ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಗೊಂದಲ: ಪರಿಹಾರ ಸೂತ್ರ ಸಲಹೆ ನೀಡಿದ ಹೈಕೋರ್ಟ್‌

Last Updated 18 ಆಗಸ್ಟ್ 2022, 21:59 IST
ಅಕ್ಷರ ಗಾತ್ರ

ಬೆಂಗಳೂರು: ‘2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) 2020–21ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಅಂಕಗಳನ್ನು ಪರಿಗಣಿಸದೇ ಉಂಟಾಗಿರುವ ಗೊಂದಲಕ್ಕೆ ಹೈಕೋರ್ಟ್‌ ಪರಿಹಾರ ಸೂತ್ರವೊಂದನ್ನು ಸರ್ಕಾರದ ಮುಂದಿಟ್ಟಿದೆ.‘ಪಿಯು ಮತ್ತು ಸಿಇಟಿ ಅಂಕಗಳನ್ನು 25:75ರ ಅನುಪಾತದಲ್ಲಿ ಪರಿಗಣಿಸುವ ಮೂಲಕ ಸಹಮತದ ಸೂತ್ರವನ್ನು ಕಂಡುಕೊಳ್ಳಬಹುದು‘ ಎಂದು ಸರ್ಕಾರಕ್ಕೆ ಸಲಹೆ ನೀಡಿದೆ.

ಈ ಸಂಬಂಧ ಚಿಕ್ಕಮಗಳೂರಿನ ಆರ್.ಈಶ್ವರ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಸಲ್ಲಿಸಿರುವ ಏಳು ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈ ವೇಳೆನ್ಯಾಯಪೀಠ, ‘ಕಳೆದ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ಬರೆಯದೇ ಉತ್ತೀರ್ಣರಾಗಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳು ಪಡೆದ ಶೇ 25 ಮತ್ತು ಸಿಇಟಿಯ ಶೇ 75 ಅಂಕಗಳನ್ನು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಬಹುದು. 25:75ರ ಈ ಸೂತ್ರಕ್ಕೆ ಸರ್ಕಾರ ಒಪ್ಪಿದರೆ ಇದೊಂದು ಮಾದರಿಯಾಗಲಿದ್ದು, ಪ್ರಕರಣ ಶೇ 90ರಷ್ಟು ಬಗೆಹರಿದಂತಾಗುತ್ತದೆ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ‘ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಸಮಯ ಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು.

‘ಸಿಇಟಿ ರ‌್ಯಾಂಕ್‌ಗಳಿಗೆ 2021ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸುವಂತೆ ಕೆಇಎಗೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೂ ಸಿಇಟಿ ಕೌನ್ಸೆಲಿಂಗ್‌ಗೆ ತಡೆ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT