ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ನೀರಾವರಿ ಸಚಿವರ ವೈಫಲ್ಯಕ್ಕೆ ಸಾಕ್ಷಿ– ಎಚ್‌ಡಿಕೆ

Last Updated 22 ಫೆಬ್ರುವರಿ 2021, 16:37 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ತಮಿಳುನಾಡು ಸರ್ಕಾರ ಯೋಜನೆ ರೂಪಿಸಿ, ಕೇಂದ್ರ ಸರ್ಕಾರದ ಆರ್ಥಿಕ ನೆರವಿನಲ್ಲೇ ಅನುಷ್ಠಾನಕ್ಕೆ ಮುಂದಾಗಿರುವ ವಿಷಯ ರಾಜ್ಯದ ಜಲ ಸಂಪನ್ಮೂಲ ಸಚಿವರ ಅರಿವಿಗೇ ಬಾರದಿರುವುದು ಅವರ ವೈಫಲ್ಯಕ್ಕೆ ಸಾಕ್ಷಿ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಸಚಿವ ರಮೇಶ ಜಾರಕಿಹೊಳಿ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಸವಾಲಿನ ರಾಜಕೀಯ ಮಾಡುವುದು, ಅವರನ್ನು ಸೋಲಿಸುತ್ತೇನೆ, ಇವರನ್ನು ಸೋಲಿಸುತ್ತೇನೆ ಎನ್ನುವುದನ್ನು ಬಿಟ್ಟು ರಾಜ್ಯದ ಹಿತಕ್ಕಾಗಿ ಸವಾಲು ಹಾಕಲಿ. ಜಲ ಸಂಪನ್ಮೂಲ ಇಲಾಖೆ ಏನು ಬೇಡುತ್ತದೆಯೋ ಕನಿಷ್ಠ ಅದನ್ನಾದರೂ ಗಳಿಸಿಕೊಳ್ಳಲಿ’ ಎಂದೂ ಅವರು ಹೇಳಿದ್ದಾರೆ.

ಕಾವೇರಿ ವಿವಾದದಲ್ಲಿ ದೀರ್ಘಾವಧಿಯ ಹೋರಾಟದಲ್ಲಿ ರಾಜ್ಯಕ್ಕೆ ತಕ್ಕಮಟ್ಟಿನ ಯಶಸ್ಸು ಸಿಕ್ಕಿದೆ. ಈವರೆಗೆ ಜಲ ಸಂಪನ್ಮೂಲ ಖಾತೆ ನಿರ್ವಹಿಸಿದವರ ಬದ್ಧತೆ ಇದಕ್ಕೆ ಕಾರಣವಾಗಿರಬಹುದು. ಈ ಸರ್ಕಾರದಲ್ಲಿ ಅಂತಹ ಬದ್ಧತೆ ಕಾಣುತ್ತಿಲ್ಲ. ಇಲಾಖೆಯ ಕಚೇರಿಯಲ್ಲಿ ತಾವು ಕೂರಬೇಕು ಎಂಬುದಷ್ಟೆ ಸಚಿವರ ಇಚ್ಛೆಯಾಗಿತ್ತು. ಅದು ಈಡೇರಿದ ಮೇಲೆ ಇಲಾಖೆ ನಗಣ್ಯವಾಗಿದೆ ಎಂದು ಟೀಕಿಸಿದ್ದಾರೆ.

ರಾಜ್ಯ ಕೇಂದ್ರ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದಾರೆ. ಕಾವೇರಿ ವಿಷಯದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದ ಹಿತ ಕಾಯಬೇಕು. ವಿರುದ್ಧವಾಗಿ ನಡೆದುಕೊಂಡರೆ ಬಿಸಿ ಮುಟ್ಟಿಸಬೇಕಾಗುತ್ತದೆ. ತಾವು ಮುಖ್ಯಮಂತ್ರಿ ಆಗಿದ್ದಾಗ ಮೇಕೆದಾಟು ಯೋಜನೆ ರೂಪಿಸಿದ್ದಾಗ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮಾತು ಕೇಳಿ ಕೇಂದ್ರ ಸರ್ಕಾರ ತೊಂದರೆ ಕೊಟ್ಟಿತ್ತು. ಅದೇ ಸರ್ಕಾರ ಈಗ ಎಐಎಡಿಎಂಕೆ ಸರ್ಕಾರಕ್ಕೆ ಹೆಚ್ಚುವರಿ ನೀರಿನ ಬಳಕೆಗೆ ಹಣಕಾಸಿನ ನೆರವನ್ನೂ ನೀಡಿದೆ. ರಾಜ್ಯದಿಂದ ಎಲ್ಲವನ್ನೂ ಪಡೆದ ಪಕ್ಷವೇ ರಾಜ್ಯವನ್ನು ಶೋಷಿಸುತ್ತಿರುವುದಕ್ಕೆ ಇದು ಉದಾಹರಣೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ಹೆಚ್ಚುವರಿ ನೀರಿನ ಕಾರಣಕ್ಕಾಗಿಯೇ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಅಡ್ಡಿಪಡಿಸಿತ್ತು. ಈಗ ಹೆಚ್ಚುವರಿ ನೀರನ್ನು ವೈಗೈ, ವೆಲ್ಲಾರು ಮತ್ತು ಗುಂಡಾರು ನದಿಗೆಳಿಗೆ ಹಂಚಿಕೆ ಮಾಡಿ, ನದಿಗಳ ಜೋಡಣೆಗೆ ಮುಂದಾಗಿದೆ. ಈ ಯೋಜನೆಯನ್ನೇ ಬಳಸಿಕೊಂಡು ಮುಂದೆ ಸಂಕಷ್ಟದ ದಿನಗಳಲ್ಲೂ ಹೆಚ್ಚುವರಿ ನೀರಿನ ಮೇಲೆ ತಮಿಳುನಾಡು ಹಕ್ಕು ಪ್ರತಿಪಾದಿಸುವ ಅಪಾಯವಿದೆ’ ಎಂದು ಎಚ್ಚರಿಸಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಆಗ್ರಹ

ಬೆಂಗಳೂರು: ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪ್ರಶ್ನಿಸಿ ತಕ್ಷಣವೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಕಾವೇರಿ: ತಮಿಳುನಾಡು ವಿರುದ್ಧ
ಚಕಾರವೆತ್ತದ ರಾಜ್ಯ’ ವಿಶೇಷ ವರದಿಯ ತುಣುಕನ್ನು ಸೋಮವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ‘ಸುಪ್ರೀಂಕೋರ್ಟ್‌ನಲ್ಲೂ ಪ್ರಶ್ನಿಸಬೇಕು ಮತ್ತು ಆ ರಾಜ್ಯದ ಮುಖ್ಯಮಂತ್ರಿಗಳಿಗೂ ಪತ್ರ ಬರೆದುಯೋಜನೆ ಸ್ಥಗಿತಕ್ಕೆ ಒತ್ತಾಯಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘45 ಟಿಎಂಸಿ ಅಡಿ ನೀರನ್ನು ಅಕ್ರಮವಾಗಿ ಬಳಸಿಕೊಂಡು ನದಿ ಜೋಡಣೆ ಮಾಡಲು ತಮಿಳುನಾಡು ಸರ್ಕಾರ ಹೊರಟಿರುವುದು ಖಂಡನೀಯ. ಈ ಅಕ್ರಮವನ್ನು ತಕ್ಷಣವೇ ನಿಲ್ಲಿಸುವಂತೆ ಆ ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT