ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಲ್ಹಾದ ಜೋಶಿ ಕಚೇರಿಗೆ ₹ 2.5 ಕೋಟಿ ಲಂಚ: ಭೋಜೇಗೌಡ ಆರೋಪ

Last Updated 7 ಫೆಬ್ರುವರಿ 2023, 14:21 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗದ ವೈದ್ಯರೊಬ್ಬರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಚೇರಿಯಲ್ಲಿ ಲಂಚ ಪಡೆಯಲಾಗಿದೆ ಎಂದು ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಆರೋಪಿಸಿದರು.

ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್‌ ಅಯ್ಯಣ್ಣ ಎಂಬುವವರನ್ನು ಎನ್‌ಎಂಸಿ ಸದಸ್ಯರನ್ನಾಗಿ ನೇಮಿಸುವುದಕ್ಕಾಗಿ ಪ್ರಲ್ಹಾದ ಜೋಶಿಯವರ ಕಚೇರಿಯ ಸಿಬ್ಬಂದಿಗೆ ₹ 2.5 ಕೋಟಿ ಲಂಚ ಸಂದಾಯವಾಗಿದೆ’ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ಜೋಶಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿತೇಂದ್ರ ಕುಮಾರ್‌ ಎಂಬುವವರ ಬ್ಯಾಂಕ್‌ ಖಾತೆಗೆ 2021ರ ಜುಲೈನಲ್ಲಿ ₹ 2 ಕೋಟಿ ವರ್ಗಾವಣೆ ಮಾಡಲಾಗಿದೆ. ₹ 50 ಲಕ್ಷ ನಗದು ರೂಪದಲ್ಲಿ ನೀಡಲಾಗಿದೆ. ಹರೀಶ್‌ ಅಯ್ಯಣ್ಣ ಅವರನ್ನು ಎನ್‌ಎಂಸಿ ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬ ಕೋರಿಕೆಯನ್ನು ಪರಿಗಣಿಸುವುದಾಗಿ ಆಗ ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ.ಹರ್ಷವರ್ಧನ್‌ ಅವರು ಪ್ರಲ್ಹಾದ ಜೋಶಿಯವರಿಗೆ ಪತ್ರವನ್ನೂ ಬರೆದಿದ್ದರು ಎಂದು ಬ್ಯಾಂಕ್‌ ಪಾಸ್‌ ಪುಸ್ತಕ ಹಾಗೂ ಕೇಂದ್ರ ಸಚಿವರ ಪತ್ರಗಳನ್ನು ತೋರಿಸಿದರು.

‘ಜೋಶಿ ಅವರು ನಮ್ಮ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡರ ಕುಟುಂಬದ ಕುರಿತು ಲಘುವಾಗಿ ಮಾತನಾಡಿದ್ದಾರೆ. ಆದರೆ, ಅವರ ಕಚೇರಿಯಲ್ಲೇ ಲಂಚದ ಕಳ್ಳ ವ್ಯವಹಾರ ನಡೆದಿರುವ ಕುರಿತು ಏನು ಹೇಳುತ್ತಾರೆ? ಅವರ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವುದು ರಾಜ್ಯಕ್ಕೆ ಗೊತ್ತಾಗಬೇಕು. ಪರಿಶುದ್ಧರು ಎಂದು ಬೊಬ್ಬಿರಿದು ಹೇಳುವ ಅವರ ಕರ್ಮಕಾಂಡ ಇಲ್ಲಿದೆ. ಕೇಂದ್ರ ಸರ್ಕಾರದ ಹುದ್ದೆಗಳನ್ನು ಪ್ರಲ್ಹಾದ ಜೋಶಿಯವರ ಕಚೇರಿಯಲ್ಲಿ ಹಣಕ್ಕಾಗಿ ಬಿಕರಿಗಿಡಲಾಗಿದೆ’ ಎಂದು ಆರೋಪಿಸಿದರು.

ಈ ಪ್ರಕರಣದ ಕುರಿತು ಉನ್ನತಮಟ್ಟದ ತನಿಖೆ ನಡೆಸಬೇಕು. ಹಣ ನೀಡಿದವರು ಮತ್ತು ಪಡೆದವರು ಯಾರು? ಬಹುಕೋಟಿ ರೂಪಾಯಿ ಹಗರಣದ ನಿಜವಾದ ‘ಕಿಂಗ್‌ಪಿನ್‌’ ಯಾರು? ಇದರಲ್ಲಿ ಪ್ರಲ್ಹಾದ ಜೋಶಿಯವರ ಪಾತ್ರ ಏನು? ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಆಗ್ರಹಿಸಿದರು.

‘ಆರಂಭದಲ್ಲಿ ಎನ್‌ಎಂಸಿ ಸದಸ್ಯರನ್ನಾಗಿ ನೇಮಿಸುವ ಆಮಿಷವೊಡ್ಡಿ ಹಣ ಪಡೆಯಲಾಗಿತ್ತು. ನಂತರ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರನ್ನಾಗಿ ಮಾಡುವ ಭರವಸೆ ನೀಡಲಾಗಿತ್ತು. ಕೇಂದ್ರ ಆರೋಗ್ಯ ಸಚಿವರು ಜೋಶಿಯವರಿಗೆ ಬರೆದಿರುವ ಪತ್ರಕ್ಕೂ ಹಗರಣಕ್ಕೂ ಇರುವ ನಂಟಿನ ಕುರಿತು ಕೂಡ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT