ಬುಧವಾರ, ಸೆಪ್ಟೆಂಬರ್ 28, 2022
26 °C

ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು: ಆರ್‌.ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಚಾಮರಾಜಪೇಟೆಯ ಮೈದಾನವು (ಈದ್ಗಾ ಮೈದಾನ) ಕಂದಾಯ ಇಲಾಖೆಗೆ ಸೇರಿದ್ದು, ಅಲ್ಲಿ ಯಾವುದೇ ಕಾರ್ಯಕ್ರಮ ನಡೆಸಬೇಕಿದ್ದರೂ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

‘ಈ ಮೈದಾನಕ್ಕೆ ಸಂಬಂಧಿಸಿದಂತೆ ವಿವಾದ ಇರುವುದರಿಂದ ಅಲ್ಲಿ ಧ್ವಜಾರೋಹಣ, ಗಣೇಶೋತ್ಸವ, ನಮಾಜ್‌, ಪ್ರಾರ್ಥನೆ ಹೀಗೆ ಏನೇ ಮಾಡುವುದಿದ್ದರೂ ಅನುಮತಿಗಾಗಿ ಕಂದಾಯ ಇಲಾಖೆಗೆ ಮನವಿ ಸಲ್ಲಿಸಬೇಕು. ಮನವಿ ಬಂದರೆ ಇಲಾಖೆ ತೀರ್ಮಾನ ತೆಗೆದುಕೊಳ್ಳುತ್ತದೆ. ಈವರೆಗೆ ಯಾರೂ ಮನವಿ ಸಲ್ಲಿಸಿಲ್ಲ. ಈ ಹಿಂದೆ ಬಿಬಿಎಂಪಿಯಿಂದ ಅನುಮತಿ ಪಡೆದುಕೊಳ್ಳುತ್ತಿದ್ದರು’ ಎಂದು ಆವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಮೈದಾನ ನಮ್ಮದೇ ಎಂದು ಯಾರೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಮೈದಾನ ಸರ್ಕಾರಕ್ಕೆ ಸೇರಿದ್ದು. ಯಾವುದೇ ಮನವಿಯನ್ನು ಕಾನೂನು ಪ್ರಕಾರವೇ ಪರಿಶೀಲನೆ ನಡೆಸಲಾಗುತ್ತದೆ. ಯಾರೂ ಯಾವುದೇ ರೀತಿಯ ಗೊಂದಲ ಸೃಷ್ಟಿಸುವುದು ಬೇಡ. ಸರ್ಕಾರ ಎಲ್ಲರ ಸರ್ಕಾರ. ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್‌’ ಎಂದು ಅಶೋಕ ಹೇಳಿದರು.

‘ಈ ಜಾಗ ತಮ್ಮದೆಂದು ಹೇಳುವವರು ದಾಖಲೆಗಳನ್ನು ಸಲ್ಲಿಸಬೇಕು ಎಂದು ಬಿಬಿಎಂಪಿ ತಿಳಿಸಿತ್ತು. ಆದರೆ, ಸೂಕ್ತ ದಾಖಲೆಗಳನ್ನು ಯಾರೂ ಸಲ್ಲಿಸಿಲ್ಲ. ಆದರೆ ಕಂದಾಯ ಇಲಾಖೆಗೆ ಸೇರಿದ್ದು ಎನ್ನುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಈವರೆಗೂ ಇದು ಬಿಬಿಎಂಪಿಗೆ ಸೇರಿದ್ದು ಎಂದು ಭಾವಿಸಲಾಗಿತ್ತು. ನ್ಯಾಯಾಲಯದ ಸೂಚನೆಯಂತೆ ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಕಂದಾಯ ಇಲಾಖೆಗೆ ಸೇರಿದ್ದು ಎಂಬುದು ಖಚಿತವಾಗಿದೆ’ ಎಂದು ಸಚಿವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು