ಬೆಂಗಳೂರು: ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು (ವಿಐಎಸ್‌ಎಲ್) ಮುಚ್ಚುವುದಕ್ಕೆ ತೀರ್ಮಾನಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್, ಜೆಡಿಎಸ್ ಖಂಡಿಸಿವೆ.
ಭದ್ರಾವತಿ ಉಕ್ಕಿನ ಕಾರ್ಖಾನೆ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕರ್ನಾಟಕದಲ್ಲಿ ಕೈಗಾರಿಕಾ ಕ್ರಾಂತಿಗೆ ಕಾರಣವಾಗಿದ್ದ ಭದ್ರಾವತಿ ಉಕ್ಕಿನ ಕಾರ್ಖಾನೆಗೆ ಕೇಂದ್ರ ಸರ್ಕಾರ ಕೊನೆ ಮೊಳೆ ಹೊಡೆಯುತ್ತಿದೆ’ ಎಂದು ವಾಗ್ದಾಳಿ ನಡೆಸಿದೆ.
‘25 ಬಿಜೆಪಿ ಸಂಸದರು, ಡಬಲ್ ಇಂಜಿನ್ ಸರ್ಕಾರಗಳು ಕನ್ನಡಿಗರಿಗೆ ಕೊಟ್ಟ ಮತ್ತೊಂದು ದ್ರೋಹದ ಗಿಫ್ಟ್ ಇದು. ಕೆಡವುದಷ್ಟೇ ತಿಳಿದಿರುವ ಬಿಜೆಪಿಗೆ ಕಟ್ಟುವುದಿರಲಿ ಕಟ್ಟಿದ್ದನ್ನು ಉಳಿಸುವುದೂ ತಿಳಿದಿಲ್ಲ’ ಎಂದು ಕಾಂಗ್ರೆಸ್ ಟೀಕಿಸಿದೆ.
ಜೆಡಿಎಸ್ ಖಂಡನೆ: ಭದ್ರಾವತಿ ಉಕ್ಕಿನ ಕಾರ್ಖಾನೆಯನ್ನು (ವಿಐಎಸ್‌ಎಲ್) ಬಂದ್ ಮಾಡಲು ತೀರ್ಮಾನಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಟ್ವಿಟರ್‌ನಲ್ಲಿ ಜೆಡಿಎಸ್ ತೀವ್ರವಾಗಿ ಖಂಡಿಸಿದೆ.
ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಐಎಸ್ಎಲ್) ಮುಚ್ಚುವುದು ಖಚಿತ ಎಂದು ಕೇಂದ್ರ ಉಕ್ಕು ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕಬ್ಬಿಣದ ಅದಿರಿನ ಅಲಭ್ಯತೆ, ಹೆಚ್ಚಿನ ವೆಚ್ಚ ಮತ್ತು ಕಡಿಮೆ ಉತ್ಪಾದನೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
‘ಕರ್ನಾಟಕದ ಹೆಮ್ಮೆಯ ಸಂಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಕ್ಕೆ ಬಿಜೆಪಿ ಸರ್ಕಾರ ಕೊಟ್ಟಿರುವ ಕಾರಣಗಳು ಹಾಸ್ಯಾಸ್ಪದ. ದೇಶದ ಅತ್ಯುತ್ತಮ ಸಾರ್ವಜನಿಕ ಉದ್ದಿಮೆಗಳಲ್ಲಿ ಒಂದಾದ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಈ ಕಾರಣಗಳು ಅಡ್ಡಿ ಬರುವುದಿಲ್ಲವೆ? ಕಬ್ಬಿಣದ ಅದಿರಿನ ಮೂಲ ಇಲ್ಲ ಎಂಬುದು ಪರಮ ಸುಳ್ಳು’ ಎಂದು ಜೆಡಿಎಸ್ ಕಿಡಿಕಾರಿದೆ.
ರಾಜ್ಯದಲ್ಲಿ ಖಾಸಗಿ ಕಾರ್ಖಾನೆಗಳು ಗಣಿಗಳನ್ನು ಹೊಂದಿವೆ. ಆದರೆ, ಭಾರತೀಯ ಉಕ್ಕು ಪ್ರಾಧಿಕಾರದ (ಸೇಲ್) ವ್ಯಾಪ್ತಿಯಡಿಯಲ್ಲಿರುವ ನಮ್ಮ ವಿಐಎಸ್ಎಲ್‌ಗೆ ಕಬ್ಬಿಣದ ಗಣಿಗಳ ಪರವಾನಗಿ ಇಲ್ಲ! ಇದಕ್ಕಿಂತ ದೊಡ್ಡ ವ್ಯಂಗ್ಯ ಏನಿದೆ? ಕಬ್ಬಿಣ ಹೇರಳವಾಗಿ ಸಿಗುವ ಬಳ್ಳಾರಿ ಗಣಿ ಭದ್ರಾವತಿಯಿಂದ ಕೇವಲ 250 ಕಿಲೋಮೀಟರ್ ದೂರದಲ್ಲಿದೆ ಎಂದಿದೆ.
ಗಣಿ ಪರವಾನಗಿಯನ್ನು 2011ರಲ್ಲಿಯೇ ನೀಡಿದ್ದರೂ, ಈವರೆಗೂ ಬಿಜೆಪಿ ಸರ್ಕಾರ ಏನನ್ನೂ ಮಾಡಲಿಲ್ಲ. ಇದು ದೇಶದ ಎಲ್ಲ ಸಾರ್ವಜನಿಕೆ ಉದ್ಯಮಗಳನ್ನು ಖಾಸಗಿಯವರಿಗೆ ಕೊಡುವ ಹುನ್ನಾರವಲ್ಲದೆ ಮತ್ತೇನು? ಸರ್ಕಾರದಿಂದಲೇ ಒಂದಿಷ್ಟು ಬಂಡವಾಳ ಹೂಡಿದರೆ, ಸಂಸ್ಥೆಯನ್ನು ಮತ್ತೆ ಉಜ್ವಲವಾಗಿಸಬಹುದು ಎಂದು ಜೆಡಿಎಸ್ ಕಿಡಿಕಾರಿದೆ.
‘ಆತ್ಮನಿರ್ಭರ ಭಾರತ ಎಂದು ಬಿಟ್ಟಿ ಪ್ರಚಾರ ಪಡೆಯುವ ಡಬಲ್ ಎಂಜಿನ್ ಬಿಜೆಪಿ ಸರ್ಕಾರಗಳಿಗೆ ಪ್ರಜ್ಞಾವಂತಿಕೆ ಇದ್ದರೆ ಸಂಸ್ಥೆಯನ್ನು ಉಳಿಸಿಕೊಳ್ಳಬಹುದಿತ್ತು. ಅದು ಬಿಟ್ಟು, ಸುಳ್ಳುಗಳನ್ನು ಹೇಳಿ ಮುಚ್ಚುವ ನಿರ್ಧಾರ ವ್ಯಕ್ತಪಡಿಸುತ್ತಿರಲಿಲ್ಲ. ಇನ್ನೂ ರಾಜ್ಯ ಬಿಜೆಪಿ ಸರ್ಕಾರ, ಪ್ರಧಾನಿ ಮೋದಿ ಅವರ ತಾಳಕ್ಕೆ ಕುಣಿಯುತ್ತಿದೆ’ ಎಂದು ಜೆಡಿಎಸ್ ಗುಡುಗಿದೆ.
‘ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಣ್ಣೊರೆಸುವ ತಂತ್ರದಲ್ಲಿ ಮುಳುಗಿದ್ದಾರೆ. 25 ಸಂಸದರನ್ನು ಕರೆದುಕೊಂಡು ಹೋಗಿ, ಸಕಾರಣವಾಗಿ ಒತ್ತಾಯ ಹೇರಬೇಕಿತ್ತು. ಬೆನ್ನು ಮೂಳೆ ಇಲ್ಲದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅದು ದುಃಸ್ವಪ್ನವೇ ಸರಿ! 20,000 ಕುಟುಂಬಗಳ ಬದುಕು ಬೀದಿಪಾಲು ಮಾಡುವುದು ವಿಕೃತ ಆಡಳಿತವಲ್ಲದೇ ಮತ್ತೇನು?’ ಎಂದು ಜೆಡಿಎಸ್ ಪ್ರಶ್ನಿಸಿದೆ.
‘ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು (ವಿಐಎಸ್‌ಎಲ್) ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಈ ಎಲ್ಲ ಕ್ರಮಗಳು ವಿಫಲಗೊಂಡ ಕಾರಣ ಕಾರ್ಖಾನೆಯನ್ನು ಮುಚ್ಚಲು ತೀರ್ಮಾನಿಸಲಾಗಿದೆ’ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಜಿ.ಸಿ.ಚಂದ್ರಶೇಖರ್ ಹಾಗೂ ಲೋಕಸಭೆಯಲ್ಲಿ ಪ್ರಜ್ವಲ್ ರೇವಣ್ಣ ಕೇಳಿರುವ ಪ್ರತ್ಯೇಕ ಪ್ರಶ್ನೆಗಳಿಗೆ ಕೇಂದ್ರ ಉಕ್ಕು ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಲಿಖಿತ ಉತ್ತರ ನೀಡಿದ್ದಾರೆ.
‘ಸಂಸ್ಥೆಯನ್ನು ಖಾಸಗೀಕರಣ ಮಾಡಲು ಕೇಂದ್ರ ಸಚಿವ ಸಂಪುಟವು 2016ರಲ್ಲಿ ಒಪ್ಪಿಗೆ ನೀಡಿತ್ತು. ಸಂಸ್ಥೆಯನ್ನು ಸಂಪೂರ್ಣವಾಗಿ ಮಾರಾಟ ಮಾಡಲು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು (ಡಿಐಪಿಎಎಂ) ಈ ಹಿಂದೆ ಬಿಡ್ ಕರೆದಿತ್ತು. ಬಿಡ್‌ದಾರರು ಆಸಕ್ತಿ ವಹಿಸದ ಕಾರಣಕ್ಕೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ 2022ರ ನವೆಂಬರ್‌ನಲ್ಲಿ ಕೈ ಬಿಟ್ಟಿತ್ತು. ನಂತರ ಸರ್ಕಾರವು ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಆರಂಭಿಸಿತು’ ಎಂದೂ ಅವರು ಉತ್ತರದಲ್ಲಿ ತಿಳಿಸಿದ್ದಾರೆ.
ಪುನರುಜ್ಜೀವನದ ಭಾಗವಾಗಿ ಈ ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯಲ್ಲಿ 140 ಹೆಕ್ಟೇರ್ ಕಬ್ಬಿಣದ ಅದಿರು ಗಣಿಗಾರಿಕೆ ನೀಡಲು ಪ್ರಯತ್ನಿಸಲಾಗಿತ್ತು. ಆದರೆ, ದಾವೆಯ ಹಂತಕ್ಕೆ ಹೋಗಿದ್ದರಿಂದ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ. ಈ ವಿಚಾರ ಇಂದಿಗೂ ಇತ್ಯರ್ಥ ಆಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.