ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮಂಗಳಕ್ಕೆ ಶ್ರಮಿಸಿದ ಸರ್ವ ಸಮುದಾಯಗಳ ಸಂತ

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಾಲ್ಕು ಬಾರಿ ಮಹಾಮಸ್ತಕಾಭಿಷೇಕ
Last Updated 24 ಮಾರ್ಚ್ 2023, 4:00 IST
ಅಕ್ಷರ ಗಾತ್ರ

ಶ್ರವಣಬೆಳಗೊಳದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ಜೈನ ಧರ್ಮದ ಜತೆಗೆ ಸರ್ವ ಧರ್ಮ ಸಮನ್ವಯ ಸಾಧಿಸುವಲ್ಲಿ ಆದರ್ಶಪ್ರಾಯರು. ಅವರು ಎಲ್ಲ ಸಮುದಾಯಗಳಿಗೆ ಸಂತರು, ಎಲ್ಲ ಸ್ವಾಮೀಜಿಗಳಿಗೆ ಮಾದರಿಯಾದವರು.

1949ರ ಮೇ 3ರಂದು ಕಾರ್ಕಳ ತಾಲ್ಲೂಕಿನ ವರಾಂಗದಲ್ಲಿ ಹುಟ್ಟಿದ ಸ್ವಾಮೀಜಿ ಎಳೆ ವಯಸ್ಸಿನಲ್ಲೇ ದೀಕ್ಷೆ ಪಡೆದವರು. ಸಣ್ಣ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ನಿಭಾಯಿಸಿದವರು. ಅಯೋಧ್ಯೆ ರಥ ಸಂಚಾರದ ಮಾದರಿಯಲ್ಲಿ ‘ಜನಮಂಗಳ ಕಲಶ’ ಸಂಚಾರದ ಬಹುದೊಡ್ಡ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದವರು. ಕ್ರಿ.ಶ. 981ರಲ್ಲಿ ಸ್ಥಾಪನೆ ಆಗಿರುವ ಬಾಹುಬಲಿ ಮೂರ್ತಿಯ ಮಹಾಮಜ್ಜನ ಮಹೋತ್ಸವಕ್ಕೆ (1981ನೇ ಇಸ್ವಿ) ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಅವರ ಸಂಘಟನಾ ಚಾತುರ್ಯ ಮನಗಂಡ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪೂಜ್ಯರಿಗೆ ‘ಕರ್ಮಯೋಗಿ’ ಎಂಬ ಉಪಾಧಿಯನ್ನು ನೀಡಿದ್ದರು.

ನಾವು ಬಾಲ್ಯದಲ್ಲಿ ಮೂಡುಬಿದಿರೆ ಮಠದಲ್ಲಿ ಅವರನ್ನು ಭೇಟಿ ಮಾಡಿದ್ದೆವು. 1988ರಲ್ಲಿ ಕಾರ್ಕಳದಲ್ಲಿ ಮಹಾಮಸ್ತಕಾಭಿಷೇಕ. ಆಗ ನಾವೆಲ್ಲ ಚಿಕ್ಕ ಮಕ್ಕಳು. ನಮಗೆಲ್ಲ ಅವರು ಧವಲಾ ಗ್ರಂಥದ ಬಗ್ಗೆ ತಿಳಿ ಹೇಳಿದ್ದರು. ಧವಲಾ ಗ್ರಂಥವನ್ನು ಆಧುನಿಕ ಕನ್ನಡಕ್ಕೆ ಅನುವಾದ ಮಾಡಿದವರು ಸುಬ್ಬಯ್ಯ ಶಾಸ್ತ್ರಿಗಳು. ಸುಬ್ಬಯ್ಯ ಶಾಸ್ತ್ರಿಗಳ ಮೊಮ್ಮಗನೆಂದು ನನಗೆ ವಿಶೇಷ ಪ್ರೀತಿ ತೋರಿದರು. ಧವಲಾ ಗ್ರಂಥವನ್ನು ಓದಿಕೊಂಡಿದ್ದ ಸ್ವಾಮೀಜಿ, ನಂತರ ಧವಲಾ ಯೋಜನೆಯಡಿಯಲ್ಲಿ 39 ಸಂಪುಟಗಳನ್ನು ಹೊರತರುವಲ್ಲಿ ಶ್ರಮಿಸಿದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಪ್ರಾಕೃತ ಭಾಷಾ ಸಮ್ಮೇಳನ, ಸಂಸ್ಕೃತ ಸಮ್ಮೇಳನ, ವಿದ್ವತ್ ಗೋಷ್ಠಿ ಹೀಗೆ ಎಲ್ಲಕ್ಕೂ ಪ್ರೋತ್ಸಾಹ ನೀಡುವ ಜತೆಗೆ ಸಂಘಟನೆಗೆ ಸಹಕಾರ ಮಾಡುತ್ತಿದ್ದರು. ಲಂಡನ್ ವಿಶ್ವವಿದ್ಯಾಲಯದಲ್ಲಿ ಜೈನ ಅಧ್ಯಯನ ಕೇಂದ್ರ ಸ್ಥಾಪನೆಗೆ ಪ್ರೇರಕರು. ಅಮೆರಿಕದಲ್ಲಿ ನಡೆಯುವ ದ್ವೈವಾರ್ಷಿಕ ಸಭೆಗೆ ಮಾರ್ಗದರ್ಶಕರಾಗಿದ್ದರು.

ಸರ್ವಧರ್ಮ ಸಮನ್ವಯಕ್ಕಾಗಿ ಹಲವಾರು ಕಡೆಗಳಲ್ಲಿ ಪ್ರವಾಸ ಮಾಡಿದ್ದರು, ವಿದೇಶ ಪ್ರವಾಸಕ್ಕೂ ಹೋಗಿದ್ದರು. ‘ವಿದೇಶದಲ್ಲಿ ಏನೂ ಇಲ್ಲ, ನಾವಿಲ್ಲಿ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ’ ಎಂದು ಸ್ವಾಮೀಜಿ ಯಾವಾಗಲೂ ಹೇಳುತ್ತಿದ್ದರು. ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ಅಹರ್ನಿಶಿ ದುಡಿದರು. ವಿಶೇಷವಾಗಿ ಪ್ರಾಥಮಿಕ ಶಿಕ್ಷಣ, ಎಂಜಿನಿಯರಿಂಗ್ ಕಾಲೇಜು, ನರ್ಸಿಂಗ್ ಕಾಲೇಜಿನ ಸ್ಥಾಪನೆ ಮಾಡಿ ಶೈಕ್ಷಣಿಕ ಕ್ರಾಂತಿ ಮಾಡಿದರು. ಜನರ ಆರೋಗ್ಯ ಕಾಳಜಿಗಾಗಿ ಸಂಚಾರಿ ಆಸ್ಪತ್ರೆ ಯೋಜನೆ ರೂಪಿಸಿದರು.

ಪ್ರತಿ ಮಹಾಮಸ್ತಕಾಭಿಷೇಕವನ್ನೂ ಜನರಿಗೆ ಪ್ರಿಯವಾಗುವ ಹಾಗೆ, ಜನರ ಮನತಟ್ಟುವ ಹಾಗೆ, ಲೋಕಪ್ರಿಯ ಆಗುವ ಹಾಗೆ ಮಾಡುತ್ತಿದ್ದರು. ಮಹಾಮಸ್ತಕಾಭಿಷೇಕ ಕೇವಲ ಆಧ್ಯಾತ್ಮಿಕವಲ್ಲ, ಅದಕ್ಕೆ ಸಾಮಾಜಿಕ ಆಯಾಮಗಳಿವೆ ಎಂಬುದು ಸ್ವಾಮೀಜಿಯವರ ನಂಬಿಕೆಯಾಗಿತ್ತು. ಯಾವುದೇ ಒಂದು ಕಾರ್ಯ ಇರಲಿ ಅದರಿಂದ ಜನಮಂಗಳ ಎಂಬುದು ಅವರ ಆಶಯವಾಗಿತ್ತು. ಸದಾ ಅಭಿವೃದ್ಧಿ ಪಥದ ಬಗ್ಗೆ ಯೋಚನೆ ಮಾಡುತ್ತಿದ್ದರು. ಶ್ರವಣಬೆಳಗೊಳದ ವಿಕಾಸ ಅಂದರೆ ಅದು ಅಲ್ಲಿಗಷ್ಟೇ ಸೀಮಿತವಲ್ಲ, ಅದರಿಂದಾಗಿ ಇಡೀ ಕರ್ನಾಟಕ ಬೆಳಗಬೇಕು ಎಂಬ ದೂರದೃಷ್ಟಿ ಹೊಂದಿದ್ದರು. ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅವರು ರೂಪಿಸಿದ ಅನೇಕ ಅಭಿವೃದ್ಧಿ ಯೋಜನೆಗಳು ಈಗಲೂ ಅಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗಿವೆ.

ಸಾಹಿತ್ಯದ ಬಗ್ಗೆ ಅಪಾರ ಪ್ರೀತಿ ಇತ್ತು. ಕತೆ, ಕಾದಂಬರಿ ಬರೆಯಲು ಅನೇಕರನ್ನು ಪ್ರೇರೇಪಿಸುತ್ತಿದ್ದರು. ಕುವೆಂಪು, ಕಾರಂತರು, ಜೆ.ಪಿ.ರಾಜರತ್ನಂ ಇಂತಹ ಅನೇಕ ಬರಹಗಾರರನ್ನು ಮೆಚ್ಚಿದ್ದರು. ವಿದ್ವಾಂಸರು, ಸಾಹಿತಿಗಳನ್ನು ತುಂಬ ಗೌರವಿಸುತ್ತಿದ್ದರು. ‘ಪ್ರಜಾವಾಣಿ’ ಪತ್ರಿಕೆ ಬಗ್ಗೆ ಅವರಿಗೆ ವಿಶೇಷ ಅಭಿಮಾನ ಇತ್ತು. ಪತ್ರಿಕೆಯಲ್ಲಿ ಪ್ರಕಟವಾದ ಈ ಹಿಂದೆ ನಡೆದ ಮಹಾ
ಮಸ್ತಕಾಭಿಷೇಕದ ಎಲ್ಲ ವರದಿಗಳನ್ನು ಜತನದಿಂದ ಸಂಗ್ರಹಿಸಿಟ್ಟಿದ್ದಾರೆ. ಪತ್ರಿಕೆಗಳನ್ನು ಖರೀದಿಸಿ ಓದುತ್ತಿದ್ದರು. ಅದಕ್ಕಾಗಿ ಒಂದು ವಿಭಾಗವೇ ಇತ್ತು. ‘ಗೊಮ್ಮಟವಾಣಿ’ ಪತ್ರಿಕೆಯ ಏಳಿಗೆಗೆ ಅವರೇ ಕಾರಣರು. ಇಂಗ್ಲಿಷ್‌ ಭಾಷೆಯಲ್ಲಿ ‘ಗೊಮ್ಮಟವಾಣಿ’ ಪ್ರಕಟಣೆಗೆ ಪ್ರೋತ್ಸಾಹ ನೀಡಿದರು.

ಪೇಜಾವರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಸ್ವಾಮೀಜಿ, ತರಳಬಾಳು ಸ್ವಾಮೀಜಿ ಹೀಗೆ ಅನೇಕ ಸ್ವಾಮೀಜಿಗಳ ಜತೆಗೆ ಒಡನಾಟ ಇತ್ತು. ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದ–ಭಾವ ಇಲ್ಲದೆ ಸರ್ವಧರ್ಮ ಸಮನ್ವಯದ ಬಗ್ಗೆ ಮಾತನಾಡುತ್ತಿದ್ದರು. ‘ನಾವು ಹುಟ್ಟಿ ಬಂದಿದ್ದು ಜಗತ್ತಿನ ಶ್ರೇಯಸ್ಸಿಗಾಗಿ. ಆ ಕೆಲಸವನ್ನು ಮಾಡಬೇಕು’ ಎಂದು ಸದಾ ಹೇಳುತ್ತಿದ್ದರು. ಪಶು–ಪಕ್ಷಿ, ಪ್ರಾಣಿಗಳ ಬಗೆಗೆ ಕಾಳಜಿ ಇತ್ತು. ಅಂತರ್ಜಲ ಸಂರಕ್ಷಣೆಗೆ ಯೋಜನೆ ರೂಪಿಸಿದ್ದರು. ಜ್ಞಾನದಾಹಿ ಅವರು. ಯಾವಾಗಲೂ ಗ್ರಂಥಗಳು, ಪೂಜಾ ಕ್ರಮಗಳ ಬಗ್ಗೆ ಚರ್ಚಿಸುತ್ತಿದ್ದರು. ಸಾಧು ಸಂತರ ರಕ್ಷಣೆ ಬಗ್ಗೆ ಮಾತನಾಡುತ್ತಿದ್ದರು.

ಸಾಮಾಜಿಕ ಕಾರ್ಯದ ತುಡಿತ ಸದಾ ಇತ್ತು. ಮೂಡುಬಿದಿರೆ ಬಗ್ಗೆ ವಿಶೇಷ ಆಸ್ಥೆ. ಯಾವುದಾದರೂ ಕೆಲಸ ಆಗಬೇಕೆಂದರೆ ನಿಗದಿತ ಅವಧಿಯಲ್ಲಿ ಅದು ಪೂರ್ಣಗೊಳ್ಳಬೇಕು.
ಮೂಡುಬಿದಿರೆಯಲ್ಲಿ ಪಿಯು ಕಾಲೇಜು ಪ್ರಾರಂಭಿಸಲು ತಾಕೀತು ಮಾಡಿದ್ದರು. 2012ರಲ್ಲಿ ಅವರ ಇಚ್ಛೆಯಂತೆ ಕಾಲೇಜು ಸ್ಥಾಪನೆ ಮಾಡಿದೆವು. ಕಾಲೇಜಿಗೆ ಬಂದ ಅವರು ತುಂಬ ಸಂತಸಪಟ್ಟರು.

ಆಚಾರ್ಯ ವಿದ್ಯಾಸಾಗರರಿಂದ ಸಲ್ಲೇಖನವನ್ನು ಸ್ವೀಕರಿಸಿದ್ದರು. ಅದು 12 ವರ್ಷಗಳ ಸಲ್ಲೇಖನ ವ್ರತವಾಗಿತ್ತು. ವ್ರತವನ್ನು ಸ್ವೀಕರಿಸಿ ಈಗ ಮೂರು ವರ್ಷ ಆಗಿತ್ತು ಅಷ್ಟೆ.

ರಾಜ್ಯದ ಜೈನ ಮಠಗಳ ಪಟ್ಟಾಚಾರ್ಯ ಪೀಠಗಳು ಖಾಲಿ ಇದ್ದಾಗ, 12 ಭಟ್ಟಾರಕರಿಗೆ ದೀಕ್ಷೆ ಕೊಟ್ಟು, ಮಠಗಳನ್ನು ಉದ್ಧಾರ ಮಾಡಿದರು. ಅಲ್ಲಿ ಧರ್ಮ ಸಂಚಲನ ಮಾಡಿದರು. ರಾಜ್ಯದಲ್ಲಿ, ದೇಶದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಆದಾಗ ಅದಕ್ಕೆ ಸ್ಪಂದಿಸಿ, ದಾನಿಗಳ ಮೂಲಕ ನೆರವಾದರು. ಒಬ್ಬ ಶ್ರೇಷ್ಠ ಸಂತನನ್ನು ನಾವು ಕಳೆದುಕೊಂಡಿದ್ದೇವೆ ಎಂಬ ಅನಾಥ ಭಾವ ಕಾಡುತ್ತಿದೆ. ಆದರೆ, ಅವರ ಆದರ್ಶಗಳು ನಮ್ಮ ಜೊತೆಗಿವೆ, ಅದರೊಂದಿಗೆ ನಾವು ಸಾಗೋಣ.

ನಿರೂಪಣೆ: ಸಂಧ್ಯಾ ಹೆಗಡೆ

***

ಜಿನಾಲಯಗಳ ಉದ್ಧಾರಕ

ಸ್ವಾಮೀಜಿಯ ಪೂರ್ವಾಶ್ರಮದ ಹೆಸರು ರತ್ನಾಕರ. 1969ರ ಡಿಸೆಂಬರ್‌ 12ರಂದು ಕ್ಷುಲ್ಲಕ ದೀಕ್ಷೆ ಸ್ವೀಕರಿಸಿದ್ದರು. ಇಪ್ಪತ್ತನೇ ವಯಸ್ಸಿನಲ್ಲಿ, ಅಂದರೆ 1970ರಲ್ಲಿ ಧರ್ಮಾಚಾರ್ಯ ಪೀಠವನ್ನು ಏರಿದ್ದರು. ಬಳಿಕ ಎಸ್.ಡಿ.ಜೆ.ಎಂ.ಐ ಟ್ರಸ್ಟ್ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಅದನ್ನು ಪ್ರಾಥಮಿಕ ಶಿಕ್ಷಣದಿಂದ ಎಂಜಿನಿಯರಿಂಗ್ ಕಾಲೇಜು ಶಿಕ್ಷಣದವರೆಗೆ ಬೆಳೆಸಿದ್ದರು.

ಜೈನ ಧರ್ಮಶಾಸ್ತ್ರಕ್ಕಷ್ಟೇ ಸೀಮಿತವಾಗಿರಲಿಲ್ಲ. ಅವರು ಇತಿಹಾಸ ತಜ್ಞರು, ತತ್ವಜ್ಞಾನಿಗಳು, ಶ್ರೇಷ್ಠ ವಾಗ್ಮಿಗಳೂ ಆಗಿದ್ದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಇತಿಹಾಸ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ತತ್ವಶಾಸ್ತ್ರ, ಕನ್ನಡ, ಸಂಸ್ಕೃತ ಮತ್ತು ಪ್ರಾಕೃತದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದರು.

ನೂರಾರು ಜಿನಾಲಯಗಳನ್ನು ಜೀರ್ಣೋದ್ಧಾರಗೊಳಿಸಿ, ನಿತ್ಯ ಪೂಜೆ ನಡೆಯುವಂತೆ ಮಾಡಿದ್ದರು. ಸುತ್ತಲಿನ 10ಕ್ಕೂ ಹೆಚ್ಚು ಗ್ರಾಮಗಳನ್ನು ದತ್ತು ಪಡೆದು, ಮೂಲ ಸೌಲಭ್ಯಗಳನ್ನು ಕಲ್ಪಿಸಿದ್ದರು. ಸಹಸ್ರಮಾನದ ಮಸ್ತಕಾಭಿಷೇಕದಲ್ಲಿ ಸಾವಿರ ಮಂದಿಗೆ ಉಚಿತ ನೇತ್ರ ತಪಾಸಣೆ ಶಿಬಿರವನ್ನೂ ನಡೆಸಿದ್ದರು. 1975ರಲ್ಲಿ ಮಹಾವೀರ ನಿರ್ವಾಣದ 2500ನೇ ವರ್ಷದ ನೆನಪಿಗಾಗಿ ದಕ್ಷಿಣ ಭಾರತದಾದ್ಯಂತ ನಡೆದ ಧರ್ಮ ಚಕ್ರಯಾತ್ರೆಯ ಕೀರ್ತಿಯೂ ಅವರಿಗೇ ಸಲ್ಲುತ್ತದೆ.

ಆರೋಗ್ಯ, ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದ ಸ್ವಾಮೀಜಿ, ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌, ನರ್ಸಿಂಗ್‌ ಕಾಲೇಜು, ಗೊಮ್ಮಟೇಶ್‌ ವಿದ್ಯಾಪೀಠ, ಪಾಕೃತ ಭಾಷೆಯ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ಪ್ರಾಕೃತ ಜ್ಞಾನ ಭಾರತ ಟ್ರಸ್ಟ್‌ ಸ್ಥಾಪಿಸಿದ್ದರು. ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಪ್ರಾಕೃತ ಅಧ್ಯಯನ –ಸಂಶೋಧನಾ ಸಂಸ್ಥೆಯಲ್ಲಿ ತಾಳೆಗರಿಗಳನ್ನು ಸಂರಕ್ಷಿಸುವ, ಪ್ರಾಕೃತ ಗ್ರಂಥಗಳ ಕನ್ನಡ ಅನುವಾದ ಯೋಜನೆಯನ್ನು ರೂಪಿಸಿದ್ದರು. ಆಯುರ್ವೇದ ಆಸ್ಪತ್ರೆ, ಸಂಚಾರಿ ಆಸ್ಪತ್ರೆ, ಲ್ಯಾಬ್‌ಗಳನ್ನು ಸ್ಥಾಪಿಸಿದ್ದರು. ಮಹಾಮಸ್ತಕಾಭಿಷೇಕದಲ್ಲಿ ಉಳಿದ ಹಣದಿಂದ ಆಧುನಿಕ ಮಕ್ಕಳ ಆಸ್ಪತ್ರೆ ನಿರ್ಮಿಸಿದ್ದರು. ಧವಲಾ, ಜಯಧವಲಾ, ಮಹಾಧವಲಾ ಗ್ರಂಥಗಳ 42 ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿ, ಪ್ರಕಟಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT