್ಷೆಯ ಅಂಕವನ್ನು 1,250ಕ್ಕೆ ಇಳಿಸಿದ್ದರಿಂದ ಹಲವರು ಒಂದೇ ರೀತಿಯ ಅಂಕ ಪಡೆಯುವ ಸಂಭವವಿದೆ. ಹೀಗಾಗಿ, ಒಟ್ಟು ಅಂಕವನ್ನು 1,750 ಉಳಿಸಿಕೊಳ್ಳಲು ಮುಖ್ಯ ಪರೀಕ್ಷೆಯ ಐದು ಪತ್ರಿಕೆಗಳ ಪ್ರತಿ ಪತ್ರಿಕೆಗಳ ಅಂಕಗಳನ್ನು 250ರಿಂದ 350ಕ್ಕೆ ಹೆಚ್ಚಿಸಬೇಕೆಂಬ ಡಿಪಿಎಆರ್‌ ಪ್ರಸ್ತಾವನೆಗೂ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

*

ವ್ಯಕ್ತಿತ್ವದ ಪರೀಕ್ಷೆ ಅಂಕವನ್ನು 25ಕ್ಕೆ ಇಳಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಿದೆ. ಈ ವಿಷಯದಲ್ಲಿ ಸರ್ಕಾರವೇ ‘ಸುಪ್ರೀಂ’. ವಿವೇಚನೆಯಂತೆ ತೀರ್ಮಾನ ತೆಗೆದುಕೊಂಡಿದೆ.


-ಜಿ. ಸತ್ಯವತಿ ಕಾರ್ಯದರ್ಶಿ, ಕೆಪಿಎಸ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT