ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

815 ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

ಐದು ವರ್ಷಗಳ ಪ್ರಗತಿ ವಿವರ ನೀಡಿದ ಭ್ರಷ್ಟಾಚಾರ ನಿಗ್ರಹ ದಳ
Last Updated 24 ಫೆಬ್ರುವರಿ 2021, 16:25 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಾರಂಭವಾದ ದಿನದಿಂದ ಈವರೆಗೆ 1,568 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, 815 ಸರ್ಕಾರಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯಗಳಿಗೆ ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಐದು ವರ್ಷಗಳಲ್ಲಿ ₹ 120 ಕೋಟಿ ವೆಚ್ಚ ಮಾಡಿ ನಾಲ್ವರಿಗೆ ಮಾತ್ರ ಶಿಕ್ಷೆಯಾಗಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಪದಾಧಿಕಾರಿಗಳು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

‘ಈವರೆಗೆ 1,542 ಅಧಿಕಾರಿಗಳನ್ನು ಬಂಧಿಸಲಾಗಿದೆ. ಎಸಿಬಿ ವರದಿ ಆಧಾರದಲ್ಲಿ 1,199 ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. 940 ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಪ್ರಸ್ತಾವ ಸಲ್ಲಿಸಲಾಗಿದೆ’

ಎಸಿಬಿ ಸಲ್ಲಿಸಿರುವ ಆರೋಪಪಟ್ಟಿಗಳನ್ನು ಆಧರಿಸಿ ಆರೋಪಿಗಳ ವಿರುದ್ಧ 35 ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. 557 ಪ್ರಕರಣಗಳ ವಿಚಾರಣೆ ವಿವಿಧ ಹಂತದಲ್ಲಿವೆ. ಮುರು ಪ್ರಕರಣಗಳಲ್ಲಿ ಆರೋಪ ಸಾಬೀತಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ₹ 150 ಕೋಟಿ ಮೌಲ್ಯದ 16 ಲಕ್ಷ ಚದರ ಅಡಿ ವಿಸ್ತೀರ್ಣದ ಟಿಡಿಆರ್‌ ನೀಡಿರುವ ಆರೋಪದಡಿ ಹತ್ತು ಪ್ರಕರಣಗಳನ್ನು ಎಸಿಬಿಯ ಬೆಂಗಳೂರು ನಗರ ಠಾಣೆಯಲ್ಲಿ ದಾಖಲು ಮಾಡಲಾಗಿದೆ.15 ಅಧಿಕಾರಿಗಳು ಮತ್ತು 59 ಖಾಸಗಿ ವ್ಯಕ್ತಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಮೂರು ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, ಏಳು ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ ಎಂದು ಎಸಿಬಿ ಅಧಿಕಾರಿಗಳು ವಿವರ ನೀಡಿದ್ದಾರೆ.

ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಅವರನ್ನು ಲಂಚ ಪ್ರಕರಣದಲ್ಲಿ ಬಂಧಿಸಿದ ಬಳಿಕ ಬೃಹತ್‌ ಅಕ್ರಮ ಪತ್ತೆ ಮಾಡಲಾಗಿದೆ. ಎಸಿಬಿ ವರದಿ ಆಧಾರದಲ್ಲಿ ಬಿಬಿಎಂಪಿಯ 40 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ನಡೆಯುತ್ತಿದ್ದ ಅಕ್ರಮವನ್ನು ಪತ್ತೆಮಾಡಿದ್ದು, ರೈತರಿಗೆ ₹ 1.6 ಕೋಟಿ ಹಣ ಕೊಡಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ವಿರುದ್ಧದ ಪ್ರಕರಣದ ತನಿಖೆಯಲ್ಲಿ 43 ಫಲಾನುಭವಿಗಳು ಮತ್ತು ಬಾಗಲಕೋಟೆಯ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಕಚೇರಿ ಅಧಿಕಾರಿಯ ವಿರುದ್ಧದ ಲಂಚ ಪ್ರಕರಣದ ತನಿಖೆಯಲ್ಲಿ 70 ಫಲಾನುಭವಿಗಳಿಗೆ ಚೆಕ್‌ ಕೊಡಿಸಲಾಗಿದೆ. 133 ಸರ್ಕಾರಿ ಕಚೇರಿಗಳಲ್ಲಿ ದಿಢೀರ್‌ ಶೋಧ ನಡೆಸಿದ್ದು, ₹ 17.29 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT