ಗುರುವಾರ , ಸೆಪ್ಟೆಂಬರ್ 23, 2021
26 °C
ಸಿಜಿಎಚ್‌ಎಸ್‌ ಮಾದರಿಯ ವ್ಯವಸ್ಥೆ

ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ: ಶೇ 1 ರಷ್ಟು ಮಾಸಿಕ ವಂತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ನಗದು ರಹಿತ ವೈದ್ಯಕ್ಯೀಯ ಚಿಕಿತ್ಸೆ ಒದಗಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಗೆ ನೌಕರರು ಕನಿಷ್ಠ ಮೂಲ ವೇತನದ ಶೇ 1 ರಷ್ಟು ಮಾಸಿಕ ವಂತಿಗೆ ನೀಡಬೇಕು.

ಈ ಯೋಜನೆಗೆ ಗ್ರೂಪ್‌ ಎ,ಬಿ,ಸಿ ಮತ್ತು ಡಿ ವರ್ಗದ ನೌಕರರು ಅವರು ಹೊಂದಿರುವ ಹುದ್ದೆಯ ಮೂಲ ವೇತನದಲ್ಲಿ ಈ ಮೊತ್ತವನ್ನು ಹಿಡಿಯಲಾಗುತ್ತದೆ. ಕೆಲವು ನಿರ್ದಿಷ್ಟ ವರ್ಗದ ಸರ್ಕಾರಿ ನೌಕರರನ್ನು ಬಿಟ್ಟು, ಉಳಿದ ಎಲ್ಲಾ ನೌಕರರಿಗೂ ಈ ಯೋಜನೆಯು ಕಡ್ಡಾಯವಾಗಿರುತ್ತದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಯೊಂದನ್ನು ಸಿದ್ಧಪಡಿಸಿಕೊಡುವಂತೆ ಸರ್ಕಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಸೂಚನೆಯನ್ನು ನೀಡಿದೆ. ಯೋಜನೆಯ ಕಾರ್ಯ ಸ್ವರೂಪ, ಯೋಜನಾ ವೆಚ್ಚ, ಆಯವ್ಯಯ, ವೈದ್ಯಕೀಯ ಚಿಕಿತ್ಸಾ ವಿಧಾನಗಳು, ಚಿಕಿತ್ಸಾ ದರಗಳು, ಫಲಾನುಭವಿಗಳು, ಖಾಸಗಿ ವೈದ್ಯಕೀಯ ಆಸ್ಪತ್ರೆಗಳು, ಇಂತಹ ಆಸ್ಪತ್ರೆಗಳ ಜತೆ ಮಾಡಿಕೊಳ್ಳಬೇಕಾದ ಒಡಂಬಡಿಕೆ, ಇವೆಲ್ಲದಕ್ಕೂ ಪೂರಕವಾಗಿ ಸೂಕ್ತ ತಂತ್ರಜ್ಞಾನ ಅಭಿವೃದ್ಧಿ ಕುರಿತು ಯೋಜನಾ ವರದಿ ತಯಾರಿಸಿಕೊಡಲು ಸೂಚಿಸಲಾಗಿದೆ.

ಜ್ಯೋತಿ ಸಂಜೀವಿನಿ ಸ್ಥಗಿತ:

ರಾಜ್ಯ ಸರ್ಕಾರ ಜ್ಯೋತಿ ಸಂಜೀವಿನಿ ಯೋಜನೆಯಡಿ ಭರಿಸಲಾಗುತ್ತಿರುವ ತ್ರೈಮಾಸಿಕ ಕಂತಿನ ಆಧಾರದಲ್ಲಿ ಆಯವ್ಯಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಸುವರ್ಣ ಆರೋಗ್ಯ ಟ್ರಸ್ಟ್‌ಗೆ ಬಿಡುಗಡೆ ಮಾಡಲಾಗುವುದು. ಹೊಸ ಯೋಜನೆ ಜಾರಿ ಬಳಿಕ ಜ್ಯೋತಿ ಸಂಜೀವಿನಿ ಯೋಜನೆ ಸ್ಥಗಿತಗೊಳಿಸಲಾಗುವುದು. ಆದರೆ, ನೂತನ ಯೋಜನೆಗೆ ಅಗತ್ಯವಿರುವ ಅನುದಾನವನ್ನು ಜ್ಯೋತಿ ಸಂಜೀವಿನಿ ಲೆಕ್ಕಶೀರ್ಷಿಕೆಯಡಿ ಮುಂದುವರಿಸಲು ನಿರ್ಧರಿಸಿದೆ.

ವೈದ್ಯಕೀಯ ಸಂಸ್ಥೆಗಳು ಚಿಕಿತ್ಸೆ ಒದಗಿಸಲು ಹೊಂದರಿಬೇಕಾದ ಮಾನದಂಡಗಳು ಮತ್ತು ಒಪ್ಪಂದಗಳನ್ನು ಕೇಂದ್ರ ಸರ್ಕಾರದ ಸಿಜಿಎಚ್‌ಎಸ್‌ ಮಾದರಿಯಲ್ಲಿ ಸಿದ್ಧಪಡಿಸಲಾಗುವುದು.

ಯೋಜನೆಗೆ ಒಳಪಡುವ ವೈದ್ಯಕೀಯ ಸಂಸ್ಥೆಗಳು:

*ಪ್ರವರ್ಗ 1– ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳು, ಸಾರ್ವಜನಿಕ ಆಸ್ಪತ್ರೆಗಳು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು, ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ವೈದ್ಯಕೀಯ ತಪಾಸಣಾ ಕೇಂದ್ರಗಳು

* ವೈದ್ಯಕೀಯ ಶಿಕ್ಷಣ ಇಲಾಖೆಯ ನಿಯಂತ್ರಣಕ್ಕೆ ಒಳಪಡುವ ಹಾಗೂ ಸರ್ಕಾರದಿಂದ ಅನುದಾನ ಪಡೆಯುವ ಎಲ್ಲಾ ಆರೋಗ್ಯ ಸಂಸ್ಥೆಗಳು, ರಾಜ್ಯದ ಎಲ್ಲ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು.

*ಪ್ರವರ್ಗ 2– ಆಯುಷ್‌ ಇಲಾಖೆಯ ನಿಯಂತ್ರಣಕ್ಕೆ ಒಳಪಡುವ ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳು, ಆಯುರ್ವೇದ, ಹೋಮಿಯೋಪತಿ, ಯುನಾನಿ ಇತ್ಯಾದಿ

*ಪ್ರವರ್ಗ2– ಖಾಸಗಿ ವಲಯದ ಆರೋಗ್ಯ ಸಂಸ್ಥೆಗಳು.  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು, ಸ್ಪೆಷಾಲಿಟಿ ಆಸ್ಪತ್ರೆಗಳು, ವಿಶೇಷ ಆಸ್ಪತ್ರೆಗಳಾದ ದಂತ ಮತ್ತು ಕಣ್ಣಿನ ಆಸ್ಪತ್ರೆಗಳು

*ಪ್ರವರ್ಗ 4– ವೈದ್ಯಕೀಯ ತಪಾಸಣಾ ಕೇಂದ್ರಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು