ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಚಿವ ಅಮಿತ್‌ ಶಾ ವಿಶ್ವಾಸ ಹುಸಿಗೊಳಿಸಲಾರೆ: ಯಡಿಯೂರಪ್ಪ

ತುರ್ತು ಸುದ್ದಿಗೋಷ್ಠಿ ನಡೆಸಿದ ಬಿಎಸ್‌ವೈ l ಮತ್ತೆ ಅಧಿಕಾರ ಹಿಡಿಯಲು ಪ್ರಚಾರ ಯಾತ್ರೆ
Last Updated 30 ಮಾರ್ಚ್ 2023, 19:15 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರೇ ನಮ್ಮ ‘ಸ್ಟಾರ್‌ ಪ್ರಚಾರಕ’ ಎಂದು ಕೇಂದ್ರ ಹೇಳಿರುವ ಬೆನ್ನಲ್ಲೇ ಚುರುಕಾದ ಯಡಿಯೂರಪ್ಪ ಪಕ್ಷದ ಕಚೇರಿಯಲ್ಲಿ ಗುರುವಾರ ‘ತುರ್ತು’ ಸುದ್ದಿಗೋಷ್ಠಿ ನಡೆಸಿ, ಬಹುಮತದೊಂದಿಗೆ ಗೃಹ ಸಚಿವ ಅಮಿತ್‌ ಶಾ ಮತ್ತೆ ಅಧಿಕಾರ ಹಿಡಿಯಲು ರಾಜ್ಯ ವ್ಯಾಪಿ ಪ್ರಚಾರ ಯಾತ್ರೆ ಆರಂಭಿಸುವುದಾಗಿ ಹೇಳಿದರು.

‘ಅಮಿತ್‌ ಶಾ ಅವರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಆ ವಿಶ್ವಾಸವನ್ನು ಹುಸಿಗೊಳಿಸುವುದಿಲ್ಲ’ ಎಂದು ಅವರು ಹೇಳಿದರು. ದೆಹಲಿಯಲ್ಲಿ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾ, ಯಡಿಯೂರಪ್ಪ ‘ಸ್ಟಾರ್‌ ಪ್ರಚಾರಕ’ ಎಂದಿದ್ದರು.

‘ನನಗೆ 80 ವರ್ಷ ವಯಸ್ಸು ಆಗಿರಬಹುದು, ಪರವಾಗಿಲ್ಲ. ಈ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ತರುವುದರಜತೆಗೆ 2024 ರ
ಲೋಕಸಭೆ ಚುನಾವಣೆಯಲ್ಲೂ ‍ಮತ್ತೆ 26 ಸ್ಥಾನಗಳನ್ನು ಗೆಲ್ಲಿಸಿಕೊಡಲು ಹಗಲಿರುಳು ಶ್ರಮಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಮ್ಮ ಪಕ್ಷದ 25 ಸಂಸದರು ಮತ್ತು ರಾಜ್ಯಸಭಾ ಸದಸ್ಯರೊಂದಿಗೆ ಚುನಾವಣೆಯವರೆಗೆ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ. ಸ್ಪಷ್ಟ ಬಹುಮತ ಪಡೆಯಲು ಕಠಿಣವಾಗಿ ಕೆಲಸ ಮಾಡಬೇಕಾಗಿದೆ’ ಎಂದರು.

‘ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ. ಮುಂದಿನ ವಿರೋಧ ಪಕ್ಷದ ನಾಯಕ ಯಾರು ಆಗಬೇಕು ಎಂಬ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಚರ್ಚೆ ಮಾಡಿ ತೀರ್ಮಾನಿಸಿಕೊಳ್ಳಲಿ ’ ಎಂದು ಯಡಿಯೂರಪ್ಪ ತಿಳಿಸಿದರು.

ಮುಸ್ಲಿಮರಿಗೆ ಅನ್ಯಾಯ ಆಗಿಲ್ಲ: ಹಲವು ವರ್ಷಗಳಿಂದ ನನೆಗುದಿಯಲ್ಲಿದ್ದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲಾತಿ ವಿಷಯವನ್ನು ಮುಖ್ಯಮಂತ್ರಿ ಬೊಮ್ಮಾಯಿ ಸೌಹಾರ್ದವಾಗಿ ಬಗೆಹರಿಸಿದ್ದಾರೆ. ಮುಸ್ಲಿಮರಿಗಿದ್ದ ಶೇ 4 ಮೀಸಲಾತಿ ರದ್ದು ಮಾಡಿ ಅವರನ್ನು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿಸಲಾಗಿದೆ. ಅಲ್ಲಿ ಶೇ 10 ರಷ್ಟು ಮೀಸಲಾತಿ ಇದೆ. ಇದರಿಂದ ಮುಸ್ಲಿಮರಿಗೆ ಅನ್ಯಾಯ
ವಾಗಿಲ್ಲ ಎಂದರು.

ಅಭ್ಯರ್ಥಿ ಆಯ್ಕೆ: ಬಿಜೆಪಿ ಅಭಿಪ್ರಾಯ ಸಂಗ್ರಹ ಇಂದು

ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಅಭಿಪ್ರಾಯ ಸಂಗ್ರಹಿಸಲು ಬಿಜೆಪಿ ಎಲ್ಲ ಜಿಲ್ಲೆಗಳಿಗೂ ತನ್ನ ತಂಡಗಳನ್ನು ಶುಕ್ರವಾರ ಕಳುಹಿಸಲಿದೆ. ಚುನಾವಣೆ ಮಾದರಿಯಲ್ಲಿ ಅಭಿಪ್ರಾಯ ಸಂಗ್ರಹ ಕಾರ್ಯ ಒಂದೇ ದಿನ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಮೂವರು ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಬರೆದು ಮತ ಪಟ್ಟಿಗೆಗೆ ಹಾಕಬೇಕು. ಮೊದಲ ಆದ್ಯತೆ, ಎರಡನೇ ಮತ್ತು ಮೂರನೇ ಆದ್ಯತೆಯ ಹೆಸರುಗಳನ್ನು ಸೂಚಿಸಬೇಕು. ಇದು ಗೋಪ್ಯವಾಗಿ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 18 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದರು.

ಈ ಸಭೆಗೆ ಶಕ್ತಿ ಕೇಂದ್ರದ ಪ್ರಮುಖರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಮಂಡಲ ಕೋರ್ ಸಮಿತಿ ಸದಸ್ಯರು, ಮಂಡಲ ಪದಾಧಿಕಾರಿಗಳು, ಮಂಡಲ ಮೋರ್ಚಾಗಳ ಅಧ್ಯಕ್ಷರು, ಮಂಡಲದಲ್ಲಿರುವ ಜಿಲ್ಲೆ, ರಾಜ್ಯ, ಪ್ರಕೋಷ್ಠಗಳ ಸಂಚಾಲಕರು, ಮೋರ್ಚಾಗಳ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿ.ಪಂ, ತಾ.ಪಂ.ಗಳ ಹಾಲಿ ಮತ್ತು ಮಾಜಿ ಸದಸ್ಯರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಹಾಲಿ ಮತ್ತು ಮಾಜಿ ಶಾಸಕರು, ಪರಿಷತ್‌ ಸದಸ್ಯರು, ಹಾಲಿ ಮತ್ತು ಮಾಜಿ ಸಂಸದರು, ಕಳೆದ ಬಾರಿ ಪರಾಜಿತ ಅಭ್ಯರ್ಥಿಗಳು ಅಭಿಪ್ರಾಯ ಸಂಗ್ರಹ ಕಾರ್ಯದಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ಇವರೆಲ್ಲರೂ ಮತ ಚಲಾಯಿಸಲಿದ್ದಾರೆ ಎಂದರು.

ಹಿಂದೆಂದೂ ಇತರ ಯಾವುದೇ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಈ ಮಾದರಿಯನ್ನು ಅನುಸರಿಸಿಲ್ಲ. ಆಂತರಿಕವಾಗಿ ಸಂಗ್ರಹಿಸಿದ ಅಭಿಪ್ರಾಯವನ್ನು ಏ.1 ಅಥವಾ 2 ರಂದು ನಡೆಯುವ ಬಿಜೆಪಿ ಪ್ರಮುಖ ನಾಯಕರ ಸಭೆಯಲ್ಲಿ ಮಂಡಿಸಲಾಗುವುದು. ಇದರ ಆಧಾರದ ಮೇಲೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಲಾಗುವುದು. ಏ.4 ರಂದು ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯುವ ಸಾಧ್ಯತೆ ಇದೆ.

ಬಿಜೆಪಿಯ 36 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಮತ ಚಲಾವಣೆ ರೂಪದಲ್ಲಿ ಅಭ್ಯರ್ಥಿಗಳ ಹೆಸರು ಸೂಚಿಸಬೇಕು. ಯಾರಿಗೆ ಹೆಚ್ಚು ಮತ ಸಿಗುತ್ತದೆಯೋ ಅವರಿಗೆ ಅವಕಾಶ ಹೆಚ್ಚು. ಇದರಿಂದ ಅನಗತ್ಯ ಬಂಡಾಯ, ಗಲಾಟೆಯನ್ನು ತಪ್ಪಿಸಬಹುದು ಎಂಬ ಪ್ರಯೋಗಕ್ಕೆ ಬಿಜೆಪಿ ಕೈ ಹಾಕಿದೆ ಎಂದು ಅವರು ಹೇಳಿದರು.

ವರುಣಾದಲ್ಲಿ ಬಲಿಷ್ಠ ಅಭ್ಯರ್ಥಿ’

‘ವರುಣಾದಲ್ಲಿ ಸಿದ್ದರಾಮಯ್ಯ ಅವರ ಗೆಲುವು ಸುಲಭವಲ್ಲ. ಅಲ್ಲಿ ಅವರು ನಿಂತ ನೆಲವೇ ಕುಸಿಯುತ್ತಿದೆ. ಅವರ ವಿರುದ್ಧ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ’ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದರು.

‘ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಅಂತಿಮವಾಗಿ ರಾಷ್ಟ್ರೀಯ ಮಟ್ಟದಲ್ಲೇ ತೀರ್ಮಾನ ಆಗುತ್ತದೆ. ವಿಜಯೇಂದ್ರ ಇರಲಿ, ಯಾರೇ ಇರಲಿ ಟಿಕೆಟ್‌ ಕೇಂದ್ರದಲ್ಲಿ ತೀರ್ಮಾನವಾಗುತ್ತದೆ. ಅಲ್ಲಿ ಅತ್ಯಂತ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ನಿಶ್ಚಿತ’ ಎಂದು ಅವರು ತಿಳಿಸಿದರು.

‘ಸಿದ್ದರಾಮಯ್ಯ ಅವರಂತಹ ಹಿರಿಯ ನಾಯಕರು ಕ್ಷೇತ್ರಕ್ಕಾಗಿ ಪರದಾಟ ನಡೆಸುತ್ತಿರುವುದು ನೋಡಿದರೆ ಬೇಸರವಾಗುತ್ತದೆ. ಅಂತಹ ಸ್ಥಿತಿ ಬರಬಾರದಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT