ಬುಧವಾರ, ಮೇ 25, 2022
30 °C
ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಗೆ ಆಕ್ರೋಶ, ಪ್ರತಿಭಟನೆ

ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ದಿಢೀರ್‌ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಮಂಗಳವಾರದಿಂದ ನಿಗದಿಯಾಗಿದ್ದ ಕೌನ್ಸೆಲಿಂಗ್‌ ದಿಢೀರನೇ ರದ್ದಾದ ಕಾರಣ, ಶಿಕ್ಷಕರ ಸದನದಲ್ಲೇ ಧರಣಿ ನಡೆಸಿದ ಶಿಕ್ಷಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ
ಪಡಿಸಿದರು.

ಈಗಾಗಲೇ ನಾಲ್ಕು ಬಾರಿ ಮುಂದೂಡಲಾಗಿದ್ದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ಗೆ ಮಂಗಳವಾರದಿಂದ ಆರಂಭವಾಗಬೇಕಿತ್ತು. ಅದಕ್ಕಾಗಿ, ವೇಳಾಪಟ್ಟಿಯನ್ನು ನಿಗದಿ ಮಾಡಲಾಗಿತ್ತು. ಜನವರಿ 18ರಿಂದ 25ರವರೆಗೆ ಕೌನ್ಸೆಲಿಂಗ್‌ ಮೂಲಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆದರೆ, ನಾಲ್ಕನೇ ಬಾರಿಯೂ ಕೌನ್ಸೆಲಿಂಗ್‌ ನಡೆಯದ ಕಾರಣ ಸಿಟ್ಟಿಗೆದ್ದ ಶಿಕ್ಷಕರು ಧರಣಿ ನಡೆಸಿದರು.

ಮೊದಲ ದಿನ ಅಂಗವಿಕಲರು, ಆರೋಗ್ಯ ಸಮಸ್ಯೆ ಇರುವವರು ಮೊದಲಾದವರಿಗೆ ಕೌನ್ಸೆಲಿಂಗ್‌ ನಿಗದಿಯಾಗಿತ್ತು. ಅವರೆಲ್ಲ ಈ ಬಾರಿಯಾದರೂ ವರ್ಗಾವಣೆಯಾಗಬಹುದು ಎಂಬ ಆಸೆಯಿಂದ ಬೆಳಿಗ್ಗೆಯೇ ಶಿಕ್ಷಕರ ಸದನಕ್ಕೆ (ಕೌನ್ಸೆಲಿಂಗ್‌ಗೆ ನಿಗದಿಪಡಿಸಿದ್ದ ಸ್ಥಳ) ಬಂದಿದ್ದರು. ಆದರೆ, 9 ಗಂಟೆ ವೇಳೆಗೆ ಕೌನ್ಸೆಲಿಂಗ್‌ ನಡೆಯುವುದಿಲ್ಲ ಎಂಬ ಸುದ್ದಿ ಕೇಳಿ ಆಘಾತಕ್ಕೆ ಒಳಗಾದರು.

’ಚಿಕ್ಕ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಸೋಮವಾರವೇ ಬೆಂಗಳೂರಿಗೆ ಬಂದಿದ್ದೇವೆ. ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಬೆಳಿಗ್ಗೆಯೇ ಶಿಕ್ಷಕರ ಸದನಕ್ಕೆ ಬಂದಿದ್ದೇವೆ. ಇಲ್ಲಿಗೆ ಬಂದ ನಂತರ ತಾಂತ್ರಿಕ ಕಾರಣದಿಂದ (ಸಾಫ್ಟ್‌ವೇರ್‌ ಸಮಸ್ಯೆ) ಕೌನ್ಸೆಲಿಂಗ್‌ ರದ್ದಾಗಿದೆ ಎಂದು ಹೇಳಿದರು. ಮೊದಲೇ ಹೇಳಿದ್ದರೆ ನಾವು ಬರುತ್ತಿರಲಿಲ್ಲ' ಎಂದು ರಾಯಚೂರಿನ ನೊಂದ ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

'ವೇಳಾಪಟ್ಟಿ ಪ್ರಕಾರ ನನ್ನ ಕೌನ್ಸೆಲಿಂಗ್‌ ಸರದಿ ಬುಧವಾರ ಇತ್ತು. ಕೊನೆಗಳಿಗೆಯಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕಲಬುರಗಿಯಿಂದ ಮಂಗಳವಾರವೇ ಬಂದಿದ್ದೇನೆ. ಆದರೆ, ಈಗ ರದ್ದಾಗಿದೆ ಎಂದು ಹೇಳಿದ್ದಾರೆ. ಇದು ಅನ್ಯಾಯ' ಎಂದು ಮತ್ತೊಬ್ಬ ಶಿಕ್ಷಕರು ತನ್ನ ಅಳಲು ತೋಡಿಕೊಂಡರು.

’ನಿದ್ದೆ, ಊಟ ಬಿಟ್ಟು ಇಲ್ಲಿಗೆ ಬಂದಿದ್ದೇವೆ. ಕೊನೆಗಳಿಗೆಯಲ್ಲಿ ರದ್ದುಪಡಿಸಿದರೆ ಹೇಗೆ? ಸಾಫ್ಟ್‌ವೇರ್‌ ಸರಿ ಇದೆಯೋ, ಇಲ್ಲವೋ ಎಂಬುದನ್ನು ಮೊದಲೇ ಖಚಿತಪಡಿಸಿಕೊಂಡು ನಂತರ ಕೌನ್ಸೆಲಿಂಗ್‌ ವೇಳಾಪಟ್ಟಿ ಪ್ರಕಟಿಸಬೇಕಾಗಿತ್ತು. ಅದು ಬಿಟ್ಟು ಶಿಕ್ಷಕರಿಗೆ ಈ ರೀತಿ ತೊಂದರೆ ಕೊಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಮುಂಚೆ ವಿಭಾಗ ಮಟ್ಟದ ಕೇಂದ್ರಗಳಲ್ಲೇ ಕೌನ್ಸೆಲಿಂಗ್‌ ನಡೆಯುತ್ತಿತ್ತು. ಆದರೆ, ಈ ಬಾರಿ ಬೆಂಗಳೂರಿನಲ್ಲಿ ಕೌನ್ಸೆಲಿಂಗ್‌ ನಡೆಸುತ್ತಿದ್ದಾರೆ. ಬೀದರ್‌, ಕಲಬುರಗಿ, ರಾಯಚೂರು, ಬೆಳಗಾವಿ ಸೇರಿದಂತೆ ದೂರದ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ರಾಜಧಾನಿಗೆ ಬಂದಿದ್ದಾರೆ. ಅವರಿಗೆಲ್ಲ ತೊಂದರೆಯಾಗಿದೆ’ ಎಂದು ಕಲಬುರಗಿಯ ಶಿಕ್ಷಕರೊಬ್ಬರು ತಿಳಿಸಿದರು.

ಕೌನ್ಸೆಲಿಂಗ್‌ ರದ್ದಾಗಿರುವ ಬಗ್ಗೆ ಮಂಗಳವಾರ ಮಧ್ಯಾಹ್ನದವರೆಗೂ ಅಧಿಕೃತ ಆದೇಶ ಹೊರಡಿಸಿರಲಿಲ್ಲ. ಮಧ್ಯಾಹ್ನದ ವೇಳೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಕಾರಣದಿಂದ ರದ್ದುಪಡಿಸಿರುವ ಮಾಹಿತಿ ಹಾಕಿದ್ದಾರೆ. ಮತ್ತೆ ಯಾವಾಗ ಕೌನ್ಸೆಲಿಂಗ್‌ ಶುರುವಾಗುತ್ತದೆ ಎಂಬ ಮಾಹಿತಿಯೂ ಇಲ್ಲ. ಎಲ್ಲವೂ ಗೊಂದಲದ ಗೂಡಾಗಿದೆ. ಇದಕ್ಕೆಲ್ಲ ಯಾವಾಗ ಇತಿಶ್ರೀ ಹಾಡುತ್ತಾರೊ ಎಂದು ಪ್ರತಿಭಟನನಿರತ ಶಿಕ್ಷಕರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಆರ್‌.ವಿಶಾಲ್‌ ಅವರಿಗೆ ಮೂರು ಬಾರಿ ಕರೆ ಮಾಡಿದರೂ ಸ್ಪೀಕರಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು