ಮಂಗಳವಾರ, ಆಗಸ್ಟ್ 16, 2022
29 °C
ಇದು ದಪ್ಪ ಚರ್ಮದ ಸರ್ಕಾರ –ವಿರೋಧ ಪಕ್ಷಗಳು ಗರಂ

ಪರಿಹಾರ ನೀಡಿಕೆಯಲ್ಲೂ ಕೇಂದ್ರದ ರಾಜಕಾರಣ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರವಾಹ ಪರಿಹಾರದ ಮೊತ್ತ ನೀಡಿಕೆಯಲ್ಲೂ ಕೇಂದ್ರ ಸರ್ಕಾರ ಚುನಾವಣಾ ರಾಜಕಾರಣ ಮಾಡುತ್ತಿದೆ. ಚುನಾವಣೆ ಎದುರಿಸುತ್ತಿರುವ ಪಶ್ಚಿಮಬಂಗಾಳಕ್ಕೆ ಹೆಚ್ಚು ಪರಿಹಾರ ನೀಡಿರುವ ಕೇಂದ್ರ, ರ್ನಾಟಕಕ್ಕೆ ಕಡಿಮೆ ಮೊತ್ತದ ಪರಿಹಾರ ನೀಡಿ ತಾರತಮ್ಯ ಧೋರಣೆ ತೋರಿಸಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದರು.

ಪ್ರವಾಹ ಪೀಡಿತ ಪ್ರದೇಶಗಳ ದುಸ್ಥಿತಿ ಕುರಿತು ನಿಯಮ 69 ರಡಿ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ‘ಕೇಂದ್ರದ ಬಳಿ ಹೆಚ್ಚಿನ ಪರಿಹಾರ ಮೊತ್ತ ಕೇಳಲು ರಾಜ್ಯ ಬಿಜೆಪಿ ನಾಯಕರು ಧೈರ್ಯ ತೋರಿಸುತ್ತಿಲ್ಲ. ಅವರು ಕೊಡೋದು ಭಿಕ್ಷೆ ಅಲ್ಲ, ಹಕ್ಕು. ಎಲ್ಲ ರೀತಿಯ ಅನ್ಯಾಯಗಳನ್ನು ಸಹಿಸಿಕೊಂಡಿದ್ದೀರಿ. ನಿಮ್ಮದು ದಪ್ಪ ಚರ್ಮದ ಸರ್ಕಾರ’ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

‘ಪಶ್ಚಿಮಬಂಗಾಳಕ್ಕೆ ₹2,707 ಕೋಟಿ ಪರಿಹಾರ ಕೊಟ್ಟಿದ್ದರೆ, ರಾಜ್ಯಕ್ಕೆ ₹ 577 ಕೋಟಿ ಮಾತ್ರ ನೀಡಿದೆ. ಕೇಂದ್ರ ಪರಿಹಾರ ಕೊಡುತ್ತದೆಯೋ ಬಿಡುತ್ತೋ, ರಾಜ್ಯದ ಖಜಾನೆ ಖಾಲಿ ಆಗಿದೆ. ನೀವಾದರೂ ಸಾಲ ಎತ್ತಿ ಪರಿಹಾರ ಕೊಡಿ. ಸರ್ಕಾರ ನಿಗಮ–ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸುವ ಮೂಲಕ ದುಂದು ವೆಚ್ಚ ನಿಲ್ಲಿಸಲಿ’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

‘ಕೇಂದ್ರದ ಬಳಿ ಕಳೆದ ವರ್ಷವೂ ಪರಿಹಾರ ಕೇಳಿಲ್ಲ, ಈ ವರ್ಷವೂ ಕೇಳಲಿಲ್ಲ. ಪ್ರಧಾನಿ ಮೋದಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿಲ್ಲ. ಕರ್ನಾಟಕವನ್ನು ಕ್ಯಾರೇ ಎನ್ನುತ್ತಿಲ್ಲ. ಇನ್ನು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯದ ಋಣ ತೀರಿಸುವ ಬದಲು 15 ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ₹5,094 ಕೋಟಿ ಕೊಡುವುದಿಲ್ಲ ಎಂದಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಪರಿಹಾರದ ಹಣ ತರುವಂತೆ ಮುಖ್ಯಮಂತ್ರಿಯವರಿಗೆ ಮೂರು ಬಾರಿ ಪತ್ರ ಬರೆದೆ. ಈವರೆಗೂ ಉತ್ತರ ಬರಲಿಲ್ಲ. ವಿರೋಧ ಪಕ್ಷ ನಾಯಕನ ಪತ್ರಗಳಿಗೆ ಉತ್ತರ ನೀಡುವ ಸೌಜನ್ಯ ಇವರಿಗಿಲ್ಲ ’ಎಂದೂ ಕಿಡಿಕಾರಿದರು.

ಆಗ ಮಧ್ಯಪ್ರವೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಪರಿಹಾರ ನೀಡಿಕೆಯನ್ನು ಚುನಾವಣಾ ರಾಜಕೀಯಕ್ಕೆ ಹೋಲಿಸುವುದು ಸರಿಯಲ್ಲ. ಹಿಂದೆ ಯುಪಿಎ, ಕಾಂಗ್ರೆಸ್‌ ಅವಧಿಯಲ್ಲಿ ಚುನಾವಣೆ ಸಂದರ್ಭಗಳಲ್ಲಿ ಯಾವ ರಾಜ್ಯಗಳಿಗೆ ಎಷ್ಟೆಷ್ಟು ಹಣ ಬಿಡುಗಡೆ ಮಾಡಿದ್ದರು ಎಂದು ಹೇಳಬೇಕಾ? ಪಶ್ಚಿಮಬಂಗಾಳದ ಪರಿಹಾರ ಕುರಿತ ಮಾಹಿತಿ ನಮ್ಮ ಬಳಿ ಇಲ್ಲ’ ಎಂದರು.

‘ಹಣಕಾಸು ಆಯೋಗಳು ಕೊಟ್ಟ ವರದಿಗಳನ್ನೆಲ್ಲಾ ಕೇಂದ್ರ ಸರ್ಕಾರಗಳು ಸಾಕಷ್ಟು ಬಾರಿ ಒಪ್ಪುವುದಿಲ್ಲ. ಈ ಹಿಂದಿನ 14 ಹಣಕಾಸು ಆಯೋಗಗಳು ಕೊಟ್ಟಿದ್ದ ಶಿಫಾರಸ್ಸುಗಳನ್ನು ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದ್ದಾಗ ಒಪ್ಪಿಕೊಂಡಿದ್ದವಾ’ ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಚಂಡಮಾರುತದಿಂದ ₹ 1 ಲಕ್ಷ ಕೋಟಿ ನಷ್ಟವಾಗಿದೆ ಎಂದು ಪಶ್ಚಿಮಬಂಗಾಳ ಹೇಳಿತ್ತು. ಎನ್‌ಡಿಆರ್‌ಎಫ್‌ ಅಡಿ ₹5,191 ಕೋಟಿ ಕೇಳಿತ್ತು, ಕೇಂದ್ರ ಸರ್ಕಾರ ₹2,707 ಕೋಟಿ ಕೊಟ್ಟಿದೆ. ನಮ್ಮಲ್ಲಿ ಮುಂಗಡವಾಗಿ ₹715 ಕೋಟಿ ಕೇಳಿದ್ದೆವು, ಕೇಂದ್ರ ₹577 ಕೋಟಿ ನೀಡಿದೆ’ ಎಂದು ಹೇಳಿದರು.

ಸರ್ವಜ್ಞ ಪೀಠದಲ್ಲಿ ಕುಳಿತವರೆಲ್ಲ ಸರ್ವಜ್ಞರೇ?

‘ನೀನು ಇಲ್ಲಿದ್ದಾಗ ಒಂದು ರೀತಿ, ಅಲ್ಲಿ ಇದ್ದಾಗ ಇನ್ನೊಂದು ರೀತಿ. ಪ್ರಜಾಪ್ರಭುತ್ವ ಮರೆತಿದ್ದೀಯಾ’ ಎಂದು ಸಿದ್ದರಾಮಯ್ಯ ಅವರು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಛೇಡಿಸಿದರು.
‘ನಿಲುವಳಿ ಮೇಲಿನ ಚರ್ಚೆಯನ್ನು ಒಂದೂವರೆ ಗಂಟೆಯಲ್ಲಿ ಮುಗಿಸಬೇಕು’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದಾಗ, ‘ಒಂದೂವರೆ ಗಂಟೆನಾ’ ಎಂದು ಮಾಧುಸ್ವಾಮಿ ಮೆಲು ಧ್ವನಿ ಹೇಳಿದರು. ತಕ್ಷಣವೇ ಸಿದ್ದರಾಮಯ್ಯ ‘ಡೆಮಾಕ್ರಸಿ ಮರೆತೆಯಾ ಮಾಧುಸ್ವಾಮಿ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ‘ಸರ್ವಜ್ಞಪೀಠದಲ್ಲಿ ಕೂತವರೆಲ್ಲ ಸರ್ವಜ್ಞರಾಗುವುದಿಲ್ಲ’ ಎಂದರು.

***

ಎಲ್ಲೂ ಪರಿಹಾರ ನೀಡಿಲ್ಲ. ಜಲಾಶಯದಿಂದ ನೀರು ಬಿಡುವಾಗ ಆದ ಲೋಪದಿಂದ ಪ್ರವಾಹ ಬಂದಿತು. ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು

- ಎಂ.ಬಿ.ಪಾಟೀಲ, ಕಾಂಗ್ರೆಸ್‌

***

ಬರದ ನಾಡಿನ ದುಡ್ಡು ಪ್ರವಾಹ ಪೀಡಿತ ಪ್ರದೇಶಗಳಿಗೆ ವಿತರಣೆ ಮಾಡಲಾಗುತ್ತಿದೆ. ಇದರಿಂದ ನಮ್ಮ ಭಾಗಕ್ಕೆ ಅನ್ಯಾಯವಾಗಿದೆ

- ಕೆ.ಎಂ. ಶಿವಲಿಂಗೇಗೌಡ, ಜೆಡಿಎಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು