ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ. ಪ್ರಕರಣ: ಹೊಸ ಬಾಂಬ್‌ ಸಿಡಿಸಿದ ಬಸನಗೌಡ ಪಾಟೀಲ ಯತ್ನಾಳ್‌

ಬಿಜೆಪಿ ಯುವರಾಜನ ಹೆಸರು ಶೀಘ್ರ ಬಹಿರಂಗ
Last Updated 27 ಮಾರ್ಚ್ 2021, 15:09 IST
ಅಕ್ಷರ ಗಾತ್ರ

ರಾಣೆಬೆನ್ನೂರು (ಹಾವೇರಿ): ‘ಕಾಂಗ್ರೆಸ್‌ ಮಹಾನಾಯಕ’ ಮತ್ತು ‘ಬಿಜೆಪಿಯ ಯುವರಾಜ’ ಇವರ ಬಳಿ ಸಿ.ಡಿ. ತಯಾರಿಸುವ ಕಾರ್ಖಾನೆಗಳಿವೆ. ಇವರು ಸಿ.ಡಿ.ಗಳನ್ನೂ ಖರೀದಿ ಮಾಡುತ್ತಾರೆ. ಈಗಾಗಲೇ ‘ಕಾಂಗ್ರೆಸ್ ಮಹಾನಾಯಕ’ನ ಹೆಸರು ಹೊರಬಿದ್ದಿದೆ. ಕೆಲವೇ ದಿನಗಳಲ್ಲಿ ‘ಬಿಜೆಪಿ ಯುವರಾಜ’ನ ಹೆಸರು ಹೊರಬರಲಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಮಹಾನಾಯಕ ಮತ್ತು ಯುವರಾಜರು ಹೆಣ್ಣುಮಕ್ಕಳನ್ನು ಬಿಟ್ಟು ಕೆಲವರನ್ನು ಬ್ಲ್ಯಾಕ್‌ಮೇಲ್‌‌ ಮಾಡುತ್ತಾರೆ. ನನಗೆ ಬೆಂಬಲ ನೀಡದಿದ್ದರೆ, ತೊಂದರೆ ಕೊಟ್ಟರೆ ಸಿ.ಡಿ. ಬಿಡುಗಡೆ ಮಾಡುತ್ತೇನೆ ಎಂದು ಹೆದರಿಸುತ್ತಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿರುವ ಎಷ್ಟೋ ಶಾಸಕರು ಈ ಭಯದ ವಾತಾವರಣದಲ್ಲಿದ್ದಾರೆ’ ಎಂದು ಹೇಳಿದರು.

ಆ ಸಿ.ಡಿ. ಹೆಣ್ಣುಮಗಳು ಈಗಾಗಲೇ ‘ಮಹಾನಾಯಕ’ನ ಹೆಸರು ಹೇಳಿದ್ದಾಳೆ. ಮಹಾನಾಯಕನ ಚಾಲಕ ಆಕೆಯ ಜೊತೆ ಓಡಾಡಿರುವ ಬಗ್ಗೆ ಚರ್ಚೆಯಾಗುತ್ತಿದೆ. ಯುವರಾಜನ ರಕ್ಷಣೆ ಮಾಡಲು ಪ್ರಯತ್ನ ನಡೆಯುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ಆ ಯುವರಾಜ ಒಬ್ಬ ಜೈಲಿನಲ್ಲಿದ್ದಾನೆ. ಇನ್ನೊಬ್ಬ ಯುವರಾಜ ಹೊರಗಡೆ ಇದ್ದಾನೆ ಎಂದರು. ಆ ಮಹಾನಾಯಕ ಮತ್ತು ಯುವರಾಜ ಯಾರು ಎಂಬ ಬಗ್ಗೆ ಯತ್ನಾಳ ಬಾಯಿಬಿಡಲಿಲ್ಲ.

ಇದನ್ನೂ ಓದಿ:

ರಕ್ಷಣೆ ಮಾಡಲೆಂದೇ ಸಿಸಿಬಿ ತನಿಖೆ:

ಸಿ.ಡಿ. ಪ್ರಕರಣದಲ್ಲಿ ಕೆಲವರನ್ನು ರಕ್ಷಣೆ ಮಾಡಲೆಂದೇ ‘ಸಿಸಿಬಿ ತನಿಖೆ’ಗೆ ವಹಿಸಲಾಗಿದೆ. ‘ಸಿಬಿಐ ತನಿಖೆ’ಗೆ ವಹಿಸಿದ್ದರೆ, ಎಲ್ಲ ಕಳ್ಳರನ್ನು ಒದ್ದು ಒಳಗೆ ಹಾಕುತ್ತಿದ್ದರು. ಇನ್ನೂ ಬಹಳ ಮಂದಿಯ ಸಿ.ಡಿ.ಗಳನ್ನು ಮಾಡಲಾಗಿದೆ. ಇದರಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಗಳು, ವ್ಯಾಪಾರಸ್ಥರು, ಶಾಸಕರು, ಸಂಸದರು ಸೇರಿದ್ದಾರೆ ಎಂದು ಹೊಸ ಬಾಂಬ್‌ ಸಿಡಿಸಿದರು.

ಉನ್ನತ ನಾಯಕನ ಸಿ.ಡಿ:

‘ಬಿಜೆಪಿ ಉನ್ನತ ನಾಯಕ’ನ ಸಿ.ಡಿ. ‘ಕಾಂಗ್ರೆಸ್‌ ಮಹಾನಾಯಕ’ನ ಬಳಿ ಇದೆ. ಹಾಗಾಗಿಯೇ ಮಹಾನಾಯಕನನ್ನು ನೋಡಿದರೆ ಸಾಕು ಉನ್ನತ ನಾಯಕ ಅಂಜುತ್ತಾನೆ. ಈಗಾಗಲೇ ಈ ಮಹಾನಾಯಕ ನನ್ನ ಬಳಿ ಸಿ.ಡಿ. ಎಂದು ಹೇಳಿದ್ದಾನೆ.

‘ಭ್ರಷ್ಟ ರಾಜಕಾರಣಿಗಳು’ ಮತ್ತು ‘ಪ್ರಾಮಾಣಿಕ ರಾಜಕಾರಣಿಗಳು’ ಎಂಬ ಎರಡು ಗುಂಪುಗಳು ರಾಜ್ಯದಲ್ಲಿವೆ. ಭ್ರಷ್ಟರು ಎಲ್ಲ ಪಕ್ಷದಲ್ಲೂ ಇದ್ದಾರೆ. ಅವರಿಗೆ ತಮ್ಮ ಪಕ್ಷಕ್ಕಿಂತ ಸ್ವಾರ್ಥ, ಅಕ್ರಮ ಆಸ್ತಿ ರಕ್ಷಣೆ, ಭ್ರಷ್ಟಾಚಾರ, ಹಣ ಗಳಿಕೆಯೇ ಮುಖ್ಯವಾಗಿದೆ. ದಿನದಿಂದ ದಿನಕ್ಕೆ ಪ್ರಾಮಾಣಿಕ ರಾಜಕಾರಣಿಗಳು ಹತಾಶರಾಗುವ ಪರಿಸ್ಥಿತಿ ರಾಜ್ಯದಲ್ಲಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೇ 2ರ ನಂತರ ನಿರ್ಣಯ:

ಪ್ರಧಾನಿ ಮೋದಿ ಅವರು ಕರ್ನಾಟಕದ ಬೆಳವಣಿಗೆಗಳನ್ನು ಗಮಿಸುತ್ತಿದ್ದಾರೆ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಅವರಿಗೆ ಮಾಹಿತಿ ಇದೆ. ಮೇ 2ರ ನಂತರ ಒಂದು ಗಟ್ಟಿ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಅವರ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದರು.

ಸಿಗದ ಅನುದಾನ:

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲೇಬೇಕು ಎಂಬ ನಿಲುವಿಗೆ ಈಗಲೂ ಬದ್ಧನಾಗಿದ್ದೇನೆ. ಬಿಜೆಪಿ ಶಾಸಕರಿಗೆ ಅನುದಾನ ಸಿಗುತ್ತಿಲ್ಲ. ಆದರೆ, ಕಾಂಗ್ರೆಸ್‌ನ 40 ಶಾಸಕರಿಗೆ ಅನುದಾನ ಸಿಗುತ್ತಿದೆ. ಇಲ್ಲಿಯವರೆಗೂ ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ. ಸಿದ್ದರಾಮಯ್ಯನವರು ಎರಡು ದಿನಕ್ಕೊಮ್ಮೆ ಶಾಸಕಾಂಗದ ಸಭೆ ಕರೆಯುತ್ತಿದ್ದರು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಟಾಂಗ್‌ ನೀಡಿದರು.

ಹೊಂದಾಣಿಕೆ ರಾಜಕಾರಣ:

ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಯಾವ ರೀತಿ ಅನ್ಯಾಯವಾಗಿದೆ ಎಂಬ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ನಾವು ತಯಾರಿ ಮಾಡಿಕೊಂಡಿದ್ದೆವು. ದುರಂತ ಅಂದ್ರೆ, ಕಾಂಗ್ರೆಸ್ ಮತ್ತು ನಮ್ಮ ನಾಯಕರು ಹೊಂದಾಣಿಕೆ ಮಾಡಿಕೊಂಡು, ಸಿ.ಡಿ. ನೆಪ ಮಾಡಿಕೊಂಡು ಸದನವನ್ನು ಹಾಳು ಮಾಡಿದರು ಎಂದು ಕಿಡಿಕಾರಿದರು.

ಇವನ್ನೂ ಓದಿ:
ರಮೇಶ‌ ಜಾರಕಿಹೊಳಿ ಹತಾಶೆಯಲ್ಲಿದ್ದಾರೆ: ಡಿ.ಕೆ. ಶಿವಕುಮಾರ್







ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT