ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ| ಪುನರಾವರ್ತಿತ 3,337 ವಿದ್ಯಾರ್ಥಿಗಳಿಗೆ ಅವಕಾಶ?

ಸಿಇಟಿ: ಹೈಕೋರ್ಟ್ ತೀರ್ಪು ಪಾಲಿಸಿದರೆ ರ‍್ಯಾಂಕ್‌ ಪಟ್ಟಿ ಬದಲು
Last Updated 7 ಸೆಪ್ಟೆಂಬರ್ 2022, 19:01 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ ತೀರ್ಪು ಅನ್ವಯವಾದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (‌ಕೆಇಎ) ಈಗಾಗಲೇ ಪ್ರಕಟಿಸಿದ ಸಿಇಟಿ ರ‍್ಯಾಂಕ್‌ ಪಟ್ಟಿ ಬದಲಾಗಲಿದ್ದು, 2020-21ನೇ ಸಾಲಿನ 3,337 ವಿದ್ಯಾರ್ಥಿಗಳು (ಪುನರಾವರ್ತಿತರು) 10 ಸಾವಿರ ಒಳಗಿನ ರ‍್ಯಾಂಕ್‌ ಪಡೆಯಲಿದ್ದಾರೆ.

2020-21ನೇ ಸಾಲಿನ ಒಟ್ಟು 24,074 ವಿದ್ಯಾರ್ಥಿಗಳು ಈ ಬಾರಿಯೂ ಸಿಇಟಿ ಬರೆದಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳ ಸಿಇಟಿ ಅಂಕ ಮಾತ್ರ ಪರಿಗಣಿಸಿ ‌ಕೆಇಎ ರ‍್ಯಾಂಕ್ ಪಟ್ಟಿ ಪ್ರಕಟಿಸಿತ್ತು. ಆ ಪಟ್ಟಿ ಪ್ರಕಾರ ಒಬ್ಬ ವಿದ್ಯಾರ್ಥಿ ಮಾತ್ರ 1,000 ರ‍್ಯಾಂಕಿನ ಒಳಗೆ ಸ್ಥಾನ ಪಡೆದಿದ್ದು, 62 ವಿದ್ಯಾರ್ಥಿಗಳು 10 ಸಾವಿರ ಒಳಗಿನ ರ‍್ಯಾಂಕ್‌ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ, 20,553 ವಿದ್ಯಾರ್ಥಿಗಳು 1 ಲಕ್ಷಕ್ಕಿಂತ ಮೇಲಿನ ರ‍್ಯಾಂಕ್ ಗಳಿಸಿದ್ದಾರೆ. 2020–21 ನೇ ಸಾಲಿನಪಿಯುಸಿ-ಸಿಇಟಿಯಲ್ಲಿನ ತಲಾ ಶೇ 50 ಅಂಕ ಪರಿಗಣಿಸಿ ಹೊಸ ರ‍್ಯಾಂಕ್ ಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್‌ ಸೂಚಿಸಿದೆ. ತೀರ್ಪು ಪಾಲನೆಯಾದರೆ ರ‍್ಯಾಂಕ್‌ ಪಟ್ಟಿ ಅದಲು– ಬದಲಾಗಲಿದೆ.

ಕೋವಿಡ್‌ ಕಾರಣ 2020–21ನೇ ಸಾಲಿನಲ್ಲಿ ದ್ವಿತೀಯ ಪರೀಕ್ಷೆ ನಡೆದಿರಲಿಲ್ಲ. ಹೀಗಾಗಿ, ಆ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುಸಿ ಫಲಿತಾಂಶ ಮತ್ತು ದ್ವಿತೀಯ ಪಿಯುಸಿ ಕೃಪಾಂಕ ಪರಿಗಣಿಸಿ ಅಂಕಗಳನ್ನು ನೀಡಿ, ಫಲಿತಾಂಶ ಪ್ರಕಟಿಸಲಾಗಿತ್ತು. ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ನೀಡಿದ ಅಂಕ ಪರಿಗಣಿಸಿದರೆ
ಈ ಸಾಲಿನ ಮಕ್ಕಳಿಗೆ ರ‍್ಯಾಂಕ್‌ ಗಳಿಕೆಯಲ್ಲಿ ಅನ್ಯಾಯವಾಗಲಿದೆ ಎಂಬ ಕಾರಣಕ್ಕೆ ರ‍್ಯಾಂಕ್ ಪಟ್ಟಿಗೆ ಈ ವಿದ್ಯಾರ್ಥಿಗಳ ಸಿಇಟಿ ಅಂಕವನ್ನು ಮಾತ್ರ ಕೆಇಎ ಪರಿಗಣಿಸಿತ್ತು. ಕೆಇಎಯ ಈ ಕ್ರಮವನ್ನು ಪ್ರಶ್ನಿಸಿ2020-21ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ ವಿದ್ಯಾರ್ಥಿಗಳ ಪರ ತೀರ್ಪು ನೀಡಿದೆ.

ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಂದಾಗಿರುವ ಕೆಇಎ, ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸದ ವಿದ್ಯಾರ್ಥಿಗಳ ಅಂಕಗಳನ್ನೂ ಸಿಇಟಿಗೆ ಪರಿಗಣಿಸಿದರೆ ಯಾವ ರೀತಿಯಲ್ಲಿ ‘ರ‍್ಯಾಂಕ್‌‘ ವ್ಯತ್ಯಾಸ ಆಗಬಹುದೆಂದು ಪಟ್ಟಿ ಮಾಡಿದೆ.

ಹೀಗೆ ಪಟ್ಟಿ ಮಾಡುವಾಗ ಮೂರು ಆಯಾಮಗಳನ್ನು ಕೆಇಎ ಪಟ್ಟಿ ಮಾಡಿದೆ. ಪುನರಾವರ್ತಿತ24,074 ವಿದ್ಯಾರ್ಥಿಗಳು ಸಿಇಟಿಯಲ್ಲಿ ಗಳಿಸಿದ ಅಂಕ ಪರಿಗಣಿಸಿದರೆ ಯಾವ ರ‍್ಯಾಂಕ್‌ ಪಡೆಯಬಹುದು? ಎಂಬುದು ಮೊದಲನೆಯದಾದರೆ, ಹೈಕೋರ್ಟ್‌ ಸೂಚಿಸಿದಂತೆ ‘ವಿದ್ಯಾರ್ಥಿಗಳು ಸಿಇಟಿಯಲ್ಲಿ ಪಡೆದಿರುವ ಶೇ 75 ಮತ್ತು ಪಿಯುಸಿಯ ಶೇ 25ರಷ್ಟು ಅಂಕ ಪರಿಗಣಿಸಿ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸಲು ಸಾಧ್ಯವೇ’ ಎಂಬ ಸೂತ್ರ ಅನುಸರಿಸಿದರೆ ಪಟ್ಟಿ ಏನಾಗಬಹುದು ಎಂಬುದು ಎರಡನೆಯ ಆಯಾಮವಾಗಿದೆ. ಹೈಕೋರ್ಟ್‌ ತೀರ್ಪಿನಂತೆ ಪಿಯುಸಿ–ಸಿಇಟಿಯಲ್ಲಿನ ತಲಾ ಶೇ 50 ಅಂಕ ಪರಿಗಣಿಸಿದರೆ ರ‍್ಯಾಂಕ್‌ ಯಾವ ರೀತಿಯ ಬದಲಾಗಬಹುದು ಎಂಬ ಮೂರನೇ ಆಯಾಮವಾಗಿದ್ದು, ಈ ಲೆಕ್ಕಾಚಾರದ ಮೇಲೆ ಹೊಸಪಟ್ಟಿಯನ್ನು ಕೆಇಎ ಸಿದ್ಧಪಡಿಸಿದೆ.

ಸಿಇಟಿ: ದಾಖಲೆ ಪರಿಶೀಲನೆ ಸೆ.9ಕ್ಕೆ ಮುಕ್ತಾಯ

ಬೆಂಗಳೂರು: ಸಿಇಟಿ ವಿದ್ಯಾರ್ಥಿಗಳ ವ್ಯಾಸಂಗ ಪ್ರಮಾಣಪತ್ರಗಳ ಪರಿಶೀಲನಾ ಕಾರ್ಯವನ್ನು ಸೆ.9ರವರೆಗೆ ವಿಸ್ತರಿಸಲಾಗಿದೆ.

ವಿದ್ಯಾರ್ಥಿಗಳು ತಮ್ಮ ವ್ಯಾಸಂಗ, ಗ್ರಾಮೀಣ, ಕನ್ನಡ ಮಾಧ್ಯಮ ಕಲಿಕಾ ಪ್ರಮಾಣಪತ್ರಗಳ ಪರಿಶೀಲನೆಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆಸೆ.8 ಹಾಗೂ 9ರಂದು ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ಭೇಟಿ ನೀಡಬಹುದು ಎಂದು ಕೆಇಎ ತಿಳಿಸಿದೆ.

***

ಸಿಇಟಿ ವಿಚಾರದಲ್ಲಿ ಹೈಕೋರ್ಟ್ ತೀರ್ಪಿನಿಂದ 1.50 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗಲಿದೆ. ಮತ್ತೊಮ್ಮೆ ಹೈಕೋರ್ಟ್‌ಗೆ ಮನವರಿಕೆ ಮಾಡಲು ತೀರ್ಮಾನಿಸಿದ್ದೇವೆ

- ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT