ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಚಾಮುಂಡೇಶ್ವರಿ ಮಹಾರಥೋತ್ಸವ; ಸಾವಿರಾರು ಭಕ್ತರು ಸಾಕ್ಷಿ

Last Updated 9 ಅಕ್ಟೋಬರ್ 2022, 8:48 IST
ಅಕ್ಷರ ಗಾತ್ರ

ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ಮಹಾರಥೋತ್ಸವವು ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ‌ನೆರವೇರಿತು.

ಸಿಂಹವಾಹಿನಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿ ದೇವಿಗೆ ಬೆಳಿಗ್ಗೆ 7.10ರಿಂದ 8.10ರ ಶುಭ ಮುಹೂರ್ತದಲ್ಲಿ ವಿಶೇಷ ಪೂಜೆ, ಮಂಟಪ ಉತ್ಸವಗಳು ನೆರವೇರಿದವು. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ, ಶಾಸಕ ಜಿ.ಟಿ.ದೇವೇಗೌಡ ಅವರು, 8.10ಕ್ಕೆ ಪೂಜೆ ಸಲ್ಲಿಸಿದ ಬಳಿಕ ಉತ್ಸವದ ಮೂರ್ತಿಯನ್ನು ರಥದ‌ ಒಳಗೆ ಪ್ರತಿಷ್ಠಾಪಿಸಲಾಯಿತು. ಈ ವೇಳೆ ಭಕ್ತರು ಜಯಘೋಷ, ಹರ್ಷೋದ್ಗಾರ ಮೊಳಗಿಸಿದರು. ನಂತರ, ಯದುವೀರ ರಥದ ಹಗ್ಗ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ತಾಯಿ ಚಾಮುಂಡೇಶ್ವರಿ ಜಯವಾಗಲಿ ಘೋಷಣೆಯೊಂದಿಗೆ ಭಕ್ತರು ರಥವನ್ನು ಎಳೆದರು. ಸಿಡಿಮದ್ದಿನ ಸದ್ದು, ವಾದ್ಯಗೋಷ್ಠಿಗಳ ನಾದ, ಕಲಾತಂಡಗಳು ಪ್ರದರ್ಶನವು ರಥೋತ್ಸವದ ರಂಗು ಹೆಚ್ಚಿಸಿತು.

ರಥಬೀದಿಯ ಇಕ್ಕೆಲಗಳಲ್ಲಿ ‌ನೆರೆದಿದ್ದ ಭಕ್ತಸಾಗರದ ಮಧ್ಯೆ ಚಾಮುಂಡೇಶ್ವರಿ ರಥ ಸಾಗಿತು. ಈ ವೇಳೆ ಭಕ್ತರು ಹಣ್ಣು- ಜವನವನ್ನು ರಥದತ್ತ ಎಸೆದು ಭಕ್ತಿ ಸಮರ್ಪಿಸಿದರು. 50 ನಿಮಿಷಗಳವರೆಗೆ ಸಾಗಿ ಬಂದ ರಥ ಚಾಮುಂಡೇಶ್ವರಿ ದೇವಸ್ಥಾನದ‌ ಪ್ರವೇಶದ್ವಾರ ತಲುಪುವಷ್ಟರಲ್ಲಿ 9 ಗಂಟೆ ತಲುಪಿತ್ತು. ಈ ವೇಳೆ ಅಲ್ಲಿ‌ ನೆರೆದಿದ್ದ ಭಕ್ತರು, ರಥದ ಹಗ್ಗ‌ ಮುಟ್ಟಿ ಪುನೀತರಾದರು. ಮತ್ತೆ ಕೆಲವರು, ರಥಕ್ಕೆ‌ ನಮಸ್ಕರಿಸಿದರು. ರಥಕ್ಕೆ ಸಿಂಗರಿಸಲಾಗಿದ್ದ ಹೂವುಗಳನ್ನು ಪಡೆಯಲು‌ ಮುಗಿಬಿದ್ದರು.

ಪುನೀತ್ ರಾಜ್ ಕುಮಾರ್ ಅಭಿಮಾನ: ರಥೋತ್ಸವಕ್ಕೆ ಸಾಗಿಬಂದ ಚಾಮುಂಡೇಶ್ವರಿ ದೇವಿ ರಥದ‌ ಮುಂಭಾಗದಲ್ಲಿ ಪುನೀತ್ ರಾಜ್‌ಕುಮಾರ್‌ ಫೋಟೊ ಇದ್ದ ಬಾವುಟ ಹಾರಿಸಿ ಅಭಿಮಾನಿಗಳು ಸಂತಸಪಟ್ಟರು.

ಜನಸಾಗರ: ಕೋವಿಡ್‌ನಿಂದ ಎರಡು ವರ್ಷ ರಥೋತ್ಸವ ಸರಳವಾಗಿ ನೆರವೇರಿತ್ತು. ಈ‌ ಬಾರಿ‌ ನಾಡಹಬ್ಬ ದಸರಾದಂತೆ, ರಥೋತ್ಸವವೂ ಅದ್ಧೂರಿಯಾಗಿ ನೆರವೇರಿತು. ಬೆಳಿಗ್ಗೆ 5ರಿಂದಲೇ, ಭಕ್ತರು ಕಾಲ್ನಡಿಗೆ ಹಾಗೂ ವಾಹನಗಳಲ್ಲಿ ಬೆಟ್ಟದತ್ತ ಬಂದಿದ್ದರು. ರಥೋತ್ಸವ ಮುಗಿದರೂ, ಭಕ್ತರು ದೇವಸ್ಥಾನದತ್ತ ಬರುತ್ತಿದ್ದರು. ಇದರಿಂದ, ವಾಹನ ದಟ್ಟಣೆ ಕಂಡುಬಂತು. ಅಲ್ಲದೇ, ಪಾರ್ಕಿಂಗ್ ಸ್ಥಳವೂ ಭರ್ತಿಯಾಗಿ, ವಾಹನ ನಿಲ್ಲಿಸಲು ಜನರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT