ಸೋಮವಾರ, ಜೂನ್ 21, 2021
29 °C
ದಿನವಿಡೀ ನಾಟಕೀಯ ಬೆಳವಣಿಗೆ

ಸಿ.ಡಿ. ಪ್ರಕರಣ l ಅತ್ಯಾಚಾರ: ಸಂತ್ರಸ್ತೆ ‘ಪ್ರಮಾಣ', ರಮೇಶಗೆ ಬಂಧನ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಿ.ಡಿ. ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಅಜ್ಞಾತ ಸ್ಥಳದಲ್ಲಿದ್ದ ಸಂತ್ರಸ್ತೆ, ನ್ಯಾಯಾಧೀಶರ ಎದುರು ಮಂಗಳವಾರ ಹಾಜರಾಗಿ ಸ್ವ–ಇಚ್ಛಾ ಹೇಳಿಕೆ ದಾಖಲಿಸುವ ಮೂಲಕ ಪ್ರಕರಣಕ್ಕೆ ತಾರ್ಕಿಕ ತಿರುವು ಕೊಟ್ಟಿದ್ದಾರೆ.

ಇದರ ಬೆನ್ನಲ್ಲೇ  ಕಬ್ಬನ್‌ ಪಾರ್ಕ್ ಪೊಲೀಸರಿಗೂ ದಾಖಲೆ ಸಮೇತ ಯುವತಿ ಹೇಳಿಕೆ ನೀಡಿದ್ದು, ಆರೋಪಿಯೂ ಆಗಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಗೆ ಬಂಧನದ ಭೀತಿ ಶುರುವಾಗಿದೆ.

ವಸಂತನಗರದ ವಿಶೇಷ ನ್ಯಾಯಾಲಯದಲ್ಲಿ ನಗರದ 24ನೇ ಎಸಿಎಂಎಂ ನ್ಯಾಯಾಧೀಶರ ಎದುರು ಮಂಗಳವಾರ ಮಧ್ಯಾಹ್ನ ಹಾಜರಾದ ಸಂತ್ರಸ್ತೆ, ಸಿಆರ್‌ಪಿಸಿ ಸೆಕ್ಷನ್ 164ರಡಿ  ಎರಡೂವರೆ ಗಂಟೆ ತಮ್ಮ ಹೇಳಿಕೆ ನೀಡಿದರು. ಅದನ್ನು ನ್ಯಾಯಾಲಯ ದಾಖಲಿಸಿಕೊಂಡಿತು. ಹೇಳಿಕೆ ದಾಖಲು ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಲಾಯಿತು.

‘ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿದ್ದ ರಮೇಶ ನನ್ನ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಯುವತಿ, ಕಬ್ಬನ್‌ಪಾರ್ಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಅದಕ್ಕೆ ಸಂಬಂಧಪಟ್ಟಂತೆ ಯುವತಿಯು ನ್ಯಾಯಾಧೀಶರ ಎದುರು ಪೂರಕ ಹೇಳಿಕೆ ನೀಡಿದ್ದು, ದಾಖಲೆಯನ್ನೂ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ಲಿಖಿತ ರೂಪದಲ್ಲಿ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಧೀಶರು, ಅದನ್ನು ಮುಚ್ಚಿದ ಲಕೋಟೆಯಲ್ಲಿಟ್ಟರು. ಅದೇ ಲಕೋಟೆಯನ್ನು ಪ್ರಕರಣದ ತನಿಖಾಧಿಕಾರಿ ಎಂ.ಸಿ. ಕವಿತಾ ಅವರಿಗೆ ಬುಧವಾರ ಹಸ್ತಾಂತರಿಸುವ ಸಾಧ್ಯತೆ ಇದೆ.

ಧ್ವನಿ ಮಾದರಿ ಸಂಗ್ರಹ: ಈ ಪ್ರಕ್ರಿಯೆ ಬಳಿಕ ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗಕ್ಕೆ ಸಂತ್ರಸ್ತೆಯನ್ನು ಕರೆದೊಯ್ದ ತನಿಖಾಧಿಕಾರಿ ಕವಿತಾ, ಅವರ ಧ್ವನಿ ಮಾದರಿ ಸಂಗ್ರಹಿಸಿದರು. ಅದೇ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಿ.ಡಿಯಲ್ಲಿರುವ ಯುವತಿ ಹಾಗೂ ಈಗ ಹೇಳಿಕೆ ನೀಡಿರುವ ಯುವತಿ ಒಬ್ಬರೇ ಅಥವಾ ಬೇರೆ ಬೇರೆಯವರೇ ಎಂಬುದರ ಪತ್ತೆಗೆ ಈ ಪ್ರಕ್ರಿಯೆ ನಡೆಸಲಾಗಿದೆ.

‘ಯುವತಿಯನ್ನು ಸಿಆರ್‌ಪಿಸಿ 161ರಡಿ ಧ್ವನಿ ಮಾದರಿ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಿ’ ಎಂದು ಕೋರಿ ತನಿಖಾಧಿಕಾರಿ ಕವಿತಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿ ಮಾನ್ಯ ಮಾಡಿದ ನ್ಯಾಯಾಲಯ, ಪರೀಕ್ಷೆಗೆ ಅನುಮತಿ ನೀಡಿತು.

ಎಸ್‌ಐಟಿ ವಿಚಾರಣೆ ಸಾಧ್ಯತೆ: ರಮೇಶ ಜಾರಕಿಹೊಳಿ ನೀಡಿರುವ ದೂರು ಆಧರಿಸಿ ಸದಾಶಿವನಗರ ಠಾಣೆ
ಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಯುವತಿಯನ್ನು ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಯುವತಿಯನ್ನು ವಿಚಾರಣೆ ನಡೆಸಲು ಅನುಮತಿ ಕೋರಿ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅನುಮತಿ ಸಿಗುವ ವಿಶ್ವಾಸವಿದ್ದ ಎಸ್‌ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ, ಜಂಟಿ ಕಮಿಷನರ್ ಸಂದೀಪ ಪಾಟೀಲ್ ಹಾಗೂ ಇತರೆ ಅಧಿಕಾರಿಗಳು ನ್ಯಾಯಾಲಯಕ್ಕೆ ಬಂದಿದ್ದರು.

ಆದರೆ, ಅನುಮತಿ ಸಿಗದ ಕಾರಣ ಅಧಿಕಾರಿಗಳು ವಾಪಸ್‌ ಹೋದರು. ಇದೀಗ ಯುವತಿಗೆ ಮತ್ತೊಂದು ನೋಟಿಸ್‌ ನೀಡಲಾಗಿದೆ. ಯುವತಿಯೇ ಸ್ವಯಂಪ್ರೇರಣೆಯಿಂದ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಹೀಗಾಗಿ, ಎಸ್‌ಐಟಿ ಪ್ರಶ್ನಾವಳಿಗಳನ್ನು ತಯಾರಿಸಿಕೊಂಡಿರುವುದಾಗಿ ಮೂಲಗಳು ಹೇಳಿವೆ.

ವಿಮಾನದಲ್ಲಿ ಬಂದು ವಾಸ್ತವ್ಯ:

ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ ತನಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರ ಕಣ್ಣು ತಪ್ಪಿಸಿದ ಯುವತಿ, ವಿಮಾನದಲ್ಲಿ ಸೋಮವಾರವೇ(ಮಾ.29) ಬೆಂಗಳೂರಿಗೆ ಬಂದು, ನಗರದಲ್ಲೇ ವಾಸ್ತವ್ಯ ಹೂಡಿದ್ದರು. 

ಅಜ್ಞಾತ ಸ್ಥಳದಲ್ಲಿದ್ದ ಯುವತಿ, ವಿಡಿಯೊ ಹಾಗೂ ಕೈ ಬರಹದ ಮೂಲಕ ಪ್ರಕರಣಕ್ಕೆ ದಿನಕ್ಕೊಂದು ತಿರುವು ನೀಡುತ್ತಿದ್ದರು. ಅವರು ನ್ಯಾಯಾಲಯಕ್ಕೆ ಹಾಜರಾಗುವ ಸುದ್ದಿ ಹರಿದಾಡುತ್ತಿದ್ದಂತೆ, ಯುವತಿ ಎಲ್ಲಿಂದ ಬರುತ್ತಾರೆ? ಹೇಗೆ ಬರುತ್ತಾರೆ? ಎಂಬ ಪ್ರಶ್ನೆ ಕಾಡುತ್ತಿದ್ದವು.

ಹೊರ ರಾಜ್ಯದಲ್ಲಿದ್ದ ಯುವತಿ, ವಕೀಲರ ಭದ್ರತೆಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಮಧ್ಯಾಹ್ನ ಬಂದಿಳಿದಿದ್ದರು. ಆದರೆ, ಹೇಳಿಕೆ ದಾಖಲಿಸಲು ಅನುಮತಿ ಸಿಕ್ಕಿರಲಿಲ್ಲ.

ಅದೇ ಕಾರಣಕ್ಕೆ ದೇವನಹಳ್ಳಿ ಬಳಿಯ ಸ್ಥಳವೊಂದರಲ್ಲಿ ವಕೀಲರು ಮತ್ತು ಆಪ್ತರ ರಕ್ಷಣೆಯಲ್ಲಿ ಯುವತಿ ಉಳಿದು
ಕೊಂಡಿದ್ದರು. ನ್ಯಾಯಾಲಯದಿಂದ ಅನುಮತಿ ಸಿಗುತ್ತಿದ್ದಂತೆ ಕಾರಿನಲ್ಲಿ ಬಂದ ಯುವತಿ, ನ್ಯಾಯಾಲಯಕ್ಕೆ ಹಾಜರಾದರು.

ಉಡುಗೊರೆ: ಪುರಾವೆ ಕೊಟ್ಟ ಸಂತ್ರಸ್ತೆ

ತನಿಖಾಧಿಕಾರಿ ಎದುರು ಹೇಳಿಕೆ ನೀಡಿರುವ ಸಂತ್ರಸ್ತೆ, ಆರೋಪಿ ರಮೇಶ ಜಾರಕಿಹೊಳಿ ನೀಡಿದ್ದರು ಎನ್ನಲಾದ ಉಡುಗೊರೆಗಳ ಪುರಾವೆಗಳನ್ನು ಕೊಟ್ಟಿದ್ದಾರೆ.

ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿ ತನಿಖಾಧಿಕಾರಿ ಕವಿತಾ ಜೊತೆಯಲ್ಲೇ ಆಡುಗೋಡಿಯಲ್ಲಿರುವ ವಿಶೇಷ ವಿಚಾರಣಾ ಕೊಠಡಿಗೆ ಬಂದಿದ್ದ ಸಂತ್ರಸ್ತೆ, ಎರಡು ಗಂಟೆ ವಿಚಾರಣೆ ಎದುರಿಸಿದರು.

‘ಕೆಲಸ ಕೊಡಿಸುವುದಾಗಿ ನಂಬಿಸಿದ್ದ ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅವರ ವಿರುದ್ಧ ನೀಡಿರುವ ದೂರಿಗೆ ನಾನು ಬದ್ಧವಾಗಿದ್ದೇನೆ. ಪೂರಕ ಪುರಾವೆಗಳನ್ನೂ ಒದಗಿಸಲು ಸಿದ್ಧವಾಗಿದ್ದೇನೆ’ ಎಂದು ಸಂತ್ರಸ್ತೆ ಹೇಳಿರುವುದಾಗಿ ಗೊತ್ತಾಗಿದೆ.

‘ಕೆಲಸ ಸಿಗುವ ಭರವಸೆಯಿಂದ ಅವರು ಹೇಳಿದಂತೆ ಕೇಳಿದೆ. ನನ್ನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ ರಮೇಶ, ಉಡುಗೊರೆಗಳನ್ನು ನೀಡಿದ್ದರು. ಕೆಲಸ ಕೊಡಿಸುವಂತೆ ಕೇಳಿದಾಗ, ನಿರಾಕರಿಸಿದ್ದ ಅವರು ಅಶ್ಲೀಲವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು. ಅದರಿಂದ ನೊಂದ ನಾನು, ಅವರ ವಿರುದ್ಧ ದೂರು ನೀಡಲು ಮುಂದಾದೆ. ಆದರೆ, ಅವರು ಪ್ರಭಾವಿ ಸಚಿವರಾಗಿದ್ದರು. ಹೀಗಾಗಿ, ಬೇರೆಯವರ ಮೂಲಕ ದೂರು ದಾಖಲಿಸಿದ್ದೆ. ಜೀವ ಭಯದಿಂದಾಗಿ ರಹಸ್ಯ ಸ್ಥಳದಲ್ಲಿ ಉಳಿದುಕೊಂಡಿದ್ದೆ. ಈಗ ನ್ಯಾಯ ಸಿಗುವ ಭರವಸೆ ಬಂದಿದ್ದರಿಂದ ನ್ಯಾಯಾಲಯ ಹಾಗೂ ತಮ್ಮ (ತನಿಖಾಧಿಕಾರಿ) ಮುಂದೆ ಹಾಜರಾಗಿದ್ದೇನೆ’ ಎಂದೂ ಯುವತಿ ತಿಳಿಸಿದ್ದಾಗಿ ಮೂಲಗಳು ಹೇಳಿವೆ.

ಪ್ರಕರಣಕ್ಕೆ ಸಂಬಂಧಪಟ್ಟಿರುವ ತಮ್ಮ ಮೊಬೈಲ್‌, ವಿಡಿಯೊ, ಆಡಿಯೊ, ಉಡುಗೊರೆ ಸೇರಿದಂತೆ ಇತರೆ ಪುರಾವೆಗಳನ್ನೂ ಯುವತಿ ತನಿಖಾಧಿಕಾರಿಗೆ ನೀಡಿರುವುದು ಗೊತ್ತಾಗಿದೆ.

ರಮೇಶ ನಿರಪರಾಧಿಯಾಗಿ ಹೊರಬರ್ತಾರೆ: ಬಿಎಸ್‌ವೈ

ಬೆಳಗಾವಿ: ‘ಸಿ.ಡಿ. ಪ್ರಕರಣದ ತನಿಖೆಯನ್ನು ಎಸ್‌ಐಟಿ ನಿಷ್ಪಕ್ಷಪಾತವಾಗಿ ಮಾಡುತ್ತಿದ್ದು, ರಮೇಶ ಜಾರಕಿಹೊಳಿ ನಿರಪರಾಧಿಯಾಗಿ ಹೊರಬರುತ್ತಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

‘ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಮಾತನಾಡದೇ ಇರುವುದನ್ನು ನೋಡಿದರೆ ಅವರಲ್ಲೇ ಹುಳುಕಿದೆ ಎನಿಸುತ್ತದೆ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ ಗೃಹ ಸಚಿವರಿಂದ ನಿತ್ಯವೂ ಮಾಹಿತಿ ಪಡೆಯುತ್ತಿದ್ದೇನೆ. ಸಿದ್ದರಾಮಯ್ಯ ಜವಾಬ್ದಾರಿ ಸ್ಥಾನದಲ್ಲಿದ್ದು ಅದಕ್ಕೆ ತಕ್ಕಂತೆ ಮಾತನಾಡಬೇಕು. ಕಾಂಗ್ರೆಸ್‌ನವರು ಇದರಲ್ಲಿ ದುರುದ್ದೇಶದ ರಾಜಕೀಯ ಮಾಡುತ್ತಿದ್ದಾರೆ’ ಎಂದರು.

‘ಉಪ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವಂತೆ ರಮೇಶಗೆ ಹೇಳಿದ್ದೇನೆ’ ಎಂದೂ ಅವರು ಹೇಳಿದರು.

‘ಯುವತಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ವಿಚಾರ ನನಗೆ ಗೊತ್ತಿಲ್ಲ’ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.

‘ಹೆಣ್ಣುಮಗಳಿಗೆ ಅನ್ಯಾಯವಾಗಬಾರದು’:

ರಾಯಚೂರು: ‘ಯಾವುದೇ ಹೆಣ್ಣುಮಕ್ಕಳಿಗೆ ಅನ್ಯಾಯ ಆಗಬಾರದು. ನಾವೆಲ್ಲ ಹೆಣ್ಣುಮಕ್ಕಳ ಪರವಾಗಿದ್ದೇವೆ. ಸಿ.ಡಿ.ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿರುವುದರಿಂದ ಆ ಬಗ್ಗೆ ಈಗ ಏನೂ ಹೇಳಿದರೂ ತಪ್ಪಾಗುತ್ತದೆ’ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಮಂಗಳವಾರ ಮಸ್ಕಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಪ್ರಕರಣದಲ್ಲಿ ಯಾರಿಗೂ ಅನ್ಯಾಯವಾಗಬಾರದು. ತಪ್ಪು ಮಾಡಿದವರು ತನಿಖೆ ನಂತರ ಶಿಕ್ಷೆ ಅನುಭವಿಸುತ್ತಾರೆ’ ಎಂದರು. ಯಾವುದೇ ಹೆಣ್ಣುಮಕ್ಕಳಿಗೆ ಕಾನೂನಾತ್ಮಕವಾಗಿ ಸಿಗಬೇಕಾದ ರಕ್ಷಣೆಯನ್ನು ವಾಲ್ಮೀಕಿ ಸಮಾಜದಿಂದಲೂ ಒದಗಿಸಲಾಗುವುದು’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು