ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಸಮೀಪ ಬಟ್ಟಪ್ಪಾಡಿಯಲ್ಲಿ ಮುಳುಗುತ್ತಿರುವ ಹಡಗು: ತೈಲ ಸೋರಿಕೆ ಭೀತಿ

ಫರ್ನಸ್ ತೈಲ 160 ಟನ್, ಎಂಜಿನ್ ತೈಲ 60 ಟನ್ ಇರುವ ಅಂದಾಜು
Last Updated 23 ಜೂನ್ 2022, 19:13 IST
ಅಕ್ಷರ ಗಾತ್ರ

ಮಂಗಳೂರು: ಸಮೀಪದ ಬಟ್ಟಪ್ಪಾಡಿಯಲ್ಲಿ ಮುಳುಗುತ್ತಿರುವ ವಿದೇಶಿ ‘ಪ್ರಿನ್ಸೆಸ್ ಮಿರಾಲ್’ ಹಡಗಿನಿಂದ ತೈಲ ಸೋರಿಕೆಯಾಗುವ ಅಪಾಯ ಎದುರಾಗಿದೆ.

ಹಡಗಿನಿಂದ ಎಂಜಿನ್ ತೈಲ ಸೋರಿಕೆ ತಡೆಗಟ್ಟಲು ಹಾಗೂ ಹಡಗಿನಲ್ಲಿರುವ ಫರ್ನಸ್ ತೈಲ ಮತ್ತು ಎಂಜಿನ್ ತೈಲವನ್ನು ಹೊರತೆಗೆಯಲು ಕ್ರಮವಹಿಸುವಂತೆ ಜಿಲ್ಲಾಡಳಿತವು ಕರಾವಳಿ ಕಾವಲು ಪಡೆಯ ಡಿಐಜಿಗೆ ಸೂಚಿಸಿದೆ.

ರಂಧ್ರದ ಮೂಲಕ ನೀರು ಒಳಗೆ ಬರುತ್ತಿದ್ದ ಕಾರಣ ಸಮುದ್ರದ ಮಧ್ಯೆ ಇರುವ ಹಡಗು ಬಹುತೇಕ ಮುಳುಗಿದೆ. ಈ ಹಡಗಿನಲ್ಲಿ 160 ಟನ್‌ನಷ್ಟು ಫರ್ನಸ್ ತೈಲ ಹಾಗೂ 60 ಟನ್‌ನಷ್ಟು ಎಂಜಿನ್ ತೈಲ ಇದೆ ಎಂದು ಅಂದಾಜಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ತೈಲ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗೂ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಡಗಿನ ಸ್ಥಿತಿಗತಿ, ಆಗಬಹುದಾದ ಅಪಾಯದ ಬಗ್ಗೆ ನಿಗಾವಹಿಸಲು ಕರಾವಳಿ ಕಾವಲು ಪಡೆಯ ಡಿಐಜಿ ಎಸ್‌.ಬಿ.ವೆಂಕಟೇಶ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಕರಾವಳಿ ಕಾವಲು ಪಡೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಉಳ್ಳಾಲ ಸಮೀಪ ಬಟ್ಟಪ್ಪಾಡಿ ಬಳಿ ಹಡಗು ಮುಳುಗಿದ ಪ್ರದೇಶದ ಸುತ್ತ ಮೀನುಗಾರಿಕೆ ನಡೆಸದಂತೆ ಮೀನುಗಾರರಿಗೆ ತಿಳಿಸಲು ಮೀನುಗಾರಿಕಾ ಇಲಾಖೆಗೆ ಸೂಚಿಸಲಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಕಾಲಕಾಲಕ್ಕೆ ಸಮುದ್ರದ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಈ ಕಾರ್ಯಾಚರಣೆಗೆ ಎಂಆರ್‌ಪಿಎಲ್ ಮತ್ತು ಎನ್‌ಎಂಪಿಟಿ ರಕ್ಷಣಾ ಸಾಮಗ್ರಿಗಳನ್ನು ಒದಗಿಸಬೇಕು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಮೇಲೂ, ಒಂದೊಮ್ಮೆ ತೈಲ ಸೋರಿಕೆಯಾಗಿ ಸಮುದ್ರ ದಡಕ್ಕೆ ಬಂದಲ್ಲಿ, ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಸರಕು, ಇಂಧನ, ಸಿಬ್ಬಂದಿ, ಆಹಾರ ಸೇರಿ 7,061 ಮೆಟ್ರಿಕ್ ಟನ್ ಡೆಡ್‌ ವೇಟ್‌ ಟನೇಜ್ ಹೊಂದಿರುವ 32 ವರ್ಷ ಹಳೆಯದಾದ ಈ ಹಡಗು 8 ಸಾವಿರ ಟನ್‌ ಉಕ್ಕಿನ ಕಾಯಿಲ್‌ಗಳನ್ನು ಚೀನಾದ ಟಿಯಾಂಜಿನ್‌ನಿಂದ ಲೆಬನಾನ್‌ಗೆ ಸಾಗಿಸುತ್ತಿದ್ದ ‘ಎಂ.ವಿ.ಪ್ರಿನ್ಸಸ್‌ ಮಿರಾಲ್‌’ ಎಂಬ ವಿದೇಶಿ ಹಡಗು ಮಂಗಳವಾರ ಉಚ್ಚಿಲ ಸೋಮೇಶ್ವರದ ಬಳಿ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿತ್ತು. ನೌಕೆಯ ತಳಭಾಗದಲ್ಲಿ ರಂಧ್ರ ಉಂಟಾಗಿ ನೀರು ನುಗ್ಗಲಾರಂಭಿಸಿದ್ದರಿಂದ, ಮುಳುಗಡೆ ಭೀತಿಯಿಂದ ನೌಕೆಯ ಕ್ಯಾಪ್ಟನ್, ರಕ್ಷಣೆ ಕೋರಿ, ಕಾವಲು ಪಡೆಗೆ ಸಂದೇಶ ರವಾನಿಸಿದ್ದರು. ನೌಕೆಯಲ್ಲಿದ್ದ 15 ಮಂದಿಯನ್ನು ರಕ್ಷಿಸಲಾಗಿತ್ತು.

ನಾಳೆ ‘ಸಮುದ್ರ ಪಾವಕ್’ ಬರುವ ಸಾಧ್ಯತೆ

ಆರು ಹಡಗು, ಎರಡು ಡಾರ್ನಿಯರ್‌ ವಿಮಾನಗಳು, ಎರಡು ಸ್ಥಳೀಯ ಹಡಗುಗಳ ಮೂಲಕ ತೈಲ ಸೋರಿಕೆ ಬಗ್ಗೆ ನಿರಂತರ ನಿಗಾವಹಿಸಲಾಗುತ್ತಿದೆ. ವಿಶೇಷ ಮಾಲಿನ್ಯ ನಿಯಂತ್ರಣ ನೌಕೆ ‘ಐಸಿಜಿಎಸ್ ಸಮುದ್ರ ಪಾವಕ್‌’ ಪೋರ್‌ಬಂದರ್‌ನಿಂದ ಹೊರಟಿದ್ದು, ಜೂನ್‌ 25ರಂದು ಮಂಗಳೂರು ತಲುಪುವ ಸಾಧ್ಯತೆ ಇದೆ. ಮುಳುಗುತ್ತಿರುವ ಹಡಗಿನ ಸುತ್ತ ನಿರಂತರ ನಿಗಾ ವಹಿಸಲಾಗಿದೆ ಎಂದು ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಳುಗಿರುವ ಹಡಗಿನಿಂದ ತೈಲ ಹೊರತೆಗೆಯುವ ಸಂಬಂಧ ಮತ್ತು ಹಡಗಿನ ಸ್ಥಿತಿ ಬಗ್ಗೆ ಸಿಂಗಪುರದ ಸ್ಮಿತ್ ಎಕ್ಸ್‌ಪರ್ಟ್‌ ಕಂಪನಿ ಮೂಲಕ ಸರ್ವೆ ನಡೆಸಲಾಗಿದೆ.
ಡಾ. ರಾಜೇಂದ್ರ ಕೆ.ವಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT