ಶನಿವಾರ, ಸೆಪ್ಟೆಂಬರ್ 18, 2021
30 °C
ಪ್ರಕರಣಕ್ಕೆ ಸಾಕ್ಷಿಯಾದ ಮಾಜಿ ಶಾಸಕನ ಮಗ; ಡ್ರಗ್ಸ್ ಮಾರಿದ್ದ ಆರೋಪಿಗಳು

ದೊಡ್ಡವರ ‘ಡ್ರಗ್ಸ್’ ನಶೆ: ಬರ್ತಡೇ ಪಾರ್ಟಿಯಲ್ಲೂ ‘ಡ್ರಗ್ಸ್’

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸುಧಾಮ್‌ ನಗರ (ನಂ. 118) ವಾರ್ಡ್‌ ಸದಸ್ಯರಾಗಿದ್ದ ಆರ್‌.ವಿ. ಯುವರಾಜ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲೂ ಡ್ರಗ್ಸ್ ಮಾರಾಟವಾಗಿದ್ದ ಸಂಗತಿಯನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಯಲಹಂಕ ಬಳಿಯ ‘ಲೇ–ರೋಮಾ ಗಾರ್ಡೇನಿಯಾ’ ಹೋಮ್ ಸ್ಟೇ/ರೆಸಾರ್ಟ್‌ನಲ್ಲಿ 2020ರ ಜುಲೈ 5ರಂದು ರಾತ್ರಿ ಆಯೋಜಿಸಿದ್ದ ಹುಟ್ಟುಹಬ್ಬ ಪಾರ್ಟಿಯಲ್ಲಿ ಆರೋಪಿಗಳು ಡ್ರಗ್ಸ್ ಮಾರಾಟ ಮಾಡಿದ್ದನ್ನು ಸಿಸಿಬಿ ಪೊಲೀಸರು, ದಾಖಲೆ ಸಮೇತ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

‘ಕಾಂಗ್ರೆಸ್ ಮಾಜಿ ಶಾಸಕ ಆರ್‌.ವಿ. ದೇವರಾಜ್ ಅವರ ಮಗ ಯುವರಾಜ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸ್ನೇಹಿತರು ತೀರ್ಮಾನಿಸಿದ್ದರು. ಸ್ನೇಹಿತರ ಒತ್ತಾಯದಂತೆ ಪಾರ್ಟಿಯಲ್ಲಿ ಪಾಲ್ಗೊಂಡು ಕೇಕ್‌ ಕತ್ತರಿಸಿದ್ದರು. ಅದೇ ಪಾರ್ಟಿಯಲ್ಲೇ ಆರೋಪಿಗಳಾದ ಆದಿತ್ಯ ಆಳ್ವ, ಕಿರಣ್ ಕಾರ್ತಿಕ್, ಮ್ಯಾಶಿ, ವೈಭವ್‌ಕುಮಾರ್ ಜೈನ್ ಹಾಗೂ ಇತರರು ಪಾಲ್ಗೊಂಡಿದ್ದರು’ ಎಂಬ ಅಂಶವೂ ಪಟ್ಟಿಯಲ್ಲಿದೆ.

ಇಬ್ಬರಿಂದ ಡ್ರಗ್ಸ್ ಮಾರಾಟ: ‘ಪ್ರಕರಣದ ಆರೋಪಿಗಳಾದ ವೈಭವ್‌ ಕುಮಾರ್ ಹಾಗೂ ಕಿರಣ್ ಕಾರ್ತಿಕ್ ಅಲಿಯಾಸ್ ಕೆ.ಡಿ, ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರಿಗೆ ಡ್ರಗ್ಸ್ ಮಾರಿದ್ದರು. ಈ ಬಗ್ಗೆ ಯುವರಾಜ್ ಅವರೇ ಸಾಕ್ಷಿ ಹೇಳಿಕೆ ನೀಡಿದ್ದಾರೆ’ ಎಂಬ ಮಾಹಿತಿಯನ್ನೂ ಪಟ್ಟಿಯಲ್ಲಿ ತಿಳಿಸಲಾಗಿದೆ.

‘ಆದಿತ್ಯ ಆಳ್ವ ಒಡೆತನದ ‘ಹೌಸ್ ಆಫ್ ಲೈಫ್’ ರೆಸಾರ್ಟ್‌ ವ್ಯವಹಾರ ನೋಡಿಕೊಳ್ಳುತ್ತಿದ್ದ ಕಿರಣ್ ಕಾರ್ತಿಕ್ ಹಾಗೂ ವೈಭವ್‌ ಕುಮಾರ್, ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್ ಖರೀದಿಸಿ ತಂದಿದ್ದರು. ಪಾರ್ಟಿಯಲ್ಲಿದ್ದವರಿಗೆ ಮಾರಿ ಹಣ ಪಡೆದುಕೊಂಡಿದ್ದರು.’

‘ಪ್ರಕರಣದ ಮತ್ತೊಬ್ಬ ಸಾಕ್ಷಿದಾರ ಸೈಯದ್‌ ಶಫಿವುಲ್ಲಾ ಅವರ ಗೆಳತಿಯ ಹಾಗೂ ಆರೋಪಿ ಪ್ರಶಾಂತ್ ರಾಜುವಿನ ಹುಟ್ಟುಹಬ್ಬವನ್ನೂ ಪ್ರತ್ಯೇಕ ದಿನಗಳಂದು ‘ಲೇ–ರೋಮಾ ಗಾರ್ಡೇನಿಯಾ’ ಹೋಮ್ ಸ್ಟೇ/ರೆಸಾರ್ಟ್‌ನಲ್ಲಿ ನಡೆದಿತ್ತು. ವೈಭವ್‌ಕುಮಾರ್‌ನೇ ಪಾರ್ಟಿ ಆಯೋಜನೆ ಜವಾಬ್ದಾರಿ ಹೊತ್ತುಕೊಂಡಿದ್ದ. ಇದೇ ಪಾರ್ಟಿಗಳಲ್ಲಿ ಕೊಕೇನ್, ಗಾಂಜಾ ಹಾಗೂ ಎಕ್ಸೈಟೆಸ್ಸಿ ಮಾತ್ರೆಗಳನ್ನು ಮಾರಿದ್ದ’ ಎಂಬ ಅಂಶವೂ ಪಟ್ಟಿಯಲ್ಲಿದೆ.

'ಡ್ರಗ್ಸ್ ಖರೀದಿ ಸಂಬಂಧ ನೈಜೀರಿಯಾ ಪ್ರಜೆಗಳ ಜೊತೆ ಆರೋಪಿಗಳು ನಡೆಸಿದ್ದ ಚಾಟಿಂಗ್ ಮಾಹಿತಿ ಸಿಕ್ಕಿದೆ. ವಾಟ್ಸ್‌ಆ್ಯಪ್, ಮೆಸೆಂಜರ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕವೂ ಆರೋಪಿಗಳು ವ್ಯವಹಾರ ನಡೆಸಿದ್ದಾರೆ’ ಎಂಬುದನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಸಾಕ್ಷಿ ಹೇಳಿಕೆ ನೀಡಿದ ಯುವರಾಜ್: ‘ಸ್ನೇಹಿತರ ಒತ್ತಾಯದಂತೆ ನನ್ನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದೆ. ಅಲ್ಲಿದ್ದ ಕೆಲ ಆರೋಪಿಗಳು, ಡ್ರಗ್ಸ್ ಮಾರಿದ್ದರು. ಅದನ್ನು ನಾನೂ ಪ್ರಶ್ನಿಸಿದ್ದೆ. ಅವರ ವಿರುದ್ಧ ನಾನೇ ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳುತ್ತೇನೆ ಎಂಬುದಾಗಿ ಯುವರಾಜ್ ಹೇಳಿಕೆ ನೀಡಿದ್ದಾರೆ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ಯುವಕ–ಯುವತಿಯ ಕರೆತರುತ್ತಿದ್ದ ಕೆ.ಡಿ’
‘ಹೌಸ್ ಆಫ್ ಲೈಫ್’ ರೆಸಾರ್ಟ್‌ನಲ್ಲಿ ಸಂಗೀತ ಕಾರ್ಯಕ್ರಮ ಹಾಗೂ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಕಿರಣ್‌ ಕಾರ್ತಿಕ್ ಅಲಿಯಾಸ್ ಕೆ.ಡಿ, ಯುವಕ– ಯುವತಿಯರನ್ನು ಕರೆತರುತ್ತಿದ್ದ. ಅವರಿಗೆ ಡ್ರಗ್ಸ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ’ ಎಂಬ ಅಂಶವೂಪಟ್ಟಿಯಲ್ಲಿದೆ.

‘ಹೊಸ ವರ್ಷಾಚರಣೆ, ವಾರದ ಕೊನೆ ದಿನಗಳು ಹಾಗೂ ವಿಶೇಷ ದಿನಗಳಲ್ಲಿ ಪಾರ್ಟಿ ಆಯೋಜಿಸಲಾಗುತ್ತಿತ್ತು. ಸ್ಥಳೀಯ ಯುವಕ– ಯುವತಿಯರ ಜೊತೆ ವಿದೇಶಿಗರೂ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಯುವತಿಯರಿಗೆ ಉಚಿತ ಪ್ರವೇಶವಿರುತ್ತಿತ್ತು. ಬಹುತೇಕರಿಗೆ ಎಕ್ಸೈಟೆಸ್ಸಿ ಮಾತ್ರೆಗಳನ್ನು ಗ್ರಾಂ ಗೆ ₹1,500ರಿಂದ ₹2,500ವರೆಗೆ ಮಾರಲಾಗುತ್ತಿತ್ತು’ ಎಂಬ ಮಾಹಿತಿಯನ್ನೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು